ಅಂಗಡಿ ಶೆಡ್ ನಿರ್ಮಾಣಕ್ಕೆ ತಡೆ

Published on

ಯಳಂದೂರು : ಪಟ್ಟಣದ ಬಳೇಮಂಟಪದ ಬಳಿಯ ಖಾಲಿ ನಿವೇಶನದಲ್ಲಿ ವ್ಯಾಪಾರಿಯೊಬ್ಬರು ಅಕ್ರಮವಾಗಿ ಅಂಗಡಿಯ ಶೆಡ್ ನಿರ್ಮಾಣ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಂ.ಪಿ.ಮಹೇಶ್ ಕುಮಾರ್ ಶನಿವಾರ ಭೇಟಿ ನೀಡಿ ಅಂಗಡಿ ಕೆಲಸವನ್ನು ಸ್ಥಗಿತಗೊಳಿಸಿ ತೆರವು ಮಾಡಬೇಕೆಂದು ಸೂಚಿಸಿದರು.

ಪಟ್ಟಣದ ಬಳೇಮಂಟಪದ ಸಮೀಪದಲ್ಲಿ ಖಾಸಗಿ ವ್ಯಕ್ತಿಗೆ ಸೇರಿರುವ ಖಾಲಿ ಸ್ಥಳದಲ್ಲಿ ವ್ಯಾಪಾರಿಯೊಬ್ಬರು ಬಾಡಿಗೆಗೆ ಪಡೆದು. ಆ ಜಾಗದಲ್ಲಿ ಶೆಡ್ ನಿರ್ಮಾಣಕ್ಕೆ ಮುಂದಾಗಿದ್ದರು. ಬಳೇ ಮಂಟಪ ಕೇಂದ್ರ ಪುರಾತತ್ವ ಇಲಾಖೆಗೆ ಒಳಪಟ್ಟಿದ್ದು, ಇದರಿಂದ 100 ಮೀಟರ್ ಸುತ್ತಲ್ಲೂ ಯಾವುದೇ ರೀತಿಯ ಮನೆ, ಅಂಗಡಿ ಸೇರಿದಂತೆ ಕಟ್ಟಡಗಳನ್ನು ನಿರ್ಮಾಣ ಮಾಡಲು ಅನುಮತಿ ಇಲ್ಲ. ಆದರೂ ಈ ವ್ಯಾಪಾರಿ ಬಳೇಮಂಟಪದ ಸಮೀಪದಲ್ಲಿ ಅಂಗಡಿ ಶೆಡ್ ನಿರ್ಮಾಣ ಮಾಡುತ್ತಿರುವುದು ಸರಿಯಲ್ಲ ಎಂದು ಸಾರ್ವಜನಿಕರು ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಮಾಹಿತಿ ನೀಡಿದರು.

ಈ ಬಗ್ಗೆ ಎಚ್ಚೆತ್ತ ಮುಖ್ಯಾಧಿಕಾರಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವ್ಯಾಪಾರಿ ಪಟ್ಟಣ ಪಂಚಾಯಿತಿ ಅಥವಾ ಕೇಂದ್ರ ಪುರಾತತ್ವ ಇಲಾಖೆಯಿಂದ ಅನುಮತಿ ಪಡೆದಿಲ್ಲ. ಶನಿವಾರ ಸರ್ಕಾರಿ ರಜೆ ದಿನವಾದ ಕಾರಣ ಇಲ್ಲಿ ಏಕಾಏಕಿ ಅಂಗಡಿ ಶೆಡ್ ನಿರ್ಮಾಣಕ್ಕೆ ಮುಂದಾಗಿರುವುದು ಸರಿಯಾದ ಕ್ರಮವಲ್ಲ. ಕೂಡಲೇ ಅಂಗಡಿ ತೆರವು ಮಾಡಬೇಕು. ಇಲ್ಲವಾದರೇ ಕಾನೂನಿನ ರೀತಿಯಲ್ಲಿ ಕ್ರಮವಹಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ತಿರುಗಿ ನೋಡದ ಕೇಂದ್ರ ಪುರಾತತ್ವ ಇಲಾಖೆ:

ಪಟ್ಟಣದ ಐತಿಹಾಸಿಕ ಕಲ್ಲಿನ ಬಳೇಮಂಟಪ ಹಾಗೂ ದಿವಾನ್ ಪೂರ್ಣಯ್ಯ ವಸ್ತು ಸಂಗ್ರಹಾಲ, ಗೌರೇಶ್ವರ ದೇವಾಲಯ ಪ್ರದೇಶ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಸಂರಕ್ಷಣೆ ಮಾಡುವ ಬಗ್ಗೆ ಪುರಾತತ್ವ ಇಲಾಖೆ ಅಧಿಕಾರಿಗಳು ಒಂದು ದಿನವೂ ಯಳಂದೂರು ಪಟ್ಟಣಕ್ಕೆ ಆಗಮಿಸಿ ಇಲ್ಲಿನ ಪರಿಸ್ಥಿತಿ ದೇವಾಲಯಗಳ ಅಭಿವೃದ್ಧಿ, ಸಂರಕ್ಷಣೆಯ ಬಗ್ಗೆ ಯಾವುದೇ ರೀತಿಯ ಗಮನಹರಿಸುತ್ತಿಲ್ಲ. ಇದರಿಂದ ಈ ಪ್ರದೇಶ ಸುತ್ತಲ್ಲೂ ಅಕ್ರಮ ತಾಣವಾಗಿ ಮಾರ್ಪಟ್ಟಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net