

ಹನೂರು: ತಾಲೂಕಿನ ದೊಮ್ಮನಗದ್ದೆ ಗ್ರಾಮದ ಶ್ರೀ ಶನೈಶ್ಚರಸ್ವಾಮಿ ದೇಗುಲದಲ್ಲಿ ಅ.1 ಮತ್ತು 2 ರಂದು 58ನೇ ವರ್ಷದ ದಸರಾ ಉತ್ಸವ ನಡೆಯಲಿದೆ.
ಅ.1ರಂದು ಮಹಾನವಮಿಯಂದು ದೇಗುಲದಲ್ಲಿ ಸ್ವಾಮಿಗೆ ಪುಣ್ಯಾವಾಚನ, ನವಗ್ರಹ ಹೋಮ, ಅಭಿಷೇಕ ಹಾಗೂ ಆಯುಧಪೂಜೆ ವಿಶೇಷ ಪೂಜಾ ಕೈಂಕರ್ಯಗಳು ಜರಗುಲಿದೆ. ಅ.2ರಂದು ವಿಜಯದಶಮಿಯಂದು ಸ್ವಾಮಿಗೆ ಎಣ್ಣೆಮಜ್ಜನ ಅಭಿಷೇಕ, ಹಾಲಿನ ಅಭಿಷೇಕ ಹಾಗೂ ಪಂಚಾಭಿಷೇಕ ಸೇವೆ ನಡೆಯಲಿದೆ. ಮಧ್ಯಾಹ್ನ 12 ಗಂಟೆಯ ಬಳಿಕ ಕಾಮಧೇನು, ಕಲ್ಪವೃಕ್ಷ, ಕುದುರೆ ವಾಹನ, ಗುರುಡ ವಾಹನ, ಪಲ್ಲಕ್ಕಿ ಮಂಟಪವನ್ನು ಸತ್ತಿಗೆ ಸೂರಿಪಾನಿ ಹಾಗೂ ವಾದ್ಯಮೇಳದೊಂದಿಗೆ ದೇಗುಲದ ಸುತ್ತ ಮೆರವಣಿಗೆ ನಡೆಯಲಿದೆ. 3 ಗಂಟೆಯ ನಂತರ ವಿವಿಧ ಉತ್ಸವ ಮೂರ್ತಿಯೊಂದಿಗೆ ದೇಗುಲದ ಸುತ್ತ 9 ಬಾರಿ ಪ್ರದಕ್ಷಿಣೆ ಹಾಕಲಾಗುವುದು.
ದೇಗುಲದ ಸಮೀಪದ ಬನ್ನಿವೃಕ್ಷಕ್ಕೆ ಮೆರವಣಿಗೆಯ ಮೂಲಕ ತೆರಳಿ ಗಣಪತಿ ಪೂಜೆ, ಕಾಶಿ ವಿಶ್ವನಾಥಸ್ವಾಮಿ, ಛಾಯಾದೇವಿ, ಆಂಜನೇಯಸ್ವಾಮಿ, ಸುಬ್ರಹ್ಮಣ್ಯಸ್ವಾಮಿ ಹಾಗೂ ನವಗ್ರಹ ದೇವತೆಗಳಿಗೆ ವಿಶೇಷ ಪೂಜೆ ಸಲ್ಲಿಸಲಾಗುವುದು. ಈ ಮೂಲಕ ದಸರಾ ಉತ್ಸವವನ್ನು ನೆರವೇರಿಸಲಾಗುವುದು. ರಾತ್ರಿ 9 ಗಂಟೆಗೆ ಬೆಂಗಳೂರು ಮುನಿಯಪ್ಪ ದಾಸರ ತಂಡದಿಂದ ಹರಿಕಥೆಯನ್ನು ಆಯೋಜಿಸಲಾಗಿದೆ. ಆಗಮಿಸುವ ಭಕ್ತರಿಗೆ ನಿರಂತರ ದಾಸೋಹವಿರುತ್ತದೆ ಎಂದು ದೇಗುಲದ ಪ್ರಧಾನ ಅರ್ಚಕ ಗೋವಿಂದರಾಜು ತಿಳಿಸಿದ್ದಾರೆ.