ಅ.೨೬ ರಂದು ಜಿಲ್ಲಾಮಟ್ಟದ ಕ್ರೀಡಾಕೂಟ

bkt-24-7
ಬಾಗಲಕೋಟೆ ನಗರದ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಕ್ರೀಡಾಕೂಟ ಸಮಿತಿ ಅಧ್ಯಕ್ಷ ಡಾ.ಗಿರೀಶ ಮಾಸೂರಕರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಏಕಲ್ ಅಭಿಯಾನದ ಜಿಲ್ಲಾ ಕಾರ್ಯದರ್ಶಿ ಡಾ.ಶೇಖರ ಮಾನೆ, ಏಕಲ್ ಅಭಿಯಾನದ ಸಂಯೋಜಕ ಪ್ರಶಾಂತ ಪತ್ತಾರ, ವಿಜಯ ಸುಲಾಖೆ ಸೇರಿ ಇತರರು ಇದ್ದರು.
Published on

ಬಾಗಲಕೋಟೆ: ಕರ್ನಾಟಕ ಏಕಲ್ ಅಭಿಯಾನ ಹಾಗೂ ಅಂಚಲ್ ಅಭಿಯಾನ ಸಮಿತಿ ಆಶ್ರಯದಲ್ಲಿ ಗ್ರಾಮೀಣ ಭಾಗದ ಕ್ರೀಡಾ ಪ್ರತಿಭೆಗಳನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸಲು ಅ.೨೬ ರಂದು ನಗರದ ಸಕ್ರಿ ಕಾಲೇಜ್ ಮೈದಾನದಲ್ಲಿ ಜಿಲ್ಲಾಮಟ್ಟದ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿದೆ ಎಂದು ಕ್ರೀಡಾಕೂಟ ಸಮಿತಿ ಅಧ್ಯಕ್ಷ ಡಾ.ಗಿರೀಶ ಮಾಸೂರಕರ ಹೇಳಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ ೧೦ ಗಂಟೆಗೆ ಕ್ರೀಡಾಕೂಟಕ್ಕೆ ಸಂಸದ ಪಿ.ಸಿ.ಗದ್ದಿಗೌಡರ ಚಾಲನೆ ನೀಡಲಿದ್ದಾರೆ. ೨೦೦ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ ಎಂದರು.

ಏಕಲ್ ಅಭಿಯಾನದ ಜಿಲ್ಲಾ ಕಾರ್ಯದರ್ಶಿ ಡಾ.ಶೇಖರ ಮಾನೆ ಮಾತನಾಡಿ, ವಿಶ್ವ ಹಿಂದು ಪರಿಷತ್ ಅಡಿ ೧೯೮೯ರಲ್ಲಿ ಏಕಲ್ ಅಭಿಯಾನ ಆರಂಭಗೊಂಡಿದ್ದು, ಈಗ ಆರ್‌ಎಸ್‌ಎಸ್‌ನ ಒಂದು ಅಂಗವಾಗಿ ಕೆಲಸ ಮಾಡುತ್ತಿದೆ. ೨೦೧೧ರಿಂದ ಜಿಲ್ಲೆಯಲ್ಲಿ ಏಕಲ್ ಅಭಿಯಾನ ಆರಂಭಗೊಂಡು ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿಸುವುದು, ಏಕಲ್ ಅಭಿಯಾನದ ಶಾಲೆಗಳನ್ನು ಆರಂಭಿಸಿ ಮಕ್ಕಳಲ್ಲಿ ದೇಶಭಕ್ತಿ, ಭಾರತೀಯ ಸಂಸ್ಕೃತಿ, ಸತ್ಸಂಗ, ಆರೋಗ್ಯ, ಶಿಕ್ಷಣ ಕುರಿತು ಜಾಗೃತಿ ಮೂಡಿಸುವ ಕೆಲಸ ನಡೆದಿದೆ ಎಂದರು.

ಬಾದಾಮಿಯ ೩೦ ಗ್ರಾಮಗಳಲ್ಲಿ ಆರಂಭಗೊಂಡ ಏಕಲ್ ವಿದ್ಯಾಲಯ ರಾಜ್ಯಾದ್ಯಂತ ೧,೫೦೦ ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಜಿಲ್ಲೆಯಲ್ಲಿ ೨೧೦ ಗ್ರಾಮಗಳಲ್ಲಿ ೬ ರಿಂದ ೧೪ ವರ್ಷದೊಳಗಿವರಿಗೆ ಏಕೋಪಾಧ್ಯಾಯ ಶಾಲೆಯ ಮೂಲಕ ಪಂಚಮುಖಿ ಶಿಕ್ಷಣ ನೀಡುತ್ತಿದೆ ಎಂದು ತಿಳಿಸಿದರು.

ಪ್ರತಿವರ್ಷ ಗ್ರಾಮೀಣಮಟ್ಟದಿಂದ ರಾಷ್ಟ್ರೀಯ ಮಟ್ಟದವರೆಗೆ ವಿವಿಧ ಹಂತಗಳ ಕ್ರೀಡಾಕೂಟ ನಡೆಸಿ ಮಕ್ಕಳ ಕ್ರೀಡಾ ಪ್ರತಿಭೆಯನ್ನು ಬೆಳಕಿಗೆ ತರುವಲ್ಲಿ ಯಶಸ್ವಿಯಾಗಿದೆ. ಪ್ರಥಮ ವರ್ಷದಲ್ಲಿ ಬಾಗಲಕೋಟೆ ಜಿಲ್ಲೆಯ ಏಕಲ್ ವಿದ್ಯಾಲಯ ಮಕ್ಕಳು ಉತ್ತರ ಪ್ರದೇಶದಲ್ಲಿ ನಡೆದ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವುದನ್ನು ಸ್ಮರಿಸಿದರು.

ಏಕಲ್ ಅಭಿಯಾನದ ಸಂಯೋಜಕ ಪ್ರಶಾಂತ ಪತ್ತಾರ ಮಾತನಾಡಿ, ಈಗಾಗಲೇ ತಾಲೂಕಾ ಮಟ್ಟದ ಏಕಲ್ ಅಭಿಯಾನದಿಂದ ಕ್ರೀಡಾಕೂಟ ನಡೆದಿದ್ದು, ಜಿಲ್ಲಾಮಟ್ಟದ ಕ್ರೀಡೆಯಲ್ಲಿ ವಿಜೇತರಾದವರನ್ನು ರಾಷ್ಟ್ರೋತ್ಥಾನ ವಿದ್ಯಾಲಯದಲ್ಲಿ ನಡೆಯುವ ರಾಜ್ಯಮಟ್ಟದ ಕ್ರೀಡೆಗೆ ಕಳಿಸಲಾಗುವುದು ನಂತರ ಓಡಿಶಾದಲ್ಲಿ ರಾಷ್ಟ್ರಮಟ್ಟದ ಕ್ರೀಡೆ ನಡೆಯಲಿದೆ. ೧೦೦ ಮೀ.ಓಟ, ಎತ್ತರ ಜಿಗಿತ, ಕಬಡ್ಡಿ, ಕುಸ್ತಿ, ಯೋಗಾಸನ, ಮತ್ತು ಅಥ್ಲೇಟಿಕ್ಸ್ ಕ್ರೀಡೆಯನ್ನು ನಡೆಸಲಾಗುತ್ತಿದೆ ೨೦೦ ಜನ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಮುಖಂಡ ವಿಜಯ ಸುಲಾಖೆ ಸೇರಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net