

ಸಿರಗುಪ್ಪ: ತಾಲೂಕಿನಲ್ಲಿ ಬಿಜೆಪಿಯಿಂದ ಸಮಗ್ರ ಅಭಿವೃದ್ಧಿ ಮಾಡಿದ್ದರೂ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗೆ ಹಿನ್ನಡೆಯಾಗಿರುವುದು ನೋವಿನ ಸಂಗತಿ ಎಂದು ಮಾಜಿ ಶಾಸಕ ಎಂ.ಎಸ್.ಸೋಮಲಿಂಗಪ್ಪ ಹೇಳಿದರು.
ನಗರದ ಕಮ್ಮವಾರಿ ಕಲ್ಯಾಣ ಮಂಟಪದಲ್ಲಿ ತಾಲೂಕು ಬಿಜೆಪಿ ಘಟಕದಿಂದ ಸೋಮವಾರ ಹಮ್ಮಿಕೊಂಡಿದ್ದ ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿದರು. ತಾಲೂಕಿನಲ್ಲಿ ಮೂರು ಬಾರಿ ಶಾಸಕನಾಗಿ ಸಾಮಾಜಿಕ ನ್ಯಾಯ ತತ್ವದಡಿ ಸೇವೆ ಸಲ್ಲಿಸಿದ್ದೇನೆ. ಆದರೆ, ಕೆಲವರು ವೈಯಕ್ತಿಕ ಕಾರ್ಯಗಳಿಗೆ ಬೆಂಬಲ ನೀಡದ್ದರಿಂದ ನಮ್ಮ ವಿರುದ್ಧ ಕಾರ್ಯನಿರ್ವಹಿಸುತ್ತಿರುವುದು ಬೇಸರ ಮೂಡಿಸಿದೆ.
ಆದರೂ ಪಕ್ಷದ ಸೋಲಿಗೆ ಕಾರಣಗಳನ್ನು ಹುಡುಕಿ ಸರಿಪಡಿಸಿಕೊಂಡು ಮುಂಬರುವ ಜಿಪಂ, ತಾಪಂ ಚುನಾವಣೆಯಲ್ಲಿ ಗೆಲುವಿಗೆ ಕಾರ್ಯಕರ್ತರು ಶ್ರಮಿಸಬೇಕು. ಕೇಂದ್ರ ಸರ್ಕಾರದ ಜನಪರ ಯೋಜನೆಗಳನ್ನು ಮತದಾರರಿಗೆ ತಲುಪಿಸಬೇಕು ಎಂದರು.
ಕೊಪ್ಪಳ ಲೋಕಸಭೆ ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರ್ ಮಾತನಾಡಿ, ನರೇಂದ್ರ ಮೋದಿ ಅವರನ್ನು ಮೂರನೇ ಬಾರಿಗೆ ಪ್ರಧಾನಿಯನ್ನಾಗಿಸುವ ಆಸೆಯೊಂದಿಗೆ ನಡೆದ ಈ ಚುನಾವಣೆಯಲ್ಲಿ ಯಶಸ್ಸು ಕಂಡಿದ್ದೇವೆ.
ಆದರೆ ನಮ್ಮ ಕ್ಷೇತ್ರದಲ್ಲಿ ಸೋಲು ಕಂಡಿರುವುದು ನಿರಾಸೆ ಮೂಡಿಸಿದೆ. ಆದರೂ ಕಾರ್ಯಕರ್ತರು ಎದೆಗುಂದದೆ ಮುಂಬರುವ ದಿನಗಳಲ್ಲಿ ಪಕ್ಷವನ್ನು ಮತ್ತಷ್ಟು ಬಲಗೊಳಿಸುವ ಕಾರ್ಯದಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳಬೇಕು ಎಂದರು. ತಾಲೂಕು ಅಧ್ಯಕ್ಷ ಕೆ.ಮಲ್ಲಿಕಾರ್ಜುನಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೊಡ್ಡ ಹುಲುಗಪ್ಪ, ಜಿಲ್ಲಾ ಉಪಾಧ್ಯಕ್ಷ ಗಾಳಿ ಶಂಕ್ರಪ್ಪ ಇತರರಿದ್ದರು.