ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ ಅಂತ್ಯ

ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ ಅಂತ್ಯ
Published on

ಹಾಸನ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಜಿಲ್ಲಾಧಿಕಾರಿ ಕಚೇರಿ ಎದುರು ನಡೆಸಿದ ಅಹೋರಾತ್ರಿ ಧರಣಿ ಎರಡು ದಿನಕ್ಕೆ ಅಂತ್ಯಗೊಂಡಿದೆ.

ಮೊದಲ ದಿನ ಮಂಗಳವಾರ ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಹೋರಟ ಬೃಹತ್ ಮೆರವಣಿಗೆಯಲ್ಲಿ ನಾರಾರು ಸಂಖ್ಯೆಯ ಅಂಗನವಾಡಿ ಕಾರ್ಯಕರ್ತೆಯರು ಬಳಿಕ ಜಿಲ್ಲಾಧಿಕಾರಿ ಆವಣರಲ್ಲಿ ಜಮಾಯಿಸಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಹೋರಾತ್ರಿ ಧರಣಿ ನಡೆಸಿದರು. ಬುಧವಾರ ಜಿಲ್ಲಾಡಳಿತ ಅಧಿಕಾರಿಗಳು ಮನವಿ ಸಲ್ಲಿಸಿ ಧರಣಿಯನ್ನು ವಾಪಸ್ಸು ಪಡೆದರು.

ಸರ್ಕಾರಕ್ಕೆ ಗಡುವು ನೀಡಿ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಕೆ.ಟಿ ಶಾಂತಲಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು, ರಾಜ್ಯ ಹಾಗೂ ಸ್ಥಳೀಯ ಮಟ್ಟದಲ್ಲಿ ಆಗುತ್ತಿರುವ ಅಂಗನವಾಡಿ ಕಾರ್ಯಕರ್ತೆಯರ ಸಮಸ್ಯೆಗಳ ಬಗ್ಗೆ ಮಾನವರಿಗೆ ಮಾಡಿಕೊಟ್ಟರು.

ಈ ವೇಳೆ ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಬಿ.ಎಂ ಪುಷ್ಪ ಮಾತನಾಡಿ, ಅಂಗನವಾಡಿ ನೌಕರರ ಹಲವು ಬೇಡಿಕೆಗಳ ಬಗ್ಗೆ ಕಳೆದ ಅನೇಕ ವರ್ಷಗಳಿಂದ ಹೋರಾಟ ನಡೆಯುತ್ತದೆ. ಆದರೆ, ಈವರೆಗೂ ಆಳುವ ಸರ್ಕಾರಗಳು ಕೇವಲ ಮೂಗಿಗೆ ತುಪ್ಪ ಸವರುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಂಗನವಾಡಿ ಕಾರ್ಯಕರ್ತೆಯರಿಗೆ ಸಿಗುತ್ತಿರುವುದು ತಿಂಗಳಿಗೆ ಕೇವಲ 11 ಸಾವಿರ ಗೌರವಧನ. ಅದನ್ನೂ ವಿಳಂಬ ಮಾಡುತ್ತಿದ್ದು, ಪ್ರತಿ ತಿಂಗಳ 5 ರೊಳಗೆ ನೀಡಬೇಕು. 5 ವರ್ಷದಿಂದ ನಿವೃತ್ತಿಯಾಗಿರುವವರಿಗೆ ನಿವೃತ್ತಿ ಹಣ ಪಾವತಿಯಾಗಿಲ್ಲ. ಅದನ್ನು ಕೂಡಲೇ ಕೊಡಬೇಕು. ಜಿಲ್ಲೆಯೊಂದರಲ್ಲೇ 2 ಸಾವಿರ ಹುದ್ದೆ ಖಾಲಿ ಇದ್ದು, 6 ತಿಂಗಳಿಗೊಮ್ಮೆ ನೇಮಕಾತಿ ಮಾಡಬೇಕು ಎಂದು ಒತ್ತಾಯಿಸಿದರು.

ಹಾಗೆಯೇ ಪ್ರಭಾರ ಭತ್ಯೆ ಹೆಚ್ಚಿಸಬೇಕು, ಸಾದಿಲ್ವಾರು ಹಣವನ್ನು 83 ರೂ. ನಿಂದ ಹೆಚ್ಚಳ ಮಾಡಬೇಕು. ಅಂಗನವಾಡಿ ಕೇಂದ್ರಗಳ ನಿರ್ವಹಣೆಗೆ ಅನುದಾನ ನೀಡಬೇಕು. ಮೊಟ್ಟೆ ಹಣವನ್ನು ಮುಂಗಡವಾಗಿ ಹಾಕಬೇಕು. ಹಾಲಿ 5 ತಿಂಗಳ ಮೊಟ್ಟೆ ಹಣ ಬಾಕಿ ಇದೆ. ಇದರಿಂದ ಫಲಾನುಭವಿಗಳಿಗೆ ಸಮಯಕ್ಕೆ ಸರಿಯಾಗಿ ಮೊಟ್ಟೆ ವಿತರಿಸಲು ಆಗುತ್ತಿಲ್ಲ. ಇದರಿಂದ ನಮಗೆ ಹೊರೆಯಾಗಿದೆ ಎಂದು ದೂರಿದರು.

ಮೊದಲೇ ಆರ್ಥಿಕ ಸಮಸ್ಯೆಯಲ್ಲಿ ಸಿಲುಕಿದ್ದರೂ, ಅಂಗನವಾಡಿ ಫಲಾನುಭವಿಗಳಾದ ಮಕ್ಕಳು ಮತ್ತು ಗರ್ಭಿಣಿಯರಿಗೆ ಕೋಳಿ ಮೊಟ್ಟೆ ವಿತರಿಸಬೇಕೆನ್ನುವುದು ಸರ್ಕಾರದ ಯೋಜನೆ. ಆದರೆ ಈ ಮೊಟ್ಟೆಗಳನ್ನು ಇಲಾಖೆ ಸರಬರಾಜು ಮಾಡುವುದಿಲ್ಲ. ಕಾರ್ಯಕರ್ತೆಯರೇ ಖರೀದಿಸಿ ವಿತರಿಸಬೇಕು. ಇದಕ್ಕೆ ಕಾರ್ಯಕರ್ತೆಯರೇ ಮುಂಗಡವಾಗಿ ತಮ್ಮ ಸ್ವಂತ ಹಣ ಬಳಸಿ ಮೊಟ್ಟೆ ಖರೀದಿಸಿ ವಿತರಿಸಬೇಕು. ಹಾಗಾಗಿ ಮುಂಗಡವಾಗಿ ಹಣ ನೀಡಬೇಕು ಎಂದು ಆಗ್ರಹಿಸಿದರು.

ಅಧಿಕಾರಿಗಳು, ಸರ್ಕಾರ ಯಾವ ಹೊಣೆಗಾರಿಕೆಯನ್ನೂ ಹೊತ್ತುಕೊಳ್ಳದೆ ಎಲ್ಲವನ್ನೂ ಅಂಗನವಾಡಿ ಕಾರ್ಯಕರ್ತೆಯರ ಮೇಲೆ ಹೊರಿಸುವ ಪ್ರವೃತ್ತಿ ಮುಂದುವರೆದಿದೆ. ಇದು ನಿಲ್ಲಬೇಕು, ನಾವು ಕಳೆದ ಒಂದೂವರೆ ವರ್ಷದಿಂದ ಅಂಗನವಾಡಿಗಳಿಗೆ ಬಾಡಿಗೆ ಹಣ ಪಾವತಿಸಿಲ್ಲ. ಇದರಿಂದ ಬಾಡಿಗೆಯವರು ಕಿರುಕುಳ ಕೊಡುತ್ತಾರೆ. ಹಾಗೆಯೇ ಅಂಗನವಾಡಿ ಕೇಂದ್ರಗಳಿಗೆ ಪೀಠೋಪಕರಣ, ಪಾಠೋಪಕರಣ, ಆಲ್ಮೇರಾ, ಟೇಬಲ್, ಕುರ್ಚಿಗಳನ್ನು ವಿತರಣೆ ಮಾಡಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಉಪಾಧ್ಯಕ್ಷರಾದ ಶಾರದಾ,ಕಾಮಾಕ್ಷಿ ರಾಜು ,ಎಚ್.ಟಿ.ಮೀನಾಕ್ಷಿ, ಕಾರ್ಯದರ್ಶಿಗಳಾದ ಟಿ.ಎಚ್. ಜಯಂತಿ , ಕೆ.ಪಿ.ವೀಣಾ ,ಸುಮಿತ್ರಾ , ವಿಣಾ, ಗೀತಾ, ಜರೀನಾ ಹಾಗು ಬಿ.ಕೆ.ಸಂಗೀತಾ, ಪೂರ್ಣಿಮಾ ಇನ್ನಿತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net