ಅಂಗನವಾಡಿ ಕಾರ್ಯಕರ್ತೆ ಸಾವು ತನಿಖೆ ನಡೆಸಿ

2207Klb02
Published on

ಕಲಬುರಗಿ: ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಹೊನ್ನಕಿರಣಗಿಯ ಅಂಗನವಾಡಿ ಕಾರ್ಯಕರ್ತೆ ಅಕ್ಕನಾಗಮ್ಮ ಅವರಿಗೆ ಚಿಕಿತ್ಸೆ ನೀಡದೆ ನಿರ್ಲಕ್ಷೃ ಮಾಡಿರುವ ಇಎಸ್ಐಸಿ ಮತ್ತು ಜಿಮ್ಸ ವೈದ್ಯರ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಮತ್ತು ಅವರ ಕುಟುಂಬಕ್ಕೆ ಕರೊನಾ ಸೇನಾನಿಗಳಿಗೆ ನೀಡುವಂತೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಅಂಗನವಾಡಿ ಕಾರ್ಯಕರ್ತೆಯರು ಬುಧವಾರ ಪ್ರತಿಭಟನೆ ನಡೆಸಿದರು.
ಸಿಐಟಿಯು ಮತ್ತು ಕೆಪಿಆರ್ಎಸ್ ಸಂಘಟನೆ, ಅಂಗನವಾಡಿ ಕಾರ್ಯಕರ್ತೆಯರು ಹೋರಾಟಗಾರ ಮಾರುತಿ ಮಾನ್ಪಡೆ ನೇತೃತ್ವದಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಿಸಿಎಂ ಗೋವಿಂದ ಕಾರಜೋಳ ಮತ್ತು ಸಂಸದ ಡಾ.ಉಮೇಶ ಜಾಧವ್ ಅವರ ನಿಷ್ಕ್ರಿಯತೆಗೆ ಆಕ್ರೋಶ ವ್ಯಕ್ತಪಡಿಸಿದರು. ಬರಿ ಸುಳ್ಳು ಹೇಳುತ್ತಿದ್ದಿರಿ, ಎಲ್ಲಿದ್ದ್ದಿರಿ ಬರ್ರಿ ಎಂದು ಘೋಷಣೆ ಕೂಗಿದರು.
ಉಸಿರಾಟ ಸಮಸ್ಯೆ ಕಾಣಿಸಿಕೊಂಡ ಬೆನ್ನಲ್ಲಿಯೇ ಹೊನ್ನಕಿರಣಗಿಯಿಂದ ಅಕ್ಕನಾಗಮ್ಮ ಅವರನ್ನು ಕಲಬುರಗಿಯ ಜಿಮ್ಸ ಆಸ್ಪತ್ರೆಗೆ ತೋರಿಸಿದರೂ ದಾಖಲಿಸಿಕೊಳ್ಳಲಿಲ್ಲ. ನಂತರ ಇಎಸ್ಐಸಿಗೆ ಕರೆದುಕೊಂಡು ಹೋದರೂ ಸ್ಪಂದಿಸಲಿಲ್ಲ. ಅವರ ಪುತ್ರ ನಾನು ಸಹ ವೈದ್ಯನಿದ್ದೇನೆ ಎಂದು ಗೋಗರೆದರೂ ದಾಖಲಿಸಿಕೊಳ್ಳಲಿಲ್ಲ ಎಂದು ಮಾನ್ಪಡೆ ಆರೋಪಿಸಿದರು. ಈ ಕುರಿತು ತನಿಖೆ ನಡೆಸಿ ತಪ್ಪು ಮಾಡಿರುವ ಕರ್ತವ್ಯದಲ್ಲಿದ್ದ ವೈದ್ಯರು ಹಾಗೂ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು, ಮೃತರ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಮನವಿ ಸ್ವೀಕರಿಸಲು ಜಿಲ್ಲಾಧಿಕಾರಿ ಬರಬೇಕು ಎಂದು ಪಟ್ಟು ಹಿಡಿದು ಡಿಸಿ ಕಚೇರಿ ಮೆಟ್ಟಲು ಮೇಲೆ ಕುಳಿತುಕೊಂಡರು. ತಹಸೀಲ್ದಾರ್, ಎಡಿಸಿ ಬಂದರೂ ಬೇಡ. ಡಿಸಿಯೇ ಬರಬೇಕು ಎಂದು ಘೋಷಣೆ ಕೂಗಿದರು. ಕೊನೆಗೆ ಪೊಲೀಸರು ಮಧ್ಯ ಪ್ರವೇಶಿಸಿ ಸಮಾಧಾನ ಪಡಿಸಿದರು, ಎಡಿಸಿ ಮನವಿ ಸ್ವೀಕರಿಸಿ ಕ್ರಮ ಕೈಗೊಳ್ಳುವ ಕುರಿತು ಡಿಸಿಯವರ ಗಮನಕ್ಕೆ ತರುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಟ್ಟರು.
ಪತ್ರಿಭಟನೆಯಲ್ಲಿ ಗೌರಮ್ಮ ಪಾಟೀಲ್, ಗಂಗಮ್ಮ ಬಿರಾದಾರ, ಅಶೋಕ ಮ್ಯಾಗೇರಿ, ಶಿವಾನಂದ ಕೌಲಗಾ, ಶಾಂತಪ್ಪ ಪಾಟೀಲ್, ಸುಧಾಮ ಧನ್ನಿ, ಪಾಂಡುರಂಗ ಮಾವಿನಕರ್, ಪದ್ಮಾವತಿ, ಮಲ್ಲಮ್ಮ, ಗೌರಿಬಾಯಿ, ಹುಸೇನಬಿ, ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net