ಅಂಗನವಾಡಿ ಕಾರ್ಯಕರ್ತೆಯರ ಸೇವೆ ಅನನ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಪುಷ್ಪಲತಾ ಜಿ ರಾಯ್ಕರ್ ಶ್ಲಾಘನೆ

af09cd87-a522-4c33-a1f3-63942fc9bf9c (1)
Published on

ಬೆಂಗಳೂರು ಗ್ರಾಮಾಂತರ: ಕರೊನಾ ನಿಯಂತ್ರಣಕ್ಕೆ ಶ್ರಮಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರ ಆರೋಗ್ಯದ ದೃಷ್ಟಿಯಿಂದ ಮಾಸ್ಕ್, ಸ್ಯಾನಿಟೈಸರ್, ಥರ್ಮಲ್ ಸ್ಕ್ರೀನಿಂಗ್ ಯಂತ್ರ ನೀಡಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಪುಷ್ಪಲತಾ ಜಿ. ರಾಯ್ಕರ್ ತಿಳಿಸಿದರು.

ದೇವನಹಳ್ಳಿಯ ಬೀರಸಂದ್ರದ ಜಿಲ್ಲಾಡಳಿತ ಭವನದಲ್ಲಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಚೇರಿಯಲ್ಲಿ ಬಿಎಚ್‌ಇಎಲ್ ಸಂಸ್ಥೆಯ ಐಎಸ್‌ಜಿ ಘಟಕದಿಂದ ಸಿಎಸ್‌ಆರ್ ಯೋಜನೆಯಲ್ಲಿ ನೀಡಲಾದ ಆರೋಗ್ಯ ಸಾಮಗ್ರಿ ಸ್ವೀಕರಿಸಿ ಮಾತನಾಡಿದರು. ಬಿಎಚ್‌ಇಎಲ್ ಸಂಸ್ಥೆಯಿಂದ ಜಿಲ್ಲೆಯಲ್ಲಿ ಈಗಾಗಲೇ ಅಂಗನವಾಡಿ ಕಟ್ಟಡಗಳ ನಿರ್ಮಾಣ, ಅಂಗನವಾಡಿ ಮಕ್ಕಳಿಗೆ ಆಟದ ಸಾಮಗ್ರಿ ನೀಡಲಾಗಿದ್ದು, ಕೋವಿಡ್ ಸಂಕಷ್ಟದ ಸಮಯದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಆರೋಗ್ಯ ರಕ್ಷಣೆಗೆ ಮುಂದಾಗಿರುವುದು ಶ್ಲಾಘನೀಯ ಕೆಲಸ ಎಂದು ಹೇಳಿದರು.

ಅಂಗನವಾಡಿ ಕಾರ್ಯಕರ್ತೆಯರು ಗ್ರಾಮಾಂತರ ಪ್ರದೇಶದಲ್ಲಿ ಮನೆ ಮನೆಗೆ ಭೇಟಿ ನೀಡಿ ಕೋವಿಡ್ ಜಾಗೃತಿ ಹಾಗೂ ನಿಯಂತ್ರಣಕ್ಕೆ ಶ್ರಮಿಸುತ್ತಿದ್ದಾರೆ. ಇಂಥವರ ಆರೋಗ್ಯ ರಕ್ಷಣೆ ಹಿನ್ನೆಲೆಯಲ್ಲಿ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಿಸಲಾಗುವುದು ಎಂದರು.

ಬಿಎಚ್‌ಇಎಲ್ ಸಂಸ್ಥೆಯ ಐಎಸ್‌ಜಿ ಘಟಕದ ಅಧಿಕಾರಿ ಚಂದ್ರಶೇಖರ್ ಮಾತನಾಡಿ, ಕರೊನಾ ನಿಯಂತ್ರಣಕ್ಕೆ ಅಂಗನವಾಡಿ ಕಾರ್ಯಕರ್ತೆಯರು ಹಗಲಿರುಳು ಶ್ರಮಿಸುತ್ತಿದ್ದಾರೆ. ಈ ಮಹಾಮಾರಿ ವಿರುದ್ಧ ಎಲ್ಲರೂ ಹೋರಾಡಬೇಕು ಮತ್ತೆ ಎಲ್ಲವೂ ಮೊದಲಿನಂತಾಗಬೇಕು ಎಂದು ಆಶಿಸಿದರು.

50 ಥರ್ಮಲ್ ಸ್ಕ್ರೀನಿಂಗ್ ಯಂತ್ರಗಳು, ಹತ್ತು ಸಾವಿರ ಮಾಸ್ಕ್ ಹಾಗೂ 500 ಎಂಎಲ್ನ 11 ಹಾಗೂ 5 ಲೀಟರ್‌ನ 79 ಸ್ಯಾನಿಟೈಸರ್ ಬಾಟಲ್ ಹಸ್ತಾಂತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net