

ಮೈಸೂರು: ಅಂಗನವಾಡಿ ಕೇಂದ್ರಗಳಿಗೆ ಪರ್ಯಾಯವಾಗಿ ಶಿಶುಪಾಲನ ಕೇಂದ್ರ ಹಾಗೂ ಶಾಲಾಪೂರ್ವ ಶಿಕ್ಷಣ ತರಗತಿಗಳನ್ನು ಆರಂಭಿಸುತ್ತಿರುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್‌ನಿಂದ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿತು.
ಹಳೇ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಸಹಾಯಕಿಯರು, ಗೌರವಧನ ಹೆಚ್ಚಳ ಮಾಡಬೇಕು, ನಿವೃತ್ತಿಯಾದವರಿಗೆ ಗ್ಯಾರಂಟಿ ಹಣ ದೊರೆಯುವಂತೆ 6ನೇ ವೇತನ ಆಯೋಗದಲ್ಲಿ ಜಾರಿಗೊಳಿಸುವಂತೆ ಒತ್ತಾಯಿಸಿದರು.
ಸದೃಢವಾದ ಅಂಗನವಾಡಿ ವ್ಯವಸ್ಥೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವಾಗ ಅದಕ್ಕೆ ಪರ್ಯಾಯವಾಗಿ ಬೇರೆ ಬೇರೆ ಇಲಾಖೆಗಳು ಶಿಶುಪಾಲನಾ ಕೇಂದ್ರ ಹಾಗೂ ಶಾಲಾಪೂರ್ವ ತರಗತಿಗಳನ್ನು ಪ್ರಾರಂಭಿಸಿದರೆ ಅನಗತ್ಯವಾಗಿ ಸರ್ಕಾರದ ಹಣ ಪೋಲಾಗುತ್ತದೆ. ಜತೆಗೆ ಹಂತ ಹಂತವಾಗಿ ಅಂಗನವಾಡಿ ಕೇಂದ್ರಗಳಿಗೆ ಬರುವ ಮಕ್ಕಳ ಸಂಖ್ಯೆ ಕಡಿಮೆಯಾಗಿ ಅಂಗನವಾಡಿ ಕೇಂದ್ರಗಳು ದುರ್ಬಲಗೊಳ್ಳುತ್ತವೆ ಎಂದು ದೂರಿದರು.
ಅಂಗನವಾಡಿ ಕಾರ್ಯಕರ್ತೆಯರಿಗೆ 15 ಸಾವಿರ ರೂ., ಸಹಾಯಕಿಯರಿಗೆ 10 ಸಾವಿರ ರೂ., ಗೌರವಧನ ಹೆಚ್ಚಿಸುವ ಮತ್ತು ನಿವೃತ್ತರಿಗೆ 3 ಲಕ್ಷ ರೂ, ಇಡುಗಂಟು ನೀಡುವ 6ನೇ ಗ್ಯಾರಂಟಿ ಜಾರಿಗೊಳಿಸಬೇಕು. ಅಂಗನವಾಡಿಗೆ ಪರ್ಯಾಯವಾಗಿ ಬೇರೆ ಕೇಂದ್ರಗಳನ್ನು ತೆರೆಯದೆ ಅಂಗನವಾಡಿಗಳಲ್ಲೇ ಶಾಲಾಪೂರ್ವ ತರಗತಿಗಳನ್ನು ನಡೆಸಲು ಸವಲತ್ತು ನೀಡಬೇಕು. ನಿವೃತ್ತರಾದ ಎಲ್ಲರಿಗೂ ಗ್ರಾಚ್ಯುಟಿ ನೀಡಲು ಕ್ರಮ ಕೈಗೊಳ್ಳಬೇಕು. 5 ಸಾವಿರ ರೂ.ಮಾಸಿಕ ಪಿಂಚಣಿ ನೀಡಬೇಕು ಎಂದು ಒತ್ತಾಯಿಸಿದರು.
ಮೊಟ್ಟೆ ಟೆಂಡರ್ ರದ್ದುಪಡಿಸಿ ಹಿಂದಿನಂತೆ ಬಾಲವಿಕಾಸ ಸಮಿತಿಯ ಜಂಟಿ ಖಾತೆಗೆ ಮುಂಗಡವಾಗಿ ಹಣ ಹಾಕಬೇಕು. ಖಾಲಿ ಇರುವ ಹುದ್ದೆಗಳನ್ನು 2-3 ತಿಂಗಳಲ್ಲಿ ಭರ್ತಿ ಮಾಡಬೇಕು. ಗ್ಯಾಸ್ ಸಿಲಿಂಡರ್ ರಿಫಿಲ್ಲಿಂಗ್ ಹಣವನ್ನು 3 ತಿಂಗಳಿಗೊಮ್ಮೆ ಕಡ್ಡಾಯವಾಗಿ ನೀಡಬೇಕು. ಕೂಡಲೇ ಮುಂಬಡ್ತಿ ಆದೇಶ ನೀಡಬೇಕು. ಇಎಸ್‌ಐ, ಪಿಎಫ್ ಸೌಲಭ್ಯ ಒದಗಿಸಬೇಕು. ಕಾರ್ಯಕರ್ತೆಯರು, ಸಹಾಯಕಿಯರಿಗೆ ಬಿಪಿಎಲ್ ಕಾರ್ಡ್ ನೀಡಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಎಐಟಿಯುಸಿ ಮುಖಂಡ ಡಿ.ಜಗನ್ನಾಥ್, ಫೆಡರೇಷನ್ ಮುಖಂಡರಾದ ಪಿ.ಎಂ.ಸರೋಜಮ್ಮ, ಎಸ್.ಮಹದೇವಮ್ಮ, ಸುನಂದಾ, ಭಾಗ್ಯಾ, ಶಿವಮ್ಮ, ಸುಮಾ, ಚಂದ್ರಮ್ಮ, ರೂಪಾ, ಪುಟ್ಟಮ್ಮ, ಶಿವಮ್ಮ, ಚಂದ್ರಿಕಾ ಇತರರು ಇದ್ದರು.