ಅಂಗಡಿಗಳಿಗೆ ನುಗ್ಗುತ್ತಿರುವ ಮಳೆ ನೀರು

18KMT3
Published on

ಕುಮಟಾ: ಪಟ್ಟಣದ ಹಳೇ ಬಸ್​ನಿಲ್ದಾಣ ಸನಿಹ ನೆಲ್ಲಿಕೇರಿ-ಬಸ್ತಿಪೇಟೆ ಕಾಂಕ್ರೀಟ್ ರಸ್ತೆಯಂಚಿನ ಗಟಾರ್ ಕಾಮಗಾರಿಯಿಂದಾಗಿ ಕೆಲ ಅಂಗಡಿಗಳಿಗೆ ಮಳೆ ನೀರು ನುಗ್ಗಿ ಕಿರಿಕಿರಿ ಅನುಭವಿಸುವಂತಾಗಿದೆ ಎಂದು ಅಂಗಡಿಕಾರರು ಆರೋಪಿಸಿದ್ದಾರೆ.

ಈ ಕುರಿತು ಮಾಧ್ಯಮದ ಎದುರು ಅಳಲು ತೋಡಿಕೊಂಡ ಪ್ರಕಾಶ ಮಲ್ನಾಡ್, ಪ್ರವೀಣ ರೇವಣಕರ, ದೇವಿದಾಸ ಭಂಡಾರಿ, ಶಿವಾನಂದ, ಡಿ.ಪಿ.ಹೆಗಡೆ, ಲೋಕನಾಥ, ಸತೀಶ ಕುಮಟಾಕರ ಇನ್ನಿತರರು, ಇಲ್ಲಿ ಕಾಂಕ್ರೀಟ್ ರಸ್ತೆ ನಿರ್ವಣದ ಬಳಿಕ ಅಂಗಡಿಗಳಿಗಿಂತ ರಸ್ತೆ ಎತ್ತರವಾಗಿದೆ. ಗಟಾರ್ ಇಲ್ಲದಿರುವುದರಿಂದ ಮಳೆ ನೀರು ಅಂಗಡಿಗಳಿಗೆ ನುಗ್ಗುತ್ತಿದೆ. ಪುರಸಭೆಯವರು ಗುರುವಾರ ಬೆಳಗ್ಗೆ ಅಂಗಡಿ ಬಾಗಿಲು ತೆಗೆಯುವುದಕ್ಕೆ ಮುಂಚೆಯೇ ಬಂದು ನಮ್ಮ ಅಂಗಡಿಗಳೆದುರು ಬಾಗಿಲವರೆಗೆ ಕಾಲುವೆ ಹೊಡೆದು ಹೋಗಿದ್ದಾರೆ. ಈಗ ಗಟಾರ ಸೇರುತ್ತಿರುವ ಅಕ್ಕಪಕ್ಕದ ಜನವಸತಿ ಪ್ರದೇಶದ ತ್ಯಾಜ್ಯ ನೀರು ಕೂಡಾ ಕಟ್ಟಿಕೊಂಡು ಅಂಗಡಿಯೊಳಗೆ ನುಗ್ಗುತ್ತಿದೆ. ಇಲ್ಲಿ ಎಲ್ಲರಿಗೂ ಒಂದೇ ನ್ಯಾಯ ಇಲ್ಲ. ಕೆಲವರ ಮನೆ, ಕಟ್ಟಡದ ಮುಂದೆ ಕಾಲುವೆ ಹೊಡೆದಿಲ್ಲ. ನಮ್ಮ ಕಷ್ಟವನ್ನು ಮುಖ್ಯಾಧಿಕಾರಿ ಕಡೆಗಣಿಸಿದ್ದಾರೆ. ಹೀಗಾಗಿ ಉಪವಿಭಾಗಾಧಿಕಾರಿಗಳಿಗೆ ದೂರಿದ್ದೇವೆ. ಅವರು ಸ್ಥಳಕ್ಕೆ ಬಂದು ಪರಿಶೀಲಿಸಿ ಸಮಸ್ಯೆ ಬಗೆಹರಿಸಿಕೊಡುವ ಭರವಸೆ ಇದೆ ಎಂದು ಅಂಗಡಿಕಾರರು ತಿಳಿಸಿದ್ದಾರೆ.

ಹೊಸದಾಗಿ ಕಾಂಕ್ರೀಟ್ ರಸ್ತೆ ಮಾಡಿದ ಮೇಲೆ ಗಟಾರ ಕಾಮಗಾರಿಯನ್ನೂ ಮಾಡಲೇಬೇಕಿದೆ. ಅಂಗಡಿಕಾರರ, ಸಾರ್ವಜನಿಕರ ಅನುಕೂಲಕ್ಕಾಗಿಯೇ ಮಾಡುತ್ತಿರುವ ಕೆಲಸ ಇದು. ಅಂಗಡಿಕಾರರು ತಾವಾಗಿಯೇ ಗಟಾರಕ್ಕೆ ಜಾಗ ಬಿಟ್ಟು ಕೊಡಬೇಕು. ಮಳೆ ಜೋರಾಗಿದ್ದರಿಂದ ಅನಿವಾರ್ಯವಾಗಿ ಒಂದೆಡೆಯಿಂದ ಕಾಲುವೆ ಕೆಲಸ ಆರಂಭಿಸಿದ್ದೇವೆ. ಅಂಗಡಿಕಾರ ಸಹಕಾರದೊಂದಿಗೆ ಸಮಸ್ಯೆ ಬಗೆಹರಿಸುತ್ತೇವೆ.| ಸುರೇಶ ಎಂ.ಕೆ. ಪುರಸಭೆ ಮುಖ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net