

ವಿಜಯಪುರ: ಮನುಷ್ಯ ಜೀವನ ಸಾರ್ಥಕವಾಗಬೇಕಾದರೆ, ಉತ್ತಮ ಆರೋಗ್ಯ ಮತ್ತು ಉತ್ತಮ ನಡವಳಿಕೆ ಮುಖ್ಯವಾಗಿವೆ. ಉತ್ತಮ ಆರೋಗ್ಯ ಮತ್ತು ನಡವಳಿಕೆ ಮನುಷ್ಯನ ವ್ಯಕ್ತಿತ್ವವನ್ನು ರೂಪಿಸುತ್ತವೆ ಎಂದು ಬಿಎಲ್‌ಡಿಇ ಡೀಮ್ಡ್ ವಿಶ್ವವಿದ್ಯಾಲಯದ ಡಾ.ವೈ.ಎನ್. ಜಯರಾಜ ಹೇಳಿದರು.
ವಿಶ್ವ ಅಂಗಾಂಗದಿನ ಹಿನ್ನೆಲೆಯಲ್ಲಿ ನಗರದ ಬಿಎಲ್‌ಡಿಇ ಡೀಮ್ಡ್ ವಿಶ್ವವಿದ್ಯಾಲಯದಿಂದ ಗುರುವಾರ ಹಮ್ಮಿಕೊಂಡಿದ್ದ ಅಂಗಾಂಗ ದಾನದ ಜಾಗೃತಿ ಜಾಥಾಗೆ ವಿವಿ ಸಮಕುಲಾಧಿಪತಿ ಡಾ.ವೈ.ಎನ್. ಜಯರಾಜ, ಕುಲಪತಿ ಡಾ. ಆರ್. ಎಸ್. ಮುಧೋಳ, ಪ್ರಾಚಾರ್ಯ ಡಾ. ಅರವಿಂದ ಪಾಟೀಲ ಜಂಟಿಯಾಗಿ ಚಾಲನೆ ನೀಡಿದ ವೇಳೆ ಅವರು ಮಾತನಾಡಿದರು.
ಜನರಿಗೆ ರಕ್ತದಾನ ಮತ್ತು ನೇತ್ರದಾನದ ಬಗ್ಗೆ ಅರಿವು ಇದೆ. ಆದರೆ, ಜೀವರಕ್ಷಕ ಇತರ ಅಂಗಗಳ ದಾನದ ಮಹತ್ವ ಗೊತ್ತಿಲ್ಲ. ಅಷ್ಟೇ ಅಲ್ಲ, ಅಂಗದಾನದ ವಿಧಾನ ಮತ್ತು ಉಪಯೋಗದ ಕುರಿತು ಜನರಿಗೆ ಮಾಹಿತಿಯ ಕೊರತೆ ಇದೆ. ಈ ಬಗ್ಗೆ ಜನಜಾಗೃತಿ ಮೂಡಿಸುವ ಮೂಲಕ ನಾನಾ ಅಂಗಾಂಗ ವೈಫಲ್ಯದಿಂದ ಬಳಲುತ್ತಿರುವವರಿಗೆ ಜೀವದಾನ ನೀಡಬಹುದಾಗಿದೆ ಎಂದರು.
ಸಂಬಂಧಿಕರಿಗೆ ಕಿಡ್ನಿ ಕೊಡುವುದರಿಂದ ಜೀವ ಉಳಿಸಬಹುದು. ವ್ಯಕ್ತಿ ಮೃತಪಟ್ಟರೆ ಆತನ ಅಂತ್ಯಕ್ರಿಯೆಯೊಂದಿಗೆ ಕೊನೆಯ ದಾರಿ ಎಂಬ ಮೂಢನಂಬಿಕೆಯಿಂದ ಹೊರಬರಬೇಕಿದೆ ಎಂದರು.
ಮಿದುಳು ನಿಷ್ಕ್ರಿಯವಾಗಿರುವ ವ್ಯಕ್ತಿಯೊಬ್ಬರ ಎರಡು ಕಣ್ಣು, ಶ್ವಾಸಕೋಶ, ಕಿಡ್ನಿ, ಹೃದಯ ಮತ್ತು ಲಿವರ್ ದಾನ ಮಾಡುವ ಮೂಲಕ ಎಂಟು ಜನರಿಗೆ ಮರುಜನ್ಮ ನೀಡಬಹುದಾಗಿದೆ ಎಂದರು.
ವಿವಿ ಕುಲಪತಿ ಡಾ.ಆರ್.ಎಸ್.ಮುಧೋಳ ಮಾತನಾಡಿ, ಜನರಿಗೆ ಅಂಗದಾನದ ವಿಧಾನ, ಮಹತ್ವ ಮತ್ತು ಚಿಕಿತ್ಸೆಯ ಕುರಿತು ಮನವರಿಕೆ ಮಾಡಿಕೊಡಬೇಕು. ವೈದ್ಯರು ಮತ್ತು ವಿದ್ಯಾರ್ಥಿಗಳು ತಮ್ಮಲ್ಲಿರುವ ಜ್ಞಾನವನ್ನು ಜನಸಾಮಾನ್ಯರೊಂದಿಗೆ ಹಂಚಿಕೊಳ್ಳಬೇಕು ಎಂದರು.
ಕಾಲೇಜಿನ ಪ್ರಾಚಾರ್ಯ ಡಾ. ಅರವಿಂದ ಪಾಟೀಲ ಮಾತನಾಡಿ, ಈ ಜನಜಾಗೃತಿ ಜಾಥಾದ ಮೂಲಕ ಜನರು ದೇಹದಾನ ಮಾಡಲು ಪ್ರೋತ್ಸಾಹಿಸಬೇಕು. ಅಂಗದಾನ ನೋಂದಣಿ ವಿಧಾನ, ಅಗತ್ಯ ದಾಖಲೆಗಳನ್ನು ಸಂಗ್ರಹಿಸುವ ಮೂಲಕ ಈ ವಿನೂತನ ಯೋಜನೆ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ಹೇಳಿದರು. ವಿವಿ ರಜಿಸ್ಟ್ರಾರ್ ಡಾ. ರಾಘವೇಂದ್ರ ಕುಲಕರ್ಣಿ, ಉಪಪ್ರಾಚಾರ್ಯ
ಡಾ.ಎಂ.ಬಿ. ಪಾಟೀಲ, ವೈದ್ಯಕೀಯ ಅಧೀಕ್ಷಕ ಡಾ. ರಾಜೇಶ ಹೊನ್ನುಟಗಿ, ಡಾ. ವಿನಯ ಕುಂದರಗಿ ಇತರರಿದ್ದರು.