ಅಂಕಿ-ಅಂಶ ನೀಡದ ಇಂಜಿನಿಯರ್ ವಿರುದ್ಧ ಗರಂ

20 NMG 01 (4)
Published on

ನಾಗಮಂಗಲ: ತಾಲೂಕಿನಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಕಾಮಗಾರಿ ಪೂರ್ಣಗೊಂಡಿರುವ ಗ್ರಾಮಗಳ ಅಂಕಿ-ಅಂಶ ನೀಡುವಂತೆ ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ ಹಾಗೂ ಇಒ ಎಷ್ಟೇ ಸೂಚಿಸಿದರೂ ಸರಿಯಾಗಿ ಉತ್ತರ ನೀಡದ ಇಂಜಿನಿಯರ್ ಅರ್ಚನಾ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.


ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಡಳಿತಾಧಿಕಾರಿ ಎಚ್.ಡಿ.ಲತಾ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಕೆಡಿಪಿ ಸಭೆಯಲ್ಲಿ ಇಲಾಖಾವಾರು ಪ್ರಗತಿ ಪರಿಶೀಲನೆ ನಡೆಯಿತು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಇಂಜಿನಿಯರ್ ಅರ್ಚನಾ ಇಲಾಖೆಗೆ ಸಂಬಂಧಿಸಿದ ಮಾಹಿತಿ ನೀಡುವಾಗ ಮಧ್ಯಪ್ರವೇಶಿಸಿದ ಎಚ್.ಡಿ. ಲತಾ ಅವರು, ಜಲಜೀವನ್ ಮಿಷನ್ ಯೋಜನೆಯಡಿ ತಾಲೂಕಿನಲ್ಲಿ ಕಾಮಗಾರಿ ಪೂರ್ಣಗೊಂಡಿರುವ ಗ್ರಾಮಗಳ ಪಟ್ಟಿಯನ್ನು ನೀಡುವಂತೆ ಸೂಚಿಸಿದರು. ಆದರೆ ಇಂಜಿನಿಯರ್ ಅರ್ಚನಾ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಕಾಮಗಾರಿ ಪೂರ್ಣಗೊಂಡಿದೆ ಎಂದು ಹಾರಿಕೆ ಉತ್ತರ ನೀಡಿದರು.


ಹಾರಿಕೆ ಉತ್ತರಕ್ಕೆ ಆಡಳಿತಾಧಿಕಾರಿ ಎಚ್.ಡಿ.ಲತಾ ಹಾಗೂ ಇಒ ಚಂದ್ರಮೌಳಿ ಗರಂ ಆದರು. ಗ್ರಾಮಗಳ ಪಟ್ಟಿಯನ್ನು ಅಂಕಿ- ಅಂಶಗಳ ರೂಪದಲ್ಲಿ ನೀಡುವಂತೆ ಬಿಗಿಪಟ್ಟು ಹಿಡಿದರು. ಸುಮಾರು 15 ನಿಮಿಷಗಳ ಕಾಲ ವಾದ-ವಿವಾದ ನಡೆಯಿತು. ಫೆ.1 ರೊಳಗೆ ಎಷ್ಟು ಹಳ್ಳಿಗಳಲ್ಲಿ ಕಾಮಗಾರಿ ಪೂರ್ಣ ಮಾಡುತ್ತೀರಿ ಎಂಬುದರ ಅಂಕಿ ಅಂಶವನ್ನಾದರೂ ಹೇಳಿ ಎಂದರೂ ಅದಕ್ಕೂ ಇಂಜಿನಿಯರ್ ಉತ್ತರಿಸಲಿಲ್ಲ.
ಇಂಜಿನಿಯರ್ ಅವರ ಈ ರೀತಿಯ ವರ್ತನೆಗೆ ಅಸಮಾಧಾನ ವ್ಯಕ್ತಪಡಿಸಿದ ಇಒ ಚಂದ್ರಮೌಳಿ, ಜಲಜೀವನ್ ಮಿಷನ್ ಯೋಜನೆಯ ಕಾಮಗಾರಿ ಪ್ರಗತಿ ವಿಚಾರದಲ್ಲಿ ನಾಗಮಂಗಲ ತಾಲೂಕು ಇಡೀ ಜಿಲ್ಲೆಯಲ್ಲಿ ಕೊನೆಯ ಸ್ಥಾನದಲ್ಲಿದೆ. ಜಿಲ್ಲಾ ಪಂಚಾಯತ್‌ನ ಪ್ರತಿ ಸಭೆಯಲ್ಲಿಯೂ ನಿಮ್ಮಿಂದ ಉತ್ತರ ನೀಡಲು ಸಾಧ್ಯವಾಗುತ್ತಿಲ್ಲ. ನಿಮ್ಮ ಇಲಾಖೆಯ ಕಾಮಗಾರಿ ಕುರಿತಾಗಿ ಸಂಪೂರ್ಣ ಮಾಹಿತಿ ಇಲ್ಲ ಎಂದರೆ ಹೇಗೆ ಎಂದು ಅಸಮಾಧಾನ ವ್ಯಕ್ತಪಡಿಸಿ, 2 ದಿನದೊಳಗೆ ಕಚೇರಿಗೆ ಅಂಕಿ-ಅಂಶ ನೀಡುವಂತೆ ಇಒ ಸೂಚಿಸಿದರು. ಇದಕ್ಕೆ ಇಂಜಿನಿಯರ್ ಅರ್ಚನಾ ಒಪ್ಪಿದರು.


ಯಾವ ರಸ್ತೆಗಳೂ ಅಭಿವೃದ್ಧಿಯಾಗಿಲ್ಲ: ಸಭೆಯಲ್ಲಿ ಲೋಕೋಪಯೋಗಿ ಮತ್ತು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಇಂಜಿನಿಯರ್‌ಗಳು ಮಾಹಿತಿ ನೀಡುತ್ತಿದ್ದಂತೆ ಮಧ್ಯಪ್ರವೇಶಿಸಿದ ಆಡಳಿತಾಧಿಕಾರಿ ಎಚ್.ಡಿ.ಲತಾ, ತಾಲೂಕು ಪಂಚಾಯಿತಿ ಹಾಗೂ ಜಿ.ಪಂ.ನಲ್ಲಿ ನಡೆಯುವ ಸಭೆಗಳಲ್ಲಿ ಕೋಟ್ಯಂತರ ರೂ. ರಸ್ತೆ ಅಭಿವೃದ್ದಿ ಕಾಮಗಾರಿ ನಡೆದಿದೆ ಎಂದು ಎರಡೂ ಇಲಾಖೆ ಅಧಿಕಾರಿಗಳು ಮಾಹಿತಿ ನೀಡುತ್ತೀರಿ. ಆದರೆ ಯಾವ ರಸ್ತೆಗಳನ್ನು ಅಭಿವೃದ್ಧಿ ಮಾಡುತ್ತಿದ್ದೀರಿ ಎಂಬುದೇ ತಿಳಿಯುತ್ತಿಲ್ಲ. ಈ ಹಿಂದೆ ರಸ್ತೆಗಳು ಹೇಗಿದ್ದವೋ ಅದೇ ರೀತಿ ಇವೆ. ಅದ್ಯಾವ ರಸ್ತೆ ಅಭಿವೃದ್ಧಿ ಮಾಡುತ್ತಿದ್ದೀರೋ ತಿಳಿಯುತ್ತಿಲ್ಲ. ಎಲ್ಲ ರಸ್ತೆಗಳು ಕಿತ್ತು ಹೋಗಿದ್ದು, ಗುಂಡಿ ಬಿದ್ದಂತಿವೆ ಎಂದು ಇಲಾಖೆಯ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.


ಸಭೆಯಲ್ಲಿ ಆರೋಗ್ಯ, ಕೃಷಿ, ರೇಷ್ಮೆ, ತೋಟಗಾರಿಕೆ, ಶಿಕ್ಷಣ, ಅಕ್ಷರ ದಾಸೋಹ ಹಾಗೂ ಕಾರ್ಮಿಕ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ತಮಗೆ ಸಂಬಂಧಿಸಿದ ಮಾಹಿತಿಗಳನ್ನು ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net