ಚಾಮರಾಜನಗರ: ಶ್ರೀವಿದ್ಯಾಗಣಪತಿ ಮಂಡಳಿ 63ನೇ ವರ್ಷದ ಪೂಜಾ ಮಹೋತ್ಸವ ಹಾಗೂ ಬ್ರಹ್ಮೋಸ್ ಗಣಪತಿ ವಿಸರ್ಜನೆ ಅಂಗವಾಗಿ ಅ.6 ರಿಂದ 12 ರವರೆಗೆ ವೈವಿದ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ನಗರದ ರಥದ ಬೀದಿಯಲ್ಲಿ ನಿರ್ಮಾಣ ಮಾಡಿರುವ ಶ್ರೀಶಿವಕುಮಾರಸ್ವಾಮಿ ಅವರ ಸಾಂಸ್ಕೃತಿಕ ವೇದಿಕೆಯಲ್ಲಿ ಅ.6 ರ ಸಂಜೆ 6 ಗಂಟೆಗೆ ನಡೆಯಲಿರುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಟಿ.ನರಸೀಪುರ ತಾಲೂಕಿನ ಮುಡುಕನಪುರ ಶ್ರೀಹಲವಾರ ಮಠದ ಶ್ರೀಷಡಕ್ಷರ ದೇಶಿಕೇಂದ್ರ ಸ್ವಾಮೀಜಿ ಆಶಿರ್ವಚನ ನೀಡುವರು. ದಕ್ಷಿಣ ಕನ್ನಡ ಜಿಲ್ಲೆಯ ಸಾಮಾಜಿಕ ಕಾರ್ಯಕರ್ತ ನವೀನ್ ಸುಬ್ರಹ್ಮಣ್ಯ ಹಿಂದು ಸಮಾಜ ಮತ್ತು ಗಣೇಶೋತ್ಸವ ಕುರಿತು ಮಾತನಾಡುವರು. ಬಳಿಕ ವಿದುಷಿ ರಂಜಿತಾ ಸೋಮಶೇಖರ್ ತಂಡದವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ.
ಅ.7 ರಂದು ಮೈಸೂರಿನ ರಜನಿಕಾಂತ್ ಅವರ ಸೂಪರ್ ಮೆಲೋಡಿಸ್ ವತಿಯಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ಅ.8 ರಂದು ಮಜಾಭಾರತ ಮತ್ತು ಗಿಚ್ಚಗಿಲಿಗಿಲಿ ಖ್ಯಾತಿಯ ಕಲಾವಿದರು ಹಾಗೂ ಮಿಮಿಕ್ರಿ ಗೋಪಿ ಅವರಿಂದ ಹಾಸ್ಯ ರಸಸಂಜೆ ಕಾರ್ಯಕ್ರಮ ನಡೆಯಲಿದೆ. ಅ.9 ರಂದು ಉಮ್ಮತ್ತೂರು ಚಂದ್ರು ಮೆಲೋಡಿಸ್ ತಂಡದವರಿಂದ ಸಂಗೀತ ರಸಸಂಜೆ ಕಾರ್ಯಕ್ರಮ. ಅ.10 ರಂದು ಬೆಂಗಳೂರು ಮಿಲನ್ ಮ್ಯೂಸಿಕಲ್ ನೈಟ್ಸ್ ತಂಡದವರಿಂದ ಆರ್ಕೇಸ್ಟ್ರಾ ಕಾರ್ಯಕ್ರಮ. ಅ.11 ರಂದು ಅವತಾರ್ ಡ್ಯಾನ್ಸ್ ಇನ್‌ಸ್ಟಿಟ್ಯೂಟ್ ತಂಡದವರಿಂದ ನೃತ್ಯ ವೈಭವ ಕಾರ್ಯಕ್ರಮ ಹಾಗೂ ಅ.12 ರಂದು ಬೆಂಗಳೂರಿನ ಹೆಸರಾಂತ ಎಸ್2 ಈವೆಂಟ್ ತಂಡದವರಿಂದ ಸಂಗೀತ ಹಾಗೂ ನೃತ್ಯ ರಸಸಂಜೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಅ.13 ರಂದು ಗಣಪತಿ ವಿಸರ್ಜನೆ:
ಶ್ರೀವಿದ್ಯಾಗಣಪತಿ ವತಿಯಿಂದ ಅ.9 ರಂದು ಬೆಳಗ್ಗೆ 7.30 ಗಂಟೆಗೆ ಲೋಕ ಕಲ್ಯಾಣಾರ್ಥಕವಾಗಿ ಗಣಪತಿ ಹೋಮ ಮತ್ತು ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಅ.13 ರಂದು ಬ್ರಹ್ಮೋಸ್ ಗಣಪತಿ ವಿಸರ್ಜನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಶ್ರೀದೊಡ್ಡರಸನ ಕೊಳದ ಆವರಣದಲ್ಲಿ ಸನ್ನಿಧಿ ಮೆಲೋಡಿಸ್ ತಂಡದವರಿಂದ ಭಕ್ತಗೀತೆಗಳ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.