

ಹಾಸನ: ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಎ.ಗೋಪಾಲಸ್ವಾಮಿ ಅವರ ಹುಟ್ಟುಹಬ್ಬದ ಪ್ರಯುಕ್ತ ಆಲ್ ಇಂಡಿಯಾ ವಾಲಿಬಾಲ್ ಪಂದ್ಯಾವಳಿ, ಉಚಿತ ಆರೋಗ್ಯ ಮೇಳ ಅ.4ರಿಂದ 6ರ ವರೆಗೆ ನಡೆಯಲಿದೆ ಎಂದು ವಾಲಿಬಾಲ್ ಫೆಡರೇಷನ್ ರಾಜ್ಯ ಕಾರ್ಯದರ್ಶಿ ನಂದಕುಮಾರ್ ಅವರು ತಿಳಿಸಿದರು.
ಚನ್ನರಾಯಪಟ್ಟಣದ ಮಾಧ್ಯಮಿಕ ಶಾಲಾ ಆವರಣದಲ್ಲಿ ಪುರಷ ಮತ್ತು ಮಹಿಳಾ ಆಲ್ ಇಂಡಿಯಾ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ ಅ.4ರಿಂದ 6ರವರೆಗೆ ನಡೆಯಲಿದೆ. ಪಂದ್ಯದಲ್ಲಿ ಅಂತಾರಾಷ್ಟ್ರೀಯ ವಾಲಿಬಾಲ್ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಚೆನ್ನೈ, ಕೇರಳ, ಕರ್ನಾಟಕ, ಆಂಧ್ರಪ್ರದೇಶ ಸೇರಿ ವಿವಿಧೆಡೆಗಳಿಂದ ತಂಡಗಳು ಭಾಗವಹಿಸಲಿವೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಪ್ರಥಮ ಸ್ಥಾನ ಪಡೆದ ತಂಡಕ್ಕೆ ಒಂದು ಲಕ್ಷರೂ., 2ನೇ ಸ್ಥಾನಕ್ಕೆ 75 ಸಾವಿರರೂ. 3ನೇ ಸ್ಥಾನಕ್ಕೆ 50 ಸಾವಿರ, 4ನೇ ಸ್ಥಾನಕ್ಕೆ 40 ಸಾವಿರರೂ. ಬಹುಮಾನ ಹಾಗು ಟ್ರೋಫಿ ನೀಡಲಾಗುವುದು. ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ, ಕೃಷಿ ಸಚಿವ ಚೆಲುವರಾಯಸ್ವಾಮಿ, ಸಂಸದ ಶ್ರೇಯಸ್ ಪಟೇಲ್ ಸೇರಿ ಹಲವು ಜನಪ್ರತಿನಿಧಿಗಳು, ಮುಖಂಡರು ಭಾಗವಹಿಸಲಿದ್ದಾರೆ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಎ.ಗೋಪಾಲಸ್ವಾಮಿ ಮಾತನಾಡಿ, ಅ.6ರಂದು ಆದಿಚುಂಚನಗಿರಿ ವೈದ್ಯಕೀಯ ಮಹಾ ವಿದ್ಯಾಲಯ ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದ ಸಹಕಾರದಿಂದ ಚನ್ನರಾಯಪಟ್ಟಣದ ಮಾಧ್ಯಮಿಕ ಶಾಲಾ ಆವರಣದಲ್ಲಿ ಆರೋಗ್ಯ ಮೇಳ ಹಮ್ಮಿಕೊಳ್ಳಲಾಗಿದೆ. ಶಿಬಿರದಲ್ಲಿ ಹೃದ್ರೋಗ, ನರರೋಗ, ಮೂತ್ರಪಿಂಡ, ಮಧುಮೇಹ, ಪಿತ್ತಜನಕಾಂಗ ಸಮಸ್ಯೆ, ಕ್ಯಾನ್ಸ್‌ರ್ ತಪಾಸಣೆ, ಮಕ್ಕಳ ಚಿಕಿತ್ಸೆ, ವೈದ್ಯಕೀಯ ಶಸ್ತ್ರಚಿಕಿತ್ಸೆ, ಗರ್ಭಿಣಿ ಮತ್ತು ಸ್ತ್ರೀರೋಗ, ಕೀಲು ಮತ್ತು ಮೂಳೆ, ಕಿವಿ,ಮೂಗು, ಗಂಟಲು, ದಂತವೈದ್ಯ ಚಿಕಿತ್ಸೆ, ಕಣ್ಣಿನ ಪರೀಕ್ಷೆ, ಚರ್ಮರೋಗ, ಮಾನಸಿಕ ರೋಗಕ್ಕೆ ಸಂಬಂಧಿಸಿದ ತಪಾಸಣೆ ಮತ್ತು ಚಿಕಿತ್ಸೆ ನೀಡಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಮಂಜು, ಶಿವರಾಮ್, ವಾಸು, ಕೆಂಪಣ್ಣ ಹಾಜರಿದ್ದರು.