ಅಂಗಡಿಗಳಿಗೆ ಬಿತ್ತು ಬೀಗ

22 RON 2
Published on

ರೋಣ: ಲಾಕ್​ಡೌನ್ ನೆಪ ಮಾಡಿಕೊಂಡು ಹೆಚ್ಚಿನ ದರಕ್ಕೆ ಆಹಾರ ಪದಾರ್ಥ ಮಾರಾಟ ಮಾಡುತ್ತಿದ್ದ ರೋಣ ಪಟ್ಟಣದ ಚಿಲ್ಲರೆ ಹಾಗೂ ಸಗಟು ಕಿರಾಣಿ ಅಂಗಡಿಗಳ ಮೇಲೆ ತಹಸೀಲ್ದಾರ್ ಜೆ.ಬಿ. ಜಕ್ಕನಗೌಡ್ರ ದಾಳಿ ನಡೆಸಿ ಬೀಗ ಜಡಿದಿದ್ದಾರೆ.

ಈ ಕುರಿತು ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ವ್ಯಾಪಾರಸ್ಥರು ಯಾವುದೇ ಕಾರಣಕ್ಕೂ ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ಬೆಲೆಗೆ ಅಗತ್ಯ ವಸ್ತುಗಳನ್ನು ಮಾರಾಟ ಮಾಡಬಾರದು ಎಂದು ತಹಸೀಲ್ದಾರ್ ಜೆ.ಬಿ. ಜಕ್ಕನಗೌಡ್ರಆದೇಶ ಹೊರಡಿಸಿದ್ದರು. ಇದಕ್ಕೆ ಬಹುತೇಕ ವರ್ತಕರು ಸ್ಪಂದಿಸದೆ ಗ್ರಾಹಕರ ಸುಲಿಗೆ ಮಾಡುತ್ತಿದ್ದರು.

ಈ ಕುರಿತು ಏಪ್ರಿಲ್ 22 ರಂದು ವಿಜಯವಾಣಿ ಪತ್ರಿಕೆಯಲ್ಲಿ ‘ರೋಣ ತಹಸೀಲ್ದಾರ್ ಆದೇಶಕ್ಕಿಲ್ಲ ಕಿಮತ್ತು’ ಎಂಬ ಶೀರ್ಷಿಕೆಯಡಿ ವರದಿ ಪ್ರಕಟವಾಗಿತ್ತು. ಇದರಿಂದ ಎಚ್ಚೆತ್ತ ತಹಸೀಲ್ದಾರರು ಬುಧವಾರ ಬೆಳಗ್ಗೆ ತಮ್ಮ ಸಿಬ್ಬಂದಿ ಮೂಲಕ ಪಟ್ಟಣದ ಕೆಲ ಕಿರಾಣಿ ಅಂಗಡಿಗಳಲ್ಲಿ ಸಕ್ಕರೆ, ಎಣ್ಣೆ, ಚಹಾಪುಡಿ, ಅಕ್ಕಿ ಸೇರಿ ನಿತ್ಯ ಬಳಕೆ ಮಾಡುವ ಆಹಾರ ಪದಾರ್ಥಗಳನ್ನು ತರಿಸಿಕೊಂಡಿದ್ದಾರೆ. ಪ್ರತಿ ಕೆ.ಜಿ.ಗೆ 10 ರಿಂದ 12 ರೂ.ವರೆಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಅಂತಹ ಅಂಗಡಿಗಳ ಮೇಲೆ ದಾಳಿ ನಡೆಸಿ ಬೀಗ ಜಡಿದಿದ್ದಾರೆ. ಈ ಸಂದರ್ಭದಲ್ಲಿ ರೋಣ ಪುರಸಭೆ ಮುಖ್ಯಾಧಿಕಾರಿ ನೂರುಲ್ಲಾಖಾನ್, ಪಿಎಸ್​ಐ ಪರಮೇಶ್ವರ ಕವಟಗಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net