

ಮೈಸೂರು: ಕೆ.ಆರ್.ಪೇಟೆ ತಾಲೂಕು ಅಂಬಿಗರಹಳ್ಳಿ ಬಳಿಯ ಕಾವೇರಿ, ಹೇಮಾವತಿ, ಲಕ್ಷ್ಮಣತೀರ್ಥ ತ್ರಿವೇಣಿ ಸಂಗಮದಲ್ಲಿ ಅ.13ರಿಂದ 16 ರವರೆಗೆ ಶ್ರೀಮಲೆ ಮಹಾದೇಶ್ವರ ಮಹಾಕುಂಭಮೇಳ ಜರುಗಲಿದೆ.
9 ವರ್ಷಗಳ ಬಳಿಕ ಆಯೋಜಿಸಿರುವ ಎರಡನೇ ಮಹಾ ಕುಂಭಮೇಳ ಇದಾಗಿದ್ದು, ನಾಲ್ಕು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಗಳು, ಕುಂಭ, ಪುಣ್ಯಸ್ನಾನ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಸುತ್ತೂರು ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶ್ರೀಶೈಲದಿಂದ ಬಂದ ಮಲೆ ಮಹದೇಶ್ವರರ ರಾಜ್ಯದಲ್ಲಿ ಮೊದಲು ಉಳಿದುಕೊಂಡು ಪವಾಡ ಮೆರೆದ ಪವಿತ್ರ ಕ್ಷೇತ್ರ ಎನ್ನುವ ಪ್ರತೀತಿ ಇದೆ. ತಿ.ನರಸೀಪುರ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಮೂರನೇ ನದಿ ಗುಪ್ತಗಾಮಿನಿಯಾಗಿ ಹರಿದರೆ, ಅಂಬಿಗರಹಳ್ಳಿ- ಸಂಗಾಪುರ- ಪುರ ಗ್ರಾಮದ ಬಳಿ ಕಾವೇರಿ, ಹೇಮಾವತಿ ಹಾಗೂ ಲಕ್ಷ್ಮಣ ತೀರ್ಥ ನದಿಗಳು ಸಂಗಮ ಅಗುವುದನ್ನು ಕಣ್ಣಾರೆ ಕಾಣಬಹುದು ಎಂದರು.
ಈ ಹಿಂದೆ 2013ರಲ್ಲಿ ಪ್ರಥಮ ಮಹಾಕುಂಭಮೇಳವನ್ನು ಆಯೋಜಿಸಲಾಗಿತ್ತು. ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಸೇರಿದಂತೆ ನಾಡಿನ ಎಲ್ಲೆಡೆಯಿಂದ ಭಕ್ತರು ಆಗಮಿಸಲಿದ್ದಾರೆ ಎಂದು ಹೇಳಿದರು.
ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ ಮಾತನಾಡಿ, ಕುಂಭಮೇಳದ ಯಶಸ್ಸಿಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ದೂರದಿಂದ ಬರುವ ಸ್ವಾಮೀಜಿಗಳು, ಸಂತರು, ಭಕ್ತರಿಗೆ ಉಳಿದುಕೊಳ್ಳಲು ವ್ಯವಸ್ಥೆ ಇದೆ. ನೂರು ಕೆಎಸ್‌ಆರ್‌ಟಿಸಿ ಬಸ್‌ಗಳು, ಪಾರ್ಕಿಂಗ್ ಜಾಗದಿಂದ ಮಲೆ ಮಹದೇಶ್ವರ ದೇವಸ್ಥಾನಕ್ಕೆ ತೆರಳಲು 40 ಮಿನಿ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ವೈದ್ಯಕೀಯ ಸೌಲಭ್ಯ, ಪೊಲೀಸ್ ಬಂದೋಬಸ್ತ್, 4 ಸಾವಿರ ಸ್ವಯಂಸೇವಕರನ್ನು ನಿಯೋಜಿಸಲಾಗುವುದು ಎಂದು ಮಾಹಿತಿ ನೀಡಿದರು.
ಕುಂಭಮೇಳಕ್ಕೆ ಸರ್ಕಾರ 4 ಕೋಟಿ ರೂ. ಬಿಡುಗಡೆ ಮಾಡಿದೆ. ದಾನಿಗಳಿಂದಲೂ ಧವಸ ಇನ್ನಿತರ ವಸ್ತುಗಳನ್ನು ಸಂಗ್ರಹಿಸಲಾಗುತ್ತಿದೆ. ಸುಮಾರು 5ರಿಂದ 6 ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದ್ದು, ದಾಸೋಹ ವ್ಯವಸ್ಥೆ ಮಾಡಲಾಗಿದೆ ಎಂದರು.
ಬೇಬಿ ಮಠದ ಡಾ.ಶ್ರೀ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಮಾತನಾಡಿ, ಮಹಾತ್ಮರು ಅಡಿ ಇಟ್ಟ ಈ ಸಂಗಮದಲ್ಲಿ ಆಯೋಜಿಸಿರುವ ಮಹಾಕುಂಭಮೇಳದಲ್ಲಿ ಪುಣ್ಯಸ್ನಾನ ಮಾಡಿದರೆ ಸಕಲ ಪಾಪಕರ್ಮಗಳು ನಿವಾರಣೆಯಾಗಿ ಪುಣ್ಯ ಲಭಿಸುತ್ತದೆ ಎಂಬ ಪ್ರತೀತಿ ಇದೆ. ಹಾಗಾಗಿ ಆದಿಚುಂಚನಗಿರಿ ಶ್ರೀ, ಸುತ್ತೂರು ಶ್ರೀ ಅವರ ಸಾನ್ನಿಧ್ಯದಲ್ಲಿ ನಾಡಿನ ಹಲವು ಶ್ರೀಗಳು, ಧರ್ಮಾಧಿಕಾರಿಗಳ ಸಮ್ಮುಖದಲ್ಲಿ ನಡೆಯುವ ಕುಂಭಮೇಳದಲ್ಲಿ ಭಕ್ತರು ಭಾಗವಹಿಸುವಂತೆ ಮನವಿ ಮಾಡಿದರು.
ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಮಾತನಾಡಿ, ಮೇಳದ ಅಂಗವಾಗಿ ಮಹದೇಶ್ವರ ಬೆಟ್ಟದಿಂದ 3 ಜ್ಯೋತಿ ರಥಯಾತ್ರೆಗಳಿಗೆ ಚಾಲನೆ ನೀಡಲಾಗಿದ್ದು, ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಯ ಭಾಗಗಳಲ್ಲಿ ಯಾತ್ರೆ ಸಂಚರಿಸಿದೆ. ಅ.13ರಂದು 3 ಜ್ಯೋತಿ ರಥಗಳ ಮಹಾಸಂಗಮವಾಗಿ ಕೆ.ಆರ್.ಪೇಟೆ ಪಟ್ಟಣದಿಂದ ಮೆರವಣಿಗೆ ಮೂಲಕ ತ್ರಿವೇಣಿ ಸಂಗಮಕ್ಕೆ ತಲುಪಲಿವೆ. ಅಲ್ಲಿ ಸಂಗಮದಲ್ಲಿ ಮಲೆಮಹದೇಶ್ವರರ ಮೂರ್ತಿ ಪ್ರತಿಷ್ಠಾಪನೆ ಸೇರಿದಂತೆ ವಿವಿಧ ಧಾರ್ಮಿಕ ವಿಧಾನಗಳು ನೆರವೇರಲಿವೆ ಎಂದರು.
ಅ. 14ರಂದು ಬೆಳಗ್ಗೆ 11ಕ್ಕೆ ಮಹಾಕುಂಭಮೇಳಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಚಾಲನೆ ನೀಡುವರು. ಅ.15ರಂದು ಮಹಾಕುಂಭಮೇಳದ ಧಾರ್ಮಿಕ ಸಭೆ ಆಯೋಜಿಸಲಾಗಿದೆ ಎಂದರು.
ಅ. 16ರಂದು ಕುಂಭಮೇಳದ ಪುಣ್ಯಸ್ನಾನ ಜರುಗಲಿವೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ವಿಶೇಷ ಅತಿಥಿಯಾಗಿ ಭಾಗವಹಿಸಿ ಕಾರ್ಯಕ್ರಮ ಉದ್ಘಾಟಿಸುವರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮಾರೋಪ ಭಾಷಣ ಮಾಡುವರು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇತರರು ಭಾಗವಗಹಿಸಲಿದ್ದಾರೆ ಎಂದರು.
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಮೇಯರ್ ಶಿವಕುಮಾರ್, ಸಂಸದ ಪ್ರತಾಪಸಿಂಹ, ಮಂಡ್ಯ ಜಿಲ್ಲಾಧಿಕಾರಿ ಎಸ್.ಅಶ್ವಥಿ, ಪಾಂಡವಪುರ ಉಪವಿಭಾಗಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ, ಅಂಬಿಗರಹಳ್ಳಿಯ ಸಣ್ಣಸ್ವಾಮಿಗೌಡ, ಜೆಎಸ್‌ಎಸ್ ವಿದ್ಯಾಪೀಠದ ಕಾರ್ಯದರ್ಶಿಗಳಾದ ಮಂಜುನಾಥ್, ಶಿವಕುಮಾರ್ ಇತರರಿದ್ದರು.
ಕುಂಭಮೇಳದ ವಿಶೇಷ
ಕೆ.ಆರ್. ಪೇಟೆಯಲ್ಲಿ ಅ. 13ರಂದು 112 ಕಲಾತಂಡಗಳೊಂದಿಗೆ ಜ್ಯೋತಿ ರಥಯಾತ್ರೆ, ಅ. 14 ಮತ್ತು 15ರಂದು ವಾರಾಣಸಿ ಮಾದರಿ ಕಾವೇರಿ ನದಿಯ ತ್ರಿವೇಣಿ ಸಂಗಮದಲ್ಲಿ ಸಂಜೆ ವಿಶೇಷ ಗಂಗಾರತಿ, ವಿಶೇಷ ಲೇಸರ್ ಶೋ, ಅ.16ರಂದು ಮಠಾಧೀಶರು, ಯತಿಗಳಿಂದ ಕುಂಭಸ್ನಾನ, ಯೋಗಿ ಆದಿತ್ಯನಾಥ, ಬಸವರಾಜ ಬೊಮ್ಮಾಯಿ, ಬಿ.ಎಸ್. ಯಡಿಯೂರಪ್ಪ ಇನ್ನಿತರರು ಭಾಗಿ.