

ಬಾಗಲಕೋಟೆ: ಬೀದರ್ ಜಿಲ್ಲೆಯ ಬಸವ ಕಲ್ಯಾಣದಲ್ಲಿ ಅ.೨೮ ರಿಂದ ೩೦ರ ವರೆಗೆ ೨೨ನೇ ಕಲ್ಯಾಣ ಪರ್ವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕೂಡಲಸಂಗಮದ ಬಸವಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ಹೇಳಿದರು.
ನಗರದ ಪ್ರೇಸ್‌ಕ್ಲಬ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವ ಧರ್ಮ ಪೀಠ ಸಂಸ್ಥೆಯು ಬಸವ ಕಲ್ಯಾಣವನ್ನು ಲಿಂಗಾಯತ ಧರ್ಮಿಯರ ಧರ್ಮ ಕ್ಷೇತ್ರವೆಂದು ೨೦೦೨ರಲ್ಲಿ ಘೋಷಿಸಿದ ನಂತರ ಅಲ್ಲಿಂದ ಪ್ರತಿ ವರ್ಷ ಕಲ್ಯಾಣ ಪರ್ವ ಎಂಬ ಧಾರ್ಮಿಕ ಸಮಾವೇಶವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಅ.೨೮ ರಂದು ಬೆಳಗ್ಗೆ ೧೦:೩೦ಕ್ಕೆ ಅರಣ್ಯ ಇಲಾಖೆ ಸಚಿವ ಈಶ್ವರ ಖಂಡ್ರೆ ೨೨ನೇ ಕಲ್ಯಾಣ ಪರ್ವ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ತಾವು, ಬಸವ ಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದೇವರು, ಪಾಂಡೋಮಟ್ಟಿ ವಿರಕ್ತಮಠದ ಗುರುಬಸವ ಸ್ವಾಮೀಜಿ, ಬಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದೇವರು, ಹುಲಸೂರ ಗುರುಬಸವೇಶ್ವರ ಸಂಸ್ಥಾನ ಮಠದ ಶಿವಾನಂದ ಸ್ವಾಮೀಜಿ ಕಾರ್ಯಕ್ರಮದ ಸಾನಿಧ್ಯ ವಹಿಸಲಿದ್ದಾರೆ. ಶಾಸಕ ಶರಣು ಸಲಗರ, ಬಸವ ಕಲ್ಯಾಣ ಬಸವೇಶ್ವರ ದೇವಸ್ಥಾನ ಪಂಚಕಮಿಟಿ ಅಧ್ಯಕ್ಷ ಬಸವರಾಜ ಕೊರಕೆ, ಪೌರಾಡಳಿತ ಸಚಿವ ರಹೀಂ ಖಾನ್ ಸೇರಿದಂತೆ ಅನೇಕರು ಪಾಲ್ಗೊಳ್ಳಲಿದ್ದಾರೆ. ಸಂಜೆ ೪ಕ್ಕೆ ಧರ್ಮ ಚಿಂತನ ಗೋಷ್ಠಿ ಸಮಾರಂಭ ಜರುಗಲಿದೆ ಎಂದು ತಿಳಿಸಿದರು.
ಅ.೨೯ ರಂದು ಬೆಳಗ್ಗೆ ೭.೩೦ ಗಂಟೆಗೆ ಶರಣ ವಂದನೆ ಕಾರ್ಯಕ್ರಮದ ಮೂಲಕ ೧೨ನೇ ಶತಮಾನದ ಶರಣರನ್ನು ಸ್ಮರಿಸಲಾಗುತ್ತದೆ. ೧೦ಕ್ಕೆ ಧರ್ಮ ಚಿಂತನಗೋಷ್ಠಿ ಸಮಾರಂಭ ಜರುಗಲಿದ್ದು, ಕೇಂದ್ರ ರಸಗೊಬ್ಬರ ಖಾತೆ ಸಚಿವ ಭಗವಂತ ಖೂಬಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶಾಸಕ ಶೈಲೇಂದ್ರ ಬೆಲ್ದಾಳೆ ಹಾಗೂ ಪ್ರಭು ಚವ್ಹಾಣ ಪಾಲ್ಗೊಳ್ಳಲಿದ್ದಾರೆ. ಮಧ್ಯಾಹ್ನ ೩.೩೦ಕ್ಕೆ ಮಹಿಳಾ ಗೋಷ್ಠಿ, ಸಂಜೆ ೭ಕ್ಕೆ ಅಲ್ಲಮಪ್ರಭು ಶೂನ್ಯ ಪೀಠಾರೋಹಣ ಕಾರ್ಯಕ್ರಮ ಜರುಗಲಿದೆ ಎಂದು ಹೇಳಿದರು.
ಅ.೩೦ ರಂದು ಬೆಳಗ್ಗೆ ೭:೩೦ಕ್ಕೆ ಅಂಗನಾಗಲಾಂಬಿಕಾ ಸಂಸ್ಮರಣೆ ಅಂಗವಾಗಿ ಬಸವ ಧರ್ಮದ ವಿಜಯೋತ್ಸವ ಹಮ್ಮಿಕೊಳ್ಳಲಾಗಿದೆ. ಇದರ ಅಂಗವಾಗಿ ಬೆಳಗ್ಗೆ ೯ಕ್ಕೆ ಶರಣರು ಸೇರಿದಂತೆ ಅನೇಕ ಜಾನಪದ ಕಲಾ ತಂಡಗಳಿಂದ ಬೃಹತ್ ಪಥಸಂಚಲನ ಜರುಗಲಿದೆ. ಮಧ್ಯಾಹ್ನ ೨ಕ್ಕೆ ಸಮಾರೋಪ ಸಮಾರಂಭ ಜರುಗಲಿದೆ. ಕಾರ್ಯಕ್ರಮಕ್ಕೆ ರಾಜ್ಯ ಸೇರಿದಂತೆ ಅನೇಕ ರಾಜ್ಯಗಳಿಂದ ಅಂದಾಜು ೨ ಲಕ್ಷಕ್ಕೂ ಹೆಚ್ಚಿನ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಕೂಡಲಸಂಗಮದ ಬಸವ ಧರ್ಮ ಪೀಠದ ಮಹಾದೇಶ್ವರ ಸ್ವಾಮೀಜಿ ಹಾಗೂ ಗುರುಬಸಪ್ಪ ನಿಲುಗಲ್ಲ ಇದ್ದರು.