ಸ್ವಕ್ಷೇತ್ರದ ಕಾರ್ಯಕರ್ತರು, ಸಮಾಜ ಮುಖಂಡರ ಜತೆ ಚರ್ಚಿಸಿ ತೀರ್ಮಾನ: ಸುಜಾತ ಕೃಷ್ಣಪ್ಪ

SUJATHA krishnappa
Published on

ಚಿಕ್ಕಮಗಳೂರು: ಜಿಪಂ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ವಿಚಾರದಲ್ಲಿ ಮೇಗುಂದಾ ಹೋಬಳಿಯ ಬಿಜೆಪಿ ಕಾರ್ಯಕರ್ತರು ಹಾಗೂ ತಮ್ಮ  ಸಮಾಜದ ಮುಖಂಡರ ಜತೆ ಸಮಾಲೋಚಿಸಿ ಅ.3 ರಂದು ಒಂದು ಉತ್ತಮ ನಿರ್ಧಾರ ಕೈಗೊಳ್ಳುವುದಾಗಿ ಜಿಪಂ ಅಧ್ಯಕ್ಷೆ ಸುಜಾತ ಕೃಷ್ಣಪ್ಪ ತಿಳಿಸಿದರು.

ಆಡಳಿತಾರೂಢ ಬಿಜೆಪಿಯ ಎಲ್ಲ ಸದಸ್ಯರು ಗೈರು ಹಾಜರಾಗಿ ಅಸಹಕಾರ ತೋರಿದ ಹಿನ್ನೆಲೆಯಲ್ಲಿ ಎರಡನೇ ಬಾರಿ ಸರ್ವ ಸದಸ್ಯರ ಸಭೆ ಮುಂದೂಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ತಾವು ಪಕ್ಷದ ತೀರ್ಮಾನಕ್ಕೆ ಬದ್ಧರಾಗಿದ್ದು, ಪಕ್ಷದ ಮೇಲೆ ನಮಗೆ ನಂಬಿಕೆ ಇದೆ. ಸರ್ವ ಸದಸ್ಯರ ಸಭೆ ನಡೆಸುವವರೆಗೆ ತಮಗೆ ಅಧಿಕಾರದಲ್ಲಿರಲು ಅವಕಾಶ ಕೊಡಿ ಎಂದು ಪಕ್ಷದ ವರಿಷ್ಠರನ್ನು ಕೋರಿದ್ದೆ. ಇದಕ್ಕೆ ಎಸ್‍ಸಿ ಮೋರ್ಚಾ ಸಹ ಒಪ್ಪಿಗೆ ನೀಡಿತ್ತು. ಈ ವಿಚಾರದಲ್ಲಿ ಸ್ಪಂದನೆ ದೊರೆಯುವ ನಿರೀಕ್ಷೆ ಇಟ್ಟುಕೊಂಡಿದ್ದು, ಅದೀಗ ಹುಸಿಯಾಗಿದೆ. ಕ್ರಿಯಾಯೋಜನೆಗೆ ಈಗಾಗಲೇ ಘಟನೋತ್ತರ ಮಂಜೂರಾತಿ ಪಡೆಯಲಾಗಿದ್ದರೂ ಸಾಮಾನ್ಯ ಸಭೆಯ ಒಪ್ಪಿಗೆ ಪಡೆಯದೇ ಇದ್ದಲ್ಲಿ ಬಿಲ್ ಮಾಡಿಸುವುದು ಕಷ್ಟವಾಗಲಿದೆ ಎಂದರು.

40 ತಿಂಗಳು ತೀರ್ಮಾನ

ಜಿಪಂ ಅಧ್ಯಕ್ಷ ಸ್ಥಾನದ ಬಗ್ಗೆ ಒಡಂಬಡಿಕೆಯಾದಾಗ ಮೊದಲ ಅವಧಿಗೆ 20 ತಿಂಗಳು, ಅನಂತರದ ಅವಧಿಗೆ 40 ತಿಂಗಳು ಎಂದು ತೀರ್ಮಾನವಾಗಿದೆ. ಹೀಗಿದ್ದರೂ ಕೋರ್ ಕಮಿಟಿ ತಮಗೆ ರಾಜೀನಾಮೆ ನೀಡಲು ಸೂಚಿಸಿದೆ. ಸರ್ವ ಸದಸ್ಯರ ಸಭೆ ಬಳಿಕ ರಾಜೀನಾಮೆ ನೀಡುವುದಾಗಿ ತಿಳಿಸಿದ್ದು, ಭಾನುವಾರದವರೆಗೂ ಪಕ್ಷದ ಎಲ್ಲ ಸದಸ್ಯರು ಸಭೆಗೆ ಬರುವುದಾಗಿ ತಿಳಿಸಿದ್ದರು. ಆದರೆ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಆರ್.ದೇವರಾಜಶೆಟ್ಟಿ ಅವರು ಯಾರೂ ಸಭೆಗೆ ಬರಬಾರದೆಂದು ಸೂಚಿಸಿದ್ದಾರೆಂದು ಗೊತ್ತಾಯಿತು. ಇದರಿಂದ ಬೇಸರವಾಗಿದ್ದು ತಾವು ಯಾವುದೇ ತಪ್ಪು ಮಾಡಿಲ್ಲ ಎಂದರು.

ತಮ್ಮ ಕ್ಷೇತ್ರದಲ್ಲಿ ಅಲ್ಲಿನವರೇ ಆದ ಮಾಜಿ ಸಚಿವ ಡಿ.ಎನ್.ಜೀವರಾಜ್ ತಮ್ಮ ಗೆಲುವಿಗೆ ನೆರವಾಗಿದ್ದು, ಈ ಬಗ್ಗೆ ಅವರೊಂದಿಗೆ ಚರ್ಚಿಸಿದಾಗ ರಾಜೀನಾಮೆ ವಿಚಾರದಲ್ಲಿ ಅವರ ಯಾವುದೇ ರೀತಿಯ ಪಾತ್ರವಿಲ್ಲ. ಈಗಿನ ಕೋರ್ ಕಮಿಟಿ ತೆಗೆದುಕೊಂಡಿರುವ ನಿರ್ಧಾರವೆಂದು ತಿಳಿಸಿದ್ದಾರೆ. ಯಾರೋ ಒಬ್ಬಿಬ್ಬರಿಂದ ಸಭೆ ನಡೆಯದಂತಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net