ಚಾಮರಾಜನಗರ : ಮಲೆಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಸ್ವಚ್ಛತಾ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರನ್ನು ಖಾಯಂಗೊಳಿಸುವಂತೆ ಆಗ್ರಹಿಸಿ ಅ.20 ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಪೌರಕಾರ್ಮಿಕರ ಸಂಘದ ಅಧ್ಯಕ್ಷ ಡಿ.ಆರ್.ರಾಜು ತಿಳಿಸಿದರು.
ಹನೂರು ತಾಲೂಕಿನ ಮಲೆಮಹದೇಶ್ವರಸ್ವಾಮಿ ಬೆಟ್ಟದ ರಾಜಗೋಪುರದ ಮುಂಭಾಗ ಬೆಳಗ್ಗೆ 10 ಗಂಟೆಗೆ ಸುಮಾರು 500 ಕ್ಕೂ ಹೆಚ್ಚು ಪೌರಕಾರ್ಮಿಕರ ಸಮ್ಮುಖದಲ್ಲಿ ಪ್ರತಿಭಟನೆ ನಡೆಸಲಾಗುವುದು. ಕಳೆದ 15 ವರ್ಷಗಳಿಂದಲೂ ಪ್ರಾಧಿಕಾರದಲ್ಲಿ 87 ಕ್ಕೂ ಹೆಚ್ಚು ಪೌರಕಾರ್ಮಿಕರು ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ ಅವರನ್ನು ಇಲ್ಲಿಯವರೆಗೂ ಖಾಯಂಗೊಳಿಸಿಲ್ಲ. ಹಾಗಾಗಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಮಲೆಮಹದೇಶ್ವರಸ್ವಾಮಿ ದೇವಸ್ಥಾನಕ್ಕೆ ವಾರ್ಷಿಕವಾಗಿ 120-130 ಕೋಟಿ ರೂ, ಆದಾಯ ಬರುತ್ತಿದ್ದು, ಮುಜರಾಯಿ ಧಾರ್ಮಿಕ ದತ್ತಿ ಕಾಯ್ದೆಯ ಅನ್ವಯ ಸಿಬ್ಬಂದಿ ವೆಚ್ಚವು ಶೇ.35 ಮೀರಬಾರದು ಎಂಬ ನಿಯಮವಿದೆ. ಆದರೆ ಪ್ರಸ್ತುತ ಶೇ.24 ರಷ್ಟು ಮಾತ್ರ ಖರ್ಚಾಗುತ್ತಿದ್ದು, ಸಿಬ್ಬಂದಿಗಳಿಗೆ ವೆಚ್ಚ ಮಾಡುವ ಅವಕಾಶ ಇರುವುದರಿಂದ ಕಳೆದ 15 ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರನ್ನು ಖಾಯಂಗೊಳಿಸಬೇಕು ಎಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಸಂಘದ ಗೌರವಾಧ್ಯಕ್ಷ ಮಂಜುನಾಥ್, ಕಾರ್ಯಾಧ್ಯಕ್ಷ ಮಂಚಯ್ಯ, ಉನ್ನತಿ ಸಮಿತಿ ಅಧ್ಯಕ್ಷ ಬ್ಯಾಂಕ್ ರಂಗಣ್ಣ, ಗೌರವ ಸಲಹೆಗಾರ ಶ್ರೀನಿವಾಸ, ಸಲಹೆಗಾರ ಸಿ.ಆರ್.ವಿಜಯ್, ಜಿಲ್ಲಾಧ್ಯಕ್ಷ ಹೊನ್ನೂರು ಆರ್ಮುಗಂ, ಮಹಿಳಾ ಘಟಕದ ಅಧ್ಯಕ್ಷೆ ತಂಗಮ್ಮ ಹಾಜರಿದ್ದರು.