

ಹುಬ್ಬಳ್ಳಿ: ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಕನ್ನಡದ ನಂ. 1 ದಿನಪತ್ರಿಕೆ ವಿಜಯವಾಣಿ ಭಾನುವಾರದಂದು ಇಲ್ಲಿನ ತೋಳನಕೆರೆ ಬಳಿ ಆಯೋಜಿಸಿದ್ದ ವಿವಿಧ ಕಾರ್ಯಕ್ರಮಗಳಲ್ಲಿ ಝುಂಬಾ ಡಾನ್ಸ್ ಗಮನ ಸೆಳೆಯಿತು.
ಪ್ರಿಯಾಂಕಾ ನಾಯ್ಡು ಅವರು ಸುಮಾರು 40 ನಿಮಿಷಗಳವರೆಗೆ ನಡೆಸಿಕೊಟ್ಟ ಝುಂಬಾ ಡಾನ್ಸ್, ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಹಿಳೆಯರಲ್ಲಿ ಸಂಚಲನ ಮೂಡಿಸಿತು. ಅಗ ತಾನೇ ಯೋಗಾಸನ ಮುಗಿಸಿದ್ದ ಮಹಿಳೆಯರು, ಝುಂಬಾ ಡಾನ್ಸ್ನಲ್ಲಿ ಕುಣಿದು ಸಂಭ್ರಮಿಸಿದರು.
ಸ್ಯಾಂಡಲ್ವುಡ್, ಬಾಲಿವುಡ್ ಹಾಗೂ ಹಾಲಿವುಡ್ನ ವಿವಿಧ ಹಾಡುಗಳಿಗೆ ಪ್ರಿಯಾಂಕಾ ನಾಯ್ಡು ನೃತ್ಯ ಮಾಡುತ್ತಿದ್ದಂತೆಯೇ, ಅಲ್ಲಿ ಸೇರಿದ್ದ ಮಹಿಳೆಯರು ಸಹ ಅವರನ್ನು ಹಿಂಬಾಲಿಸಿ ಅದೇ ರೀತಿಯ ನೃತ್ಯ ಮಾಡಿದರು.
ಶಕಿರಾ ಅವರು ಹಾಡಿರುವ "ವಕಾ..ವಕಾ...ದಿಸ್ ಟೈಮ್ ಾರ್ ಆಫ್ರಿಕಾ...', ಕನ್ನಡ ಚಿತ್ರಗಿತೆ "ರಾ..ರಾ.. ರಕ್ಕಮ್ಮ...', "ಟಗರು ಬಂತು..ಟಗರು...' ಹಾಡುಗಳು ಝುಂಬಾ ನೃತ್ಯಕ್ಕೆ ಮೆರಗು ಹೆಚ್ಚಿಸಿತ್ತು.
ಮಕ್ಕಳು, ಯುವತಿಯರು, ಗೃಹಿಣಿಯರಷ್ಟೇ ಅಲ್ಲದೇ ಕೆಲವು ವಯಸ್ಸಾದ ಮಹಿಳೆಯರು ಸಹ ಹೆಜ್ಜೆ ಹಾಕಿದರು. ಝುಂಬಾ ನೃತ್ಯದಲ್ಲಿ ತಲ್ಲೀನರಾದ ಮಹಿಳೆಯರಿಗೆ ಸಮಯ ಕಳೆದಿದ್ದು ಗಮನಕ್ಕೆ ಬರಲಿಲ್ಲ.
ಸುಳ್ಳದ ಶ್ರೀ ದುರ್ಗಾದೇವಿ ಮಹಿಳಾ ಸಂದವರು ಭರ್ಜರಿಯಾಗಿ ಡೋಲು ಬಾರಿಸಿದರು. ಮಹಿಳೆಯರ ಡೋಲಿನ ಶಬ್ದಕ್ಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರು ನೃತ್ಯ ಮಾಡಿದರು.
ಚಿತ್ರ ತಂಡ ಭಾಗಿ : "ಎಲ್ಲೋ ಜೋಗಪ್ಪ ನಿನ್ನರಮನೆ..' ಕನ್ನಡ ಚಲನಚಿತ್ರ ತಂಡ ಹುಬ್ಬಳ್ಳಿ ಮಹಿಳಾ ಉತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಭ್ರಮ ಪಟ್ಟರು. ಚಿತ್ರದ ನಿರ್ದೇಶಕ ಹಯವದನ, ನಾಯಕ ನಟ ಅಂಜನ್ ನಾಗೇಂದ್ರ, ನಾಯಕಿ ನಟಿ ವೆನ್ಯ ರೈ ಹಾಗೂ ಸಾಹಿತಿ ರವೀಂದ್ರ ಮುದ್ದಿ ಇದ್ದರು. ಮಹಿಳೆಯರಿಗಾಗಿ ಆಯೋಜಿಸಿದ್ದ ವಿವಿಧ ಆಟೋಟಗಳಲ್ಲಿ ವೆನ್ಯ ರೈ ಪಾಲ್ಗೊಂಡರು. ಸುಳ್ಳದ ಮಹಿಳಾ ಡೊಳ್ಳಿನ ತಂಡದೊಂದಿಗೆ ಅಂಜನ್ ನಾಗೇಂದ್ರ ಹಾಗೂ ವೆನ್ಯ ರೈ ಕೆಲ ಸಮಯ ನೃತ್ಯ ಮಾಡಿದರು.