

ಹಾಸನ: ನಗರದ ಅಂಬೇಡ್ಕರ್ ಭವನದಲ್ಲಿ ಆ.3 ಮತ್ತು 4 ರಂದು ಪ್ರಥಮ ಬಾರಿಗೆ ಜಿಲ್ಲೆಯಲ್ಲಿ ಸೀನಿಯರ್ ಪುರುಷರ ಮತ್ತು ಮಹಿಳೆಯರ ರಾಜ್ಯ ಮಟ್ಟದ ಪವರ್ ಲಿಪ್ಟಿಂಗ್ ಚಾಂಪಿಯನ್ ಶಿಪ್ ಹಾಗೂ ರಾಷ್ಟ್ರಮಟ್ಟಕ್ಕೆ ರಾಜ್ಯ ತಂಡದ ಆಯ್ಕೆ ನಡೆಯಲಿದೆ ಎಂದು ಅಂತಾರಾಷ್ಟ್ರೀಯ ಕ್ರೀಡಾಪಟು ಹಾಗೂ ಶಿಕ್ಷಕ ಹನುಮಂತೇಗೌಡ ತಿಳಿಸಿದರು.
ಕರ್ನಾಟಕ ಪವರ್ ಲಿಪ್ಟಿಂಗ್ ಅಸೋಸಿಯೇಷನ್, ಜಿಲ್ಲಾ ಪವರ್ ಲಿಪ್ಟಿಂಗ್ ಅಸೋಸಿಯೇಷನ್ ಸಂಯುಕ್ತಾಶ್ರಯದಲ್ಲಿ ಸೀನಿಯರ್ ಪುರುಷ ಹಾಗೂ ಮಹಿಳೆಯರ ರಾಜ್ಯಮಟ್ಟದ ಪವರ್ ಲಿಪ್ಟಿಂಗ್ ಚಾಂಪಿಯನ್ ಶಿಪ್‌ನಗರದ ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ. 59 ಕೆಜಿಯಿಂದ ಹಿಡಿದು 120+ ಕೆಜಿ ವಿಭಾಗದ ವರೆಗೆ 8 ವಿಭಾಗದಲ್ಲಿ ಪವರ್ ಲಿಫ್ಟ್ ಸ್ಪರ್ಧೆ ನಡೆಯಲಿದೆ. ರಾಜ್ಯದ ವಿವಿಧೆಡೆಗಳಿಂದ ಅಂತಾರಾಷ್ಟ್ರೀಯ ಕ್ರೀಡಾಪಟುಗಳು ಸೇರಿದಂತೆ ಸುಮಾರು 300 ಮಂದಿ ಕ್ರೀಡಾಪಟುಗಳು ಭಾಗಿಯಾಗಲಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಚಾಂಪಿಯನ್ ಹೆಚ್ಚಾಗಿ ಮಂಗಳೂರು, ಉಡುಪಿ, ಮೈಸೂರು, ಬೆಂಗಳೂರಿನಿಂದ ಆಗಮಿಸುವರು. ಈ ವೇಳೆ ರಾಷ್ಟ್ರಮಟ್ಟದ ತಂಡದ ಆಯ್ಕೆ ಸಹ ನಡೆಯಲಿದೆ. ರಾಜ್ಯದ ಸ್ಟ್ರಾಂಗ್ ಮೆನ್ ಮತ್ತು ವುಮೆನ್ ಹಾಗೂ ಆಕರ್ಷಕ ಟ್ರೋಫಿ ಪದಕಗಳ ವಿತರಣೆ ಮಾಡಲಾಗುವುದು ಎಂದರು.
ಆಗಸ್ಟ್ 3 ಮತ್ತು 4 ರಂದು ಎರಡು ದಿನಗಳ ಕಾಲ ನಡೆಯುವ ಸ್ಪರ್ಧೆಗೆ ತೀರ್ಪುಗಾರರಾಗಿ ರಾಷ್ಟ್ರ ಮತ್ತು ರಾಜ್ಯ ಮಟ್ಟದಿಂದ 15 ಜನರು ಬರಲಿದ್ದಾರೆ. ಮುಖ್ಯವಾಗಿ ಮಂಗಳೂರಿನ ಪವರ್ ಲಿಪ್ಟಿಂಗ್ ಇಂಡಿಯಾ ಅಧ್ಯಕ್ಷ ಸತೀಶ್ ಕುಮಾರ್ ಕುದ್ರೋಳಿ ಪಾಲ್ಗೊಳ್ಳುವರು. ಆಸಕ್ತಿ ಇದ್ದವರು 9483467084 ಹಾಗೂ 9964182654 ನಂಬರ್ ಸಂಪರ್ಕಿಸಬಹುದು ಎಂದರು.
ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಈ.ಕೃಷ್ಣೇಗೌಡ ಮಾತನಾಡಿ, ಪವರ್ ಲಿಫ್ಟಿಂಗ್ ಉತ್ತಮ ಕ್ರೀಡೆಯಾಗಿದ್ದು, ಇದನ್ನು ಎಲ್ಲರೂ ಪ್ರೋತ್ಸಾಹಿಸಬೇಕು ಎಂದು ವಿನಂತಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪವರ್ ಲಿಪ್ಟಿಂಗ್ ಅಸೋಸಿಯೇಷನ್ ಸಂಘಟನಾ ಕಾರ್ಯದರ್ಶಿ ಮೋಹನ್ ಕುಮಾರ್, ಸದಸ್ಯ ನಿರಂಜನ್, ನಿರ್ದೇಶಕ ವೇಣುಗೋಪಾಲ್, ಧರ್ಮ ಇತರರು ಇದ್ದರು.