

ಕೊರಟಗೆರೆ : ಅಂಕಿ ಅಂಶಗಳು ಇಲ್ಲದೆ ಸಭೆಗೆ ಯಾಕ್ರೀ ಬರ್ತೀರಾ.. ನಿಮಗೆ ತಾಲೂಕಿನಲ್ಲಿ ಕೆಲಸ ಮಾಡಲು ಆಗದಿದ್ದರೆ ಬೇರೆಡೆ ಹೋಗಿ ಎಂದು ಶಾಸಕ ಡಾ.ಜಿ.ಪರಮೇಶ್ವರ ಹಲವು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕೆಡಿಪಿ ತ್ರೈಮಾಸಿಕ ಸಾಮಾನ್ಯ ಸಭೆಗೆ ಕರೊನಾ ಮತ್ತು ಒಮಿಕ್ರಾನ್ ಸಾಂಕ್ರಮಿಕ ರೋಗಗಳಿಗೆ ಸರಿಯಾದ ಪೂರ್ವತಯಾರಿ ಮಾಡಿಕೊಳ್ಳದೆ ಬಂದಿದ್ದ ಆರೋಗ್ಯ ಇಲಾಖೆ ಸೇರಿ ಇತರ ಇಲಾಖೆಯ ಅಧಿಕಾರಿಗಳಿಗೆ ಶಾಸಕರು ತರಾಟೆ ತೆಗೆದುಕೊಂಡರು. ತಾಲೂಕಿನಲ್ಲಿ ಕರ್ತವ್ಯಲೋಪ ಎಸಗುವ ಅಧಿಕಾರಿಗಳ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ತಾಪಂ ಇಒ ದೊಡ್ಡಸಿದ್ದರಯ್ಯ ಅವರಿಗೆ ಆದೇಶಿಸಿದರು.
ತಾಲೂಕಿನ ಶಾಲಾ ಮಕ್ಕಳಲ್ಲಿ ಕರೊನಾ ಕಾಣಿಸಿಕೊಳ್ಳುತ್ತಿದೆ, ಇದರಲ್ಲಿ ಲಸಿಕೆ ಪಡೆಯದ ಮಕ್ಕಳಿದ್ದಾರೆ, ಅವರಿಗೆ ಹಾಗೂ ಸಾಮಾನ್ಯ ವರ್ಗದ ಜನರಿಗೆ ಮುಂಜಾಗೃತ ಕ್ರಮಗಳ ಬಗ್ಗೆ ಮಾಹಿತಿ ಇಲ್ಲ, ಕೊರಟಗೆರೆ ಪಟ್ಟಣದಲ್ಲೇ ಸೋಂಕು ಹೆಚ್ಚಾಗಿದೆ ಎಂದು ಹೇಳುತ್ತಿದ್ದಿರಿ, ಮಾಹಿತಿ ಎಲ್ಲಿ ? ಎಂದು ತಾಲೂಕು ವೈದ್ಯಾಧಿಕಾರಿ ಡಾ.ವಿಜಯಕುಮಾರ್ ಅವರನ್ನು ಪ್ರಶ್ನಿಸಿದರು.
ತಾಲೂಕು ಸಮಾಜಕಲ್ಯಾಣ ಇಲಾಖೆಯ ಪ್ರಭಾರ ಅಧಿಕಾರಿ ಬಳಿ ತಾಲೂಕಿನಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿಯ ಮಕ್ಕಳ ಪಟ್ಟಿಯಾಗಲಿ, ಸಂಖ್ಯೆಯಾಗಲಿ ಮಾಹಿತಿ ಇರಲಿಲ್ಲ, ಮೆಟ್ರಿಕ್ ಪೂರ್ವ ಮತ್ತು ನಂತರದ ವಿದ್ಯಾರ್ಥಿಗಳಿಗೆ ಬರುವ ವಿದ್ಯಾರ್ಥಿ ವೇತನದ ಅರಿವೆ ಇಲ್ಲದನ್ನು ಕಂಡು ಸಿಟ್ಟಿನಿಂದ ಶಾಸಕರು ನಿಮ್ಮಂತರವರು ಇಲಾಖೆಗೆ ಏಕಪ್ಪ ಇದ್ದೀರಾ? ತುಳಿತ್ತಕ್ಕೆ ಒಳಗಾದ ಸಮಾಜದ ವಿದ್ಯಾರ್ಥಿಗಳ ವೇತನ ಬಗ್ಗೆ ಅರಿವೆ ಇಲ್ಲದ ನೀವು ಇಲಾಖೆಗೆ ಬೇಕಾ! ಇವರ ವಿರುದ್ಧ ಇಲಾಖೆ ಕ್ರಮಕ್ಕೆ ವರದಿ ನೀಡಿ ಎಂದರು.
ಗ್ರಾಮೀಣ ನೀರು ಸರಬರಾಜು ಇಲಾಖಾ ಅಧಿಕಾರಿಯ ವರದಿ ಮಾಹಿತಿಯೂ ಅಪೂರ್ಣವಾಗಿದ್ದು ದುರಸ್ತಿಯಾಗಬೇಕಾದ ಕುಡಿಯುವ ನೀರಿನ ಘಟಕದ ಬಗ್ಗೆ ಮಾಹಿತಿ ನೀಡದೆ ಇದ್ದು ಗ್ರಾಮಗಳ ಕುಡಿಯುವ ನೀರಿನ ಸಮಗ್ರ ಮಾಹಿತಿ ಕೊರತೆ ಕಂಡು ಅವರ ವಿರುದ್ಧ ಕ್ರಮ ವಹಿಸುವಂತೆ ಶಾಸಕರು ಸೂಚಿಸಿದರು.
ತೋಟಗಾರಿಕೆ, ಭೂಸೇನಾನಿಗಮ, ಕ್ಷೇತ್ರ ಶಿಕ್ಷಣಾಧಿಕಾರಿ ಸೇರಿ ವಿವಿಧ ಇಲಾಖೆಗಳ ಕಾರ್ಯವೈಕರಿ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದರು. ಪ್ರತಿ ವರ್ಷ ಕೆರೆಗಳ ಸ್ವಚ್ಛತೆಗೆ ಯೋಜನೆ ರೂಪಿಸಿ ಸಲ್ಲಿಸಿವಂತೆ ಕಿರು ನೀರು ಆಧಿಕಾರಿಗೆ ತಿಳಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಸುಧಾಕರ್, ಕೃಷಿ ಅಧಿಕಾರಿ ನಾಗರಾಜು, ತಾಲೂಕು ಮಟ್ಟದ ಎಲ್ಲ ಇಲಾಖೆಗಳ ಅಧಿಕಾರಿಗಳು ಇದ್ದರು.
ಸರ್ಕಾರಿ ಸೇವೆಯಲ್ಲಿ ಜನರ ಕೆಲಸಗಳ ವಿಳಂಬ ಮತ್ತು ಕರ್ತವ್ಯ ನಿರ್ಲಕ್ಷ್ಯ ಸಹಿಸುವುದಿಲ್ಲ, ಅಧಿಕಾರಿಗಳು ನನ್ನ ಸೌಮ್ಯತೆಯನ್ನು ದುರ್ಬಳಕೆ ಮಾಡಿಕೊಂಡು ಸಾರ್ವಜನಿಕ ಸೇವೆಯಲ್ಲಿ ಲೋಪವೆಸಗಿದರೆ ಕ್ಷಮಿಸುವ ಪ್ರಶ್ನೆಯೇ ಇಲ್ಲ. ಸರ್ಕಾರಕ್ಕೆ ವರದಿ ನೀಡಬೇಕಾಗುತ್ತದೆ. ಮುಂದೆ ಹೀಗೆ ಆಗದಂತೆ ಎಚ್ಚರಿಕೆ ವಹಿಸಬೇಕಾದ ಜವಾಬ್ದಾರಿ ಹಾಗೂ ಬದ್ಧತೆ ಅಧಿಕಾರಿಗಳ ಮೇಲಿದೆ. ಡಾ.ಜಿ.ಪರಮೇಶ್ವರ, ಶಾಸಕ