

ಹಾಸನ: ಜಿಲ್ಲೆಯ ಸಮಗ್ರ ಮತ್ತು ಸಮರ್ಪಕ ಅಭಿವೃದ್ಧಿ ಕುರಿತು ಬೃಹತ್ ವಿಚಾರ ಸಂಕಿರಣ ಮತ್ತು ಪೂರ್ವಭಾವಿ ವಿಚಾರ ಗೋಷ್ಠಿಗಳು ಹಾಗೂ
ಪ್ರಬಂಧ ಸ್ಪರ್ಧೆಯನ್ನು ಅ.20 ರಂದು ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್ ತಿಳಿಸಿದರು.
ಜಿಲ್ಲೆಯ ಕೃಷಿ, ಪರಿಸರ ಉಳಿಸಿ, ಕೈಗಾರಿಕೆಗಳನ್ನು ಸ್ಥಾಪಿಸಿ, ವಾಣಿಜ್ಯ ಮತ್ತು ಉದ್ಯೋಗ ಸೃಷ್ಟಿಸಿ ಎಂಬ ಘೋಷಣೆ ಅಡಿಯಲ್ಲಿ ಸಮಗ್ರ ಮತ್ತು ಸಮರ್ಪಕ ಅಭಿವೃದ್ಧಿ ಆಶಯ ಬೃಹತ್ ವಿಚಾರ ಸಂಕಿರಣದ ಉದ್ದೇಶ.ವಿಚಾರ ಸಂಕಿರಣದಲ್ಲಿ ಕೃಷಿ, ಪರಿಸರ, ಕೈಗಾರಿಕೆ ಮತ್ತು ವಾಣಿಜ್ಯ ವಿಷಯಗಳ ತಜ್ಞರು ಹಾಗೂ ಸಾಮಾಜಿಕ ಮತ್ತು ಆರ್ಥಿಕ ಚಿಂತಕರಿಂದ ಜಿಲ್ಲೆಗೆ ಸಂಬಂಧಿಸಿದ ಸಂಶೋಧನೆ ಮತ್ತು ಅಧ್ಯಯನದ ಆಧಾರದಲ್ಲಿ ಸಿದ್ಧಪಡಿಸಿದ ವಿಷಯಗಳ ಪ್ರಬಂಧ ಮಂಡನೆ, ಸಂವಾದ ಮತ್ತು ಚರ್ಚಾ ಗೋಷ್ಟಿ ನಡೆಸಲಾಗುವುದು ಎಂದು ಸುದ್ದಿಗೋಷ್ಠಿ ಹೇಳಿದರು.
ವಿಚಾರ ಸಂಕಿರಣಕ್ಕೆ ಉಸ್ತುವಾರಿ ಸಚಿವರು, ಸಂಸದರು, ಶಾಸಕರು, ಜಿಲ್ಲಾಡಳಿತದ ಪ್ರಮುಖ ಅಧಿಕಾರಿಗಳು, ವಿವಿಧ ಕ್ಷೇತ್ರಗಳ ಪ್ರಮುಖರು ದಲಿತ, ರೈತ, ಕಾರ್ಮಿಕ, ಪರಿಸರ ಮತ್ತು ಜನಪರ ಚಳುವಳಿಗಳ ಮುಖಂಡರನ್ನು ಆಹ್ವಾನಿಸಲಾಗುವುದು. ಅಲ್ಲದೆ ಪರಿಸರ ಸಂರಕ್ಷಣೆ, ಕಾಡು ಪ್ರಾಣಿ ಮಾನವ ಸಂಘರ್ಷ ಮತ್ತು ಅಭಿವೃದ್ಧಿ, ಕಾಫಿ, ತೆಂಗು, ಕಬ್ಬು, ಆಲೂಗೆಡ್ಡೆ ಮತ್ತು ಕೃಷಿ ವಾಣಿಜ್ಯಾಭಿವೃದ್ಧಿ ಹಾಗೂ ಹಾಸನ ಜಿಲ್ಲೆಯ ಸಾಮಾಜಿಕ ಮತ್ತು ಆರ್ಥಿಕ ತಾರತಮ್ಯದ ಪ್ರಶ್ನೆಗಳು ಕುರಿತಾದ ವಿಚಾರ ಗೋಷ್ಟಿ ಆಯೋಜಿಸಲಾಗುತ್ತಿದೆ ಎಂದು ಹೇಳಿದರು.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗುತ್ತಿದ್ದು, ಅತ್ಯುತ್ತಮ ಪ್ರಬಂಧ ಬರೆದ ವಿದ್ಯಾರ್ಥಿಗಳಿಗೆ ಅದೇ ದಿನ ಗಣ್ಯರಿಂದ ಸನ್ಮಾನಿಸಿ ಬಹುಮಾನ ನೀಡಲಾಗುವುದು. ಸಾರ್ವಜನಿಕರು ಮತ್ತು ಸಂಘ- ಸಂಸ್ಥೆಗಳಿಂದಲೂ ಜಿಲ್ಲೆಯ ಅಭಿವೃದ್ಧಿ ಸಂಬಂಧ ಅಭಿಪ್ರಾಯ ಮತ್ತು ಸಲಹೆ ಆಹ್ವಾನಿಸಿದ್ದು, ಉಪಯುಕ್ತ ಅಭಿಪ್ರಾಯ ಮತ್ತು ಸಲಹೆ ವಿಚಾರ ಸಂಕಿರಣದಲ್ಲಿ ಪ್ರಸ್ತಾಪಿಸಲಾಗುವುದು ಎಂದರು.
ಜಿಲ್ಲೆಯ ಕಾಫಿ, ತೆಂಗು, ಆಲೂಗೆಡ್ಡೆ, ಭತ್ತ, ಕಬ್ಬು, ಶುಂಠಿ, ಜೋಳ ಸೇರಿ ಪ್ರಮುಖ ಕೃಷಿ ಉತ್ಪನ್ನಗಳ ಆಧಾರದಲ್ಲಿ ವಾಣಿಜ್ಯ ಮತ್ತು ಉದ್ಯಮಗಳ ಬೆಳವಣಿಗೆಗೆ ಸಾಕಷ್ಟು ಅವಕಾಶಗಳಿವೆ. ಕಾಡು ಪ್ರಾಣಿಗಳು, ಆನೆ-ಮಾನವ ಸಂಘರ್ಷ ವಿಕೋಪದ ಹಂತ ತಲುಪಿದೆ. ಜಿಲ್ಲೆಯ ಜನರಲ್ಲಿ ಆರ್ಥಿಕ ಮತ್ತು ಸಾಮಾಜಿಕ ಅಂತರ ಹೆಚ್ಚಾಗುತ್ತಿದೆ. ಈ ಹಿನ್ನೆಲೆ ಜಿಲ್ಲೆಯ ನಿರ್ದಿಷ್ಟ ಸಮಸ್ಯೆ ಕುರಿತು ಸೂಕ್ತ ಅಧ್ಯಯನ ಮತ್ತು ಸಂಶೋಧನೆ ಆಧಾರದಲ್ಲಿ ಜಿಲ್ಲೆಯ ಸಮಗ್ರ ಮತ್ತು ಸಮರ್ಪಕ ಅಭಿವೃದ್ಧಿ ಕುರಿತು ವಿಚಾರ ಸಂಕಿರಣ ಸಂಘಟಿಸಲಾಗುತ್ತಿದೆ. ಇಲ್ಲಿ ಸಂಶೋಧನೆ ಮತ್ತು ಅಧ್ಯಯನ ಆಧಾರದಲ್ಲಿ ಮಂಡಿಸುವ ವಿಷಯ ಮತ್ತು ಸಮಗ್ರ ಚರ್ಚೆಯಿಂದ ವ್ಯಕ್ತವಾಗುವ ಅಭಿಪ್ರಾಯಗಳ ಆಧಾರದಲ್ಲಿ ಅಂತಿಮ ವರದಿ ಸಿದ್ಧಪಡಿಸಿ ರಾಜ್ಯ ಸರ್ಕಾರ, ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಜಿಲ್ಲಾಡಳಿತಕ್ಕೆ ಸಲ್ಲಿಸಲಾಗುವುದು. ಪುಸ್ತಕ ರೂಪದಲ್ಲೂ ಬಿಡುಗಡೆ ಮಾಡಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಸೌಮ್ಯ, ಹೆಚ್.ಆರ್. ನವೀನ್ ಕುಮಾರ್, ರಮೇಶ್, ಎಂ.ಜಿ. ಪೃಥ್ವಿ, ರಾಜು ಸಿಗರನಹಳ್ಳಿ ಇದ್ದರು.