ಅಂಗದೊಳಗಣ ಸವಿ ಕವನ ಸಂಕಲನ ಬಿಡುಗಡೆ

11 vikram 4
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಕವಯಿತ್ರಿಗೆ ದೈನಿಕವೇ ದೈವಿಕವಾದ ಬಗೆ, ದೈನಂದಿನ ಕೆಲಸ ಕಾರ್ಯಗಳೇ ಕಾವ್ಯದ ವಸ್ತುವಾಗಿ ಧಕ್ಕಿದ ಬಗೆಯನ್ನು ಅಂಗದೊಳಗಣ ಸವಿ ಕವನ ಸಂಕಲನದಲ್ಲಿ ತಿಳಿಸಲಾಗಿದೆ. ವಸ್ತುವಿನಲ್ಲಿ ನಾವೀನ್ಯತೆ ಜತೆಗೆ ಸ್ವಾನುಭವ ಸಾರ್ವತ್ರಿಕಗೊಳಿಸುವ ಪ್ರಯತ್ನವನ್ನು ಕವಯತ್ರಿ ಹಲವು ಕವಿತೆಗಳಲ್ಲಿ ಸಾಧಿಸಿದ್ದಾರೆ ಎಂದು ಕತೆಗಾರ ಡಾ. ಶ್ರೀಧರ ಬಳಗಾರ ಹೇಳಿದರು.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಅಡವಿ ಪ್ರಕಾಶನ, ಅರು ಪ್ರಕಾಶನ, ಬನಹಟ್ಟಿ ಆಶ್ರಯದಲ್ಲಿ ಇಲ್ಲಿನ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಉಮಾದೇವಿ ಬಾಗಲಕೋಟ ಅವರ ಅಂಗದೊಳಗಣ ಸವಿ ಕವನ ಸಂಕಲನ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಕೃತಿ ಕುರಿತು ರಾಣಿ ಚೆನ್ನಮ್ಮ ವಿವಿಯ ಡಾ. ಶೋಭಾ ನಾಯಕ ಮಾತನಾಡಿ, ಕವಿತೆಗಳಲ್ಲಿ ಅಡಕಗೊಂಡ ಸ್ತ್ರೀ ಸಂವೇದನೆಗಳತ್ತ ಗಮನ ಸೆಳೆದರು. ಪಕ್ಕದ ಮಲಯಾಳಂ, ಮರಾಠಿ ಕವಿಗಳಷ್ಟು ಪ್ರಖರ ಮುಕ್ತತೆಗೆ ತೆರೆದುಕೊಂಡಿಲ್ಲದ, ಕನ್ನಡ ಮಹಿಳಾ ಕಾವ್ಯ ಲೋಕದ ಕುರಿತು ತುಸು ಖೇದವಿದೆ ಎಂದ ಅವರು, ಉಮಾದೇವಿ ತನ್ನ ಖಾಸಗಿ ಬದುಕಿನ ಎಳೆಗಳನ್ನು ಅಲ್ಲಲ್ಲಿ ಮುಕ್ತವಾಗಿ ಪೋಣಿಸಿರುವುದು ಪ್ರಶಂಸನೀಯ ಎಂದರು.
ಕೌಶಲಾಭಿವೃದ್ಧಿ ಅಧಿಕಾರಿ ಡಾ. ಡಾ. ಬಸವಪ್ರಭು ಹಿರೇಮಠ, ಗುರು ಹಿರೇಮಠ, ಮಹಾಂತೇಶ ನರೇಗಲ್ಲ, ಡಾ.ಡಿ.ಎ.ಬಾಗಲಕೋಟ ಮಾತನಾಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ಅಧ್ಯಕ್ಷತೆ ವಹಿಸಿದ್ದರು.
ಶರಣಮ್ಮ ಗೋರೆಬಾಳ, ಬಿ.ಜಿ. ಬಾರ್ಕಿ, ಡಾ.ಶಿವಾನಂಧ ಶೆಟ್ಟರ್, ಪ್ರೊ. ಕೆ.ಎಸ್. ಕೌಜಲಗಿ, ಬಿ. ಮಾರುತಿ, ಐ.ಎಚ್. ಕಡ್ಲಿಮಟ್ಟಿ, ಎಸ್.ಎಂ. ಜತ್ತಿ, ರವೀಂದ್ರ ದ್ಯಾಬೇರಿ, ರಾಜೇಂದ್ರ ಬಾಗಲಕೋಟ, ಚನ್ನಪ್ಪ ಅಂಗಡಿ, ಶಂಕರ ಕುಪ್ಪಸ, ಬಸವರಾಜ ಬಾಗಲಕೋಟ, ಇತರರು ಇದ್ದರು.
ಮಾರ್ತಾಂಡಪ್ಪ ಕತ್ತಿ ಸ್ವಾಗತಿಸಿದರು. ಪ್ರತಿಭಾ ಪಾಟೀಲ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net