

ಶನಿವಾರಸಂತೆ: ಸರ್ಕಾರಿ ಶಾಲಾ-ಕಾಲೇಜುಗಳ ಬೆಳವಣಿಗೆಗೆ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸುತ್ತಿದೆಯಾದರೂ ಅದನ್ನು ಸದ್ಬಳಕೆ ಮಾಡಿಕೊಳ್ಳುವ ಬೆರಳೆಣಿಕೆಯಷ್ಟು ಶಾಲಾ-ಕಾಲೇಜುಗಳು ಮಾತ್ರ ಖಾಸಗಿ ವಿದ್ಯಾಸಂಸ್ಥೆಗಳಿಗೆ ಪೈಪೋಟಿ ನೀಡುತ್ತಿವೆ.
ಸೋಮವಾರಪೇಟೆ ತಾಲೂಕಿನ ಆಲೂರು-ಸಿದ್ದಾಪುರ ಗ್ರಾಮ ಪಂಚಾಯಿತಿಗೆ ಸೇರಿದ ಕೊಡಗು-ಹಾಸನ ಗಡಿಭಾಗದಲ್ಲಿರುವ ಅಂಕನಹಳ್ಳಿ ಸರ್ಕಾರಿ ಪ್ರೌಢಶಾಲೆ ಅಭಿವೃದ್ಧಿ ಹೊಂದುತ್ತಿರುವ ಜಿಲ್ಲೆಯ ಸರ್ಕಾರಿ ಪ್ರೌಢಶಾಲೆಗಳಲ್ಲಿ ಒಂದಾಗಿದೆ. 1994ರಲ್ಲಿ ಸ್ಥಾಪನೆಯಾದ ಈ ಶಾಲೆಯಲ್ಲಿ 8, 9, 10ನೇ ತರಗತಿ ಇದೆ. ಶೈಕ್ಷಣಿಕ ಈ ಶಾಲೆ ಪ್ರಗತಿ ಸಾಧಿಸುತ್ತಿದ್ದು, ಪ್ರತಿ ವರ್ಷ ಹತ್ತನೇ ತರಗತಿ ಪರೀಕ್ಷೆ ಫಲಿತಾಂಶದಲ್ಲಿ ಶೇ.ನೂರರಷ್ಟು ಫಲಿತಾಂಶ ಪಡೆಯುತ್ತಿದೆ.
ಶೈಕ್ಷಣಿಕ ಸಾಲಿನಲ್ಲಿ ನಡೆಯುತ್ತಿರುವ ಸ್ಮಾರ್ಟ್ ಕ್ಲಾಸ್: ಪ್ರತಿ ವರ್ಷ ಪಠ್ಯ ಬೋಧನೆ ಜತೆ ಸ್ಮಾರ್ಟ್ ತರಗತಿ ನಡೆಸಲಾಗುತ್ತದೆ. ವಿದ್ಯಾರ್ಥಿಗಳ ಬೌದ್ಧಿಕ ಮಟ್ಟ ಸುಧಾರಿಸುವ ಸಲುವಾಗಿ ಸ್ಮಾರ್ಟ್ ಕ್ಲಾಸ್ ನಡೆಸಲಾಗುತ್ತಿದ್ದು, 8 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಕರು ತರಗತಿ ತೆಗೆದುಕೊಳ್ಳುತ್ತಾರೆ. ಶಾಲೆಯ 3 ಕೊಠಡಿಗಳಲ್ಲಿ ತರಗತಿ ನಡೆಯಲಿದ್ದು, ಇದಕ್ಕಾಗಿ ಪ್ರೊಜೆಕ್ಟರ್, ಪರದೆ, ಕಂಪ್ಯೂಟರ್ ವ್ಯವಸ್ಥೆ ಮಾಡಲಾಗಿದೆ.
ಶಾಲೆ ಮುಂಭಾಗದಲಿದ್ದ ಹೂದೋಟವನ್ನು ಈಗ ಅಭಿವೃದ್ಧಿಪಡಿಸಲಾಗಿದೆ. ಆಲೂರು-ಸಿದ್ದಾಪುರ ಗ್ರಾಪಂ ವತಿಯಿಂದ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ 2 ಲಕ್ಷ ರೂ. ವೆಚ್ಚ ಮಾಡಿ ಉದ್ಯಾನ ನಿರ್ಮಿಸಲಾಗಿದೆ. ಇಲ್ಲಿ ವಿವಿಧ ಹೂವಿನ ಗಿಡ, ಔಷಧ ಗಿಡಗಳನ್ನು ನೆಡಲಾಗಿದೆ. ಉದ್ಯಾನದಲ್ಲಿ ವಿಶ್ರಮಿಸಲು ಮರದ ಬೆಂಚ್‌ಗಳನ್ನು ಅಳವಡಿಸಲಾಗಿದೆ. ಒಳಗೆ ಸಣ್ಣಪುಟ್ಟ ಕೆಲಸ ಬಾಕಿ ಇದ್ದು ಶೀಘ್ರ ಕಾಮಗಾರಿ ಪೂರ್ಣಗೊಳ್ಳಲಿದೆ. ಒಟ್ಟಾರೆ ಈ ಶಾಲೆಯು ಸುಂದರ ಉದ್ಯಾನದ ಮಧ್ಯೆ ಕಂಗೊಳಿಸುತ್ತಿದೆ.
ಸರ್ಕಾರಿ ಶಾಲೆಗಳು ಪ್ರಗತಿ ಸಾಧಿಸುವ ನಿಟ್ಟಿನಲ್ಲಿ ಸರ್ಕಾರ ಮತ್ತು ಶಿಕ್ಷಣ ಇಲಾಖೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಅದರಂತೆ ಯೋಜನೆಗಳನ್ನು ನಾವು ಸದ್ಬಳಕೆ ಮಾಡಿಕೊಳ್ಳುತ್ತಿದ್ದೇವೆ. ಹತ್ತನೇ ತರಗತಿ ಪರೀಕ್ಷೆಯಲ್ಲಿ ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣ ಗೊಳ್ಳಲು ಅಧ್ಯಾಪಕರು ಮೊದಲೇ ಮಕ್ಕಳನ್ನು ತಯಾರು ಮಾಡುತ್ತಾರೆ. ವಿದ್ಯಾರ್ಥಿಗಳ ಬೌದ್ಧಿಕ ಮಟ್ಟ ಸುಧಾರಣೆಗಾಗಿ ಸ್ಮಾರ್ಟ್ ತರಗತಿ ಮಾಡಲಾಗುತ್ತಿದೆ.
ಜಿ.ಎಂ.ಹೇಮಂತ್ ಮುಖ್ಯ ಶಿಕ್ಷಕ
ಅಂಕನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಉದ್ಯಾನ ನಿರ್ಮಿಸಲು ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ 2021-22ನೇ ಸಾಲಿನಲ್ಲಿ ನಮ್ಮ ಗಾಪಂನಿಂದ 2ಲಕ್ಷ ರೂ. ಅನುದಾನ ನೀಡಲಾಗಿದೆ.
ಹರೀಶ್ ಪಿಡಿಒ, ಆಲೂರು-ಸಿದ್ದಾಪುರ ಗ್ರಾ.ಪಂ.
ನಾನು ಅಧ್ಯಕ್ಷನಾಗಿದ್ದ ಸಂಧರ್ಭ ಪಂಚಾಯಿತಿ ವ್ಯಾಪ್ತಿಯ ಶಾಲಾ ಕಾಲೇಜುಗಳ ಅಭಿವೃದ್ಧಿಗೆ ಅನುದಾನ ನೀಡಿದ್ದೆ. ಅದರಂತೆ ಅಂಕನಹಳ್ಳಿ ಪ್ರೌಢಶಾಲೆಗೂ ಅನುದಾನ ನೀಡಲಾಗಿತ್ತು. ಅದನ್ನು ಸಮರ್ಪಕವಾಗಿ ಬಳಸಿಕೊಂಡಿದ್ದಾರೆ. ಮುಂದೆಯೂ ಸಹ ಈ ವ್ಯಾಪ್ತಿಯ ಶಾಲೆಗಳನ್ನು ಇನ್ನಷ್ಟು ಅಭಿವೃದ್ಧಿ ಪಡಿಸುವ ಚಿಂತನೆ ಇದೆ.
ಮೋಹನ್ ಸದಸ್ಯ, ಆಲೂರು-ಸಿದ್ದಾಪುರ ಗ್ರಾಮ ಪಂಚಾಯಿತಿ