ಬಾಗಲಕೋಟೆ: ಬಿವಿವಿ ಸಂಘದ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ, ಕೊಟಕ್ ಮಹೀಂದ್ರಾ ಬ್ಯಾಂಕ್‌ನ ಆರ್‌ಸೆಟ್ ಸಂಸ್ಥೆಯ ರಜತ ಮಹೋತ್ಸವ ಅ.೨೬ ರಂದು ಹಮ್ಮಿಕೊಳ್ಳಲಾಗಿದೆ ಎಂದು ಬಿವಿವಿ ಸಂಘದ ಕಾರ್ಯಾಧ್ಯಕ್ಷ, ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.
ನಗರದ ಬಿವಿವಿ ಸಂಘದ ಮಿನಿ ಸಭಾಭವನದಲ್ಲಿ ಆರ್‌ಸೆಟ್ ಸಂಸ್ಥೆ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ೧೯೯೯ ರ ಅ.೨ ರಂದು ಸ್ಥಾಪಿತವಾಗಿದ್ದು, ಈಗ ರಜತ ಮಹೋತ್ಸವ ಆಚರಿಸಿಕೊಳ್ಳುತ್ತಿದೆ ಎಂದರು.
ಔಪಚಾರಿಕ ಶಿಕ್ಷಣದ ಜೊತೆ ಶಿಕ್ಷಣವಿಲ್ಲದೇ ವಿಶೇಷವಾಗಿ ಬಡತನ ರೇಖೆಗಿಂತ ಕೆಳಗಿರುವ ವರ್ಗಕ್ಕೆ ಸೇರಿದ ೧೮ ರಿಂದ ೪೫ ವರ್ಷ ವಯಸ್ಸಿನ ನಿರುದ್ಯೋಗಿ ಗ್ರಾಮೀಣ ಯುವ ಸಮೂಹಕ್ಕೆ ೬೦ ಕ್ಕೂ ಹೆಚ್ಚು ವಿವಿಧ ಕೌಶಲ ತರಬೇತಿ ನೀಡುತ್ತಿದೆ. ಈವರೆಗೆ ಒಟ್ಟು ೧೨೩೬ ತರಬೇತಿ ಕಾರ್ಯಕ್ರಮ ಆಯೋಜಿಸಿದೆ ಎಂದು ತಿಳಿಸಿದರು.
೩೦ ಸಾವಿರ ಮಹಿಳೆಯರು, ೧೦೬೦೦ ಪುರುಷರು ಹಾಗೂ ೨೬೦ ಜನ ತೃತಿಯಲಿಂಗಿಗಳು ಸೇರಿ ಈವರೆಗೆ ೪೧ ಸಾವಿರ ಅಭ್ಯರ್ಥಿಗಳಿಗೆ ತರಬೇತಿ ನೀಡಿದ್ದು, ಇವರಲ್ಲಿ ೩೧ ಸಾವಿರ ಜನ ಸ್ವಯಂ ಉದ್ಯೋಗ ಕೈಗೊಂಡು ಬದುಕಿಗೆ ನೆಲೆ ಕಂಡುಕೊಂಡಿದ್ದಾರೆ. ಸರ್ಕಾರದ ಪ್ರಾಯೋಜಕತ್ವದಲ್ಲಿ ವಿವಿಧ ರೀತಿಯ ತರಬೇತಿಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.
ಆರ್‌ಸೆಟ್ ಸಂಸ್ಥೆಯ ರಜತ ಮಹೋತ್ಸವದ ಅಂಗವಾಗಿ ಅ.೨೬ ರಿಂದ ೨೮ ರವರೆಗೆ ಮೂರು ದಿನಗಳ ಕಾಲ ಗೌರಿಶಂಕರ ಕಲ್ಯಾಣ ಮಂಟಪದಲ್ಲಿ ವಿವಿಧ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆಗಳನ್ನು ಹಾಕಲಾಗುತ್ತದೆ. ಸಾರ್ವಜನಿಕರು ಮುಕ್ತವಾಗಿ ಭೇಟಿ ನೀಡಬಹುದು ಎಂದು ಹೇಳಿದರು.
ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಎಸ್.ಅಂಗಡಿ ಮಾತನಾಡಿ, ಆರ್‌ಸೆಟ್ ಸಂಸ್ಥೆ ೬೦ ವಿಷಯಗಳಲ್ಲಿ ತರಬೇತಿ ನೀಡುತ್ತಿದ್ದು, ಈ ವರ್ಷ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಟೇಲರಿಂಗ್, ಬ್ಯೂಟಿ ಪಾರ್ಲರ, ಪಾಲ್ಟ್ರಿಫಾರ್ಮ, ಸಾವಯವ ಕೃಷಿ ಹೀಗೆ ಅನೇಕ ರೀತಿಯ ತರಬೇತಿ ನೀಡಲಾಗುತ್ತಿದ್ದು, ಸುಸಜ್ಜಿತ ವರ್ಕಶಾಫ್ ಇವೆ. ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಗುತ್ತಿದೆ. ಊಟ, ವಸತಿ ಉಚಿತವಾಗಿದ್ದು, ತರಬೇತಿಯ ನಂತರ ಪ್ರಮಾಣ ಪತ್ರ ನೀಡುವುದಲ್ಲದೇ, ಆರ್ಥಿಕ ಸಹಾಯ ಸಿಗುವಂತೆಯೂ ಸಂಸ್ಥೆ ಮಾಡುತ್ತಿದೆ ಎಂದು ತಿಳಿಸಿದರು.
ಅ.೨೬ ಸಮಾರಂಭ: ಅ.೨೬ ರಂದು ಬೆಳಗ್ಗೆ ೧೦.೩೦ ಗಂಟೆಗೆ ಬಸವೇಶ್ವರ ಇಂಜನಿಯರಿಂಗ್ ಕಾಲೇಜಿನ ಅಡಿಟೋರಿಯಂನಲ್ಲಿ ರಜತ ಮಹೋತ್ಸವ ಸಮಾರಂಭ ನಡೆಯಲಿದ್ದು, ಸಂಸದ ಪಿ.ಸಿ.ಗದ್ದಿಗೌಡರÀ ಉದ್ಘಾಟಿಸಲಿದ್ದಾರೆ. ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ಜಿಲ್ಲಾಽಕಾರಿ ಜಾನಕಿ ಕೆ.ಎಂ., ಸಿಇಒ ಶಶಿಧರ ಕುರೇರ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಬಿವಿವಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸಾಧನೆ ಮಾಡಿದ ಯುವ ಉದ್ಯಮಿಗಳನ್ನು ಸನ್ಮಾನಿಸಲಾಗುವುದು ಎಂದು ಅಂಗಡಿ ತಿಳಿಸಿದರು.
ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಆಡಳಿತ ಮಂಡಳಿ ಸದಸ್ಯರಾದ ಮಹೇಶ ಅಥಣಿ, ಶಿವಾನಂದ ಶಾಬಾದಿ, ಬಸವರಾಜ ದೇಸಾಯಿ, ಎಸ್.ಆರ್.ಮನಹಳ್ಳಿ, ಆರ್‌ಸೆಟ್ ನಿರ್ದೇಶಕ ಶರಣಬಸವ ಹೂನೂರ ಇದ್ದರು.