

ಹಾಸನ :ಉದ್ಯಮ ಶೀಲತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಫಸ್ಟ್ ಸರ್ಕಲ್ ಸಂಸ್ಥೆಯಿಂದ ವಿವಿಧ ಜಿಲ್ಲೆಗಳಲ್ಲಿ ಉದ್ಯೋಗ ಮೇಳಗಳನ್ನು ಹಮ್ಮಿಕೊಂಡಿದ್ದು, ಹಾಸನ ನಗರದ ಎವಿಕೆ ಕಾಲೇಜಿನಲ್ಲಿ ಅ.6ರ ಶುಕ್ರವಾರ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಸದಸ್ಯ ನಂದೀಶ್ ತಿಳಿಸಿದರು.
ಫಸ್ಟ್ ಸರ್ಕಲ್ ಸಂಸ್ಥೆಯು ಸಮಾಜದಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸಲು ಮತ್ತು ಮತ್ತು ಸಂಪನ್ಮೂಲಗಳ ಪರಸ್ಪರ ಹಂಚಿಕೆಯನ್ನು ಉತ್ತೇಜಿಸಲು ಸ್ಥಾಪಿಸಲಾಗಿದೆ. ಇದು ಉದ್ಯಮಿಗಳಿಗೆ ಉದ್ಯಮಶೀಲತೆ ಮತ್ತು ವ್ಯಾಪಾರದಲ್ಲಿ ಸಹೋದರತ್ವವನ್ನು ಸೃಷ್ಟಿಸುವ ಅನುಕೂಲಕರ ವಾತಾವರಣವನ್ನು ಉತ್ತೇಜಿಸಲು ಪ್ರಯೋಜನಕಾರಿಯಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕೌಶಲ ಅಭಿವೃದ್ಧಿ ನಿಗಮದ ಸಹಯೋಗದೊಂದಿಗೆ ನಗರದಲ್ಲಿ ಅ.6ರ ಶುಕ್ರವಾರದಂದು ಉದ್ಯೋಗ ಮೇಳವನ್ನು ನಡೆಸುವ ಮೂಲಕ ಉದ್ಯೋಗ ಆಕಾಂಕ್ಷಿಗಳಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಉದ್ದೇಶಿಸಿದೆ. ಈ ಕಾರ್ಯಕ್ರಮದ ಏಕೈಕ ಉದ್ದೇಶವೆಂದರೆ ನುರಿತ ಗ್ರಾಮೀಣ ಉದ್ಯೋಗ ಆಕಾಂಕ್ಷಿಗಳಿಗೆ ಉನ್ನತ ಅವಕಾಶವನ್ನು ಒದಗಿಸುವುದು. ಫಸ್ಟ್ ಸರ್ಕಲ್ ಸಂಸ್ಥೆಯು ಉದ್ಯೋಗ ಮೇಳವನ್ನು 40ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳ ಸಹಯೋಗದೊಂದಿಗೆ ಆಯೋಜಿಸುತ್ತಿದೆ ಎಂದರು.
ಹಾಸನದಲ್ಲಿ ಉದ್ಯೋಗ ಮೇಳ ಮುಗಿದ ನಂತರ ಅ. 27ರಂದು ಮಂಡ್ಯದ ಪಿಇಎಸ್ ಕಾಲೇಜು, ನವೆಂಬರ್ 3ರಂದು ಕೋಲಾರದ ಸಿ. ಬೈರೇಗೌಡ ತಾಂತ್ರಿಕ ಸಂಸ್ಥೆ, ನವೆಂಬರ್ 17 ರಂದು ಮೈಸೂರಿನ ವಿದ್ಯಾವರ್ಧಕ ಕಾಲೇಜು ಆಫ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ. ಡಿಸೆಂಬರ್ 1, 2 ಮತ್ತು 3 ರಂದು ಮೂರು ದಿನಗಳ ಕಾಲ ಜಾಬ್ ಎಕ್ಸ್‌ಪೋವನ್ನು ಬೆಂಗಳೂರಿನ ಟೆನಿಸ್ ಪೆವಿಲಿಯನ್ ಅರಮನೆ ಮೈದಾನ ಹಮ್ಮಿಕೊಳ್ಳಲಾಗಿದೆ. ಇಲ್ಲಿ 120 ಕಂಪನಿಗಳ ಭಾಗವಹಿಸಲಿವೆ. ಈ ಬೃಹತ್ ಉದ್ಯೋಗ ಮೇಳದಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಅಭಿವೃದ್ಧಿ ಅಧಿಕಾರಿ ಶಿವಕುಮಾರ್, ಸದಸ್ಯರಾದ ಪುಟ್ಟೇಗೌಡ, ನಾಗರಾಜುಗೌಡ ಇತರರು ಉಪಸ್ಥಿತರಿದ್ದರು.