ಅಂಗಡಿಗಳ ರೋಲಿಂಗ್ ಶೆಟರ್ ಮೀಟಿ ಕಳವು: ಆರೋಪಿ ಬಂಧನ

2
Published on

ಮೈಸೂರು; ವಿವಿಧ ಜಿಲ್ಲೆಗಳಲ್ಲಿ ಅಂಗಡಿಗಳ ರೋಲಿಂಗ್ ಶೆಟರ್ ಮೀಟಿ ಕಳವು ಮಾಡುತ್ತಿದ್ದ ಆರೋಪಿಯನ್ನು ಬಂಧಿಸಲಾಗಿದೆ.


ನಗರದಲ್ಲಿ ಇತ್ತೀಚೆಗೆ ರೋಲಿಂಗ್ ಶೆಟರ್ಸ್‌ ಮೀಟಿ ಅಂಗಡಿಗಳ ಸರಣಿ ಕಳವು ಹೆಚ್ಚಾಗಿತ್ತು. ಈ ಪ್ರಕರಣಗಳನ್ನು ಪತ್ತೆ ಮಾಡುವ ಸಲುವಾಗಿ ಸಿಸಿಬಿ ಘಟಕದ ಅಧಿಕಾರಿ, ಸಿಬ್ಬಂದಿಯನ್ನು ಒಳಗೊಂಡ ವಿಶೇಷ ತಂಡ ರಚಿಸಲಾಗಿತ್ತು.


ಈ ತಂಡ ಶನಿವಾರ ಎನ್.ಆರ್. ಮೊಹಲ್ಲಾದ ಫೌಂಟನ್ ವೃತ್ತದ ಬಳಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದೆ. ಈತ ನಗರದ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಹಾಲಿನ ಬೂತ್, ಮೆಡಿಕಲ್ ಶಾಪ್ ಮತ್ತು ದೇವಸ್ಥಾನಗಳಲ್ಲಿ ಕಳ್ಳತನ ಮಾಡಿರುವ ಬಗ್ಗೆ ಬಾಯಿ ಬಿಟ್ಟಿದ್ದಾನೆ. ಆರೋಪಿಯಿಂದ 1.32 ಲಕ್ಷ ರೂ. ನಗದು, 10 ಲೀಟರ್ ನಂದಿನಿ ತುಪ್ಪ, 3 ಬಾಕ್ಸ್ ನಂದಿನಿ ಗುಡ್‌ಲೈಫ್ ಹಾಲು, 1 ಜೊತೆ ಬೆಳ್ಳಿಯ ಕಾಲುಚೈನು (ಮೌಲ್ಯ 1.52 ಲಕ್ಷ ರೂ.) ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನವನ್ನು ಜಪ್ತಿ ಮಾಡಲಾಗಿದೆ


ಈ ಪತ್ತೆ ಕಾರ್ಯದಿಂದ ಮೈಸೂರು ನಗರದ ಸರಸ್ವತಿಪುರಂ-4, ವಿಜಯನಗರ-2, ನಜರ್‌ಬಾದ್-1, ಆಲನಹಳ್ಳಿ-1, ಕೆ.ಆರ್. ಠಾಣೆ-1, ಬೆಂಗಳೂರಿನ ಜಗಜೀವನನಗರ ಠಾಣೆಯ-1 ಸೇರಿದಂತೆ 10 ಕಳವು ಪ್ರಕರಣಗಳು ಪತ್ತೆಯಾಗಿವೆ.


ಆರೋಪಿ ವಿರುದ್ಧ ಮೈಸೂರು ನಗರ ನರಸಿಂಹರಾಜ ಪೊಲೀಸ್ ಠಾಣೆ-4, ಮೇಟಗಳ್ಳಿ-1, ದೇವರಾಜ-2, ಲಷ್ಕರ್-1, ವಿ.ವಿ.ಪುರಂ-4, ಮೈಸೂರು ಜಿಲ್ಲೆಯ ಬನ್ನೂರು-6, ದಕ್ಷಿಣ ಪೊಲೀಸ್ ಠಾಣೆ-1, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ-4, ಪಾಂಡವಪುರ 2, ಬೆಂಗಳೂರಿನ ಹೈಗ್ರೌಂಡ್-4, ವಿಲ್ಸನ್ ಗಾರ್ಡನ್-4, ಹಾಸನ ಜಿಲ್ಲೆಯ ಪೆನ್ಷನ್ ಮೊಹಲ್ಲಾ-4, ಗೊರೂರು -5 ಹಾಗೂ ಹಾಸನ ನಗರ ಪೊಲೀಸ್ ಠಾಣೆಯ 3 ಸೇರಿದಂತೆ ಒಟ್ಟು 45 ಕಳವು ಪ್ರಕರಣ ದಾಖಲಾಗಿರುವುದು ವಿಚಾರಣೆಯಿಂದ ಬೆಳಕಿಗೆ ಬಂದಿದೆ.


ಸಿಸಿಬಿ ಘಟಕದ ಪೊಲೀಸ್ ಇನ್ಸ್‌ಪೆಕ್ಟರ್ ಸಿ.ಕೃಷ್ಣಕುಮಾರ್, ಸಿಬ್ಬಂದಿ ಸಲೀಂ ಪಾಷ, ಗೋವಿಂದ, ಮಧು, ಗಣೇಶ್ , ಉಮಾಮಹೇಶ್, ಚಿಕ್ಕಣ್ಣ ಕಾರ್ಯಾಚರಣೆಯ ತಂಡದಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net