ಅಂಗಡಿ ತೆರೆಯಲು 1 ಗಂಟೆವರೆಗೆ ಅವಕಾಶ

5KWR2
Published on

ಕಾರವಾರ: ಜಿಲ್ಲೆಯ ಪಟ್ಟಣ ಪ್ರದೇಶಗಳಲ್ಲಿ ಮಧ್ಯಾಹ್ನ 1 ಗಂಟೆಯವರೆಗೆ ಮಾತ್ರ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಿದ್ದು, ಬೆಳಗಿನ ಹೊತ್ತು ಜನದಟ್ಟಣೆ ಹೆಚ್ಚುತ್ತಿದೆ.

ಮೇ 4 ರಿಂದ ಜಾರಿಯಾದ ಹೊಸ ಲಾಕ್​ಡೌನ್ ನಿಯಮಾವಳಿಯಂತೆ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಬೆಳಗ್ಗೆ 7 ರಿಂದ ಸಾಯಂಕಾಲ 7 ರವರೆಗೆ, ಪಟ್ಟಣ ಪ್ರದೇಶದಲ್ಲಿ ಬೆಳಗ್ಗೆ 7 ರಿಂದ ಮಧ್ಯಾಹ್ನ 1 ರವರೆಗ ಎಲ್ಲ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಸಾಯಂಕಾಲ 7 ರಿಂದ ಬೆಳಗ್ಗೆ 7 ರವರೆಗೆ ಓಡಾಟವನ್ನು ಸಂಪೂರ್ಣ ಬಂದ್ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಸೋಮವಾರ ಘೊಷಿಸಿದ್ದರು.

ಮಂಗಳವಾರ ಮಧ್ಯಾಹ್ನ ನಂತರ ಅಂಗಡಿಗಳು ಬಂದ್ ಆಗಲಿವೆ ಎಂಬ ಕಾರಣಕ್ಕೆ ಜನ ಬೆಳಗಿನ ಹೊತ್ತಿಗೆ ಏಕಾಏಕಿ ಸೇರಿ, ಖರೀದಿ, ದಿನನಿತ್ಯದ ವ್ಯವಹಾರದಲ್ಲಿ ತೊಡಗಿದ್ದರು. ಇದರಿಂದ ಸಾಮಾನ್ಯ ದಿನದಂತೆ ಜನದಟ್ಟಣೆ ಕಂಡುಬಂತು.

ದಾಂಡೇಲಿ, ಹಳಿಯಾಳ, ಕುಮಟಾ, ಶಿರಸಿ, ಕಾರವಾರ, ಸಿದ್ದಾಪುರ, ಹೊನ್ನಾವರ ಭಾಗದಲ್ಲಿ ಮಧ್ಯಾಹ್ನ ಅಂಗಡಿಗಳನ್ನು ಮುಚ್ಚಲಾಗಿದೆ. ಮದ್ಯದಂಗಡಿಗಳು ಮಧ್ಯಾಹ್ನ 3 ರವರೆಗೆ ತೆರೆದಿದ್ದವು. ಮೆಡಿಕಲ್ ಶಾಪ್​ಗಳು ಸಂಜೆ 7 ರವರೆಗೂ ಇತ್ತು.

ಕೆಲವೆಡೆ 1 ಗಂಟೆಯ ಹೊತ್ತಿಗೆ ಪೊಲೀಸರು ಸೈರನ್ ಹಾಕಿಕೊಂಡು ಎಲ್ಲೆಡೆ ಓಡಾಡಿ ಅಂಗಡಿಗಳನ್ನು ಮುಚ್ಚಿಸಿದರು. ಅಂಗಡಿಗಳ ಮುಚ್ಚಿದ ನಂತರವೂ ಜನ ಸಂಚಾರ ಮಾತ್ರ ಎಂದಿನಂತೆ ಇತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net