ಸದ್ಯಕ್ಕೆ ಜಿಪಂ, ತಾಪಂ ಚುನಾವಣೆ ಇಲ್ಲ: ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮಾಹಿತಿ

12 NMG 01
Published on

ನಾಗಮಂಗಲ: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಂತರ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳು ನಡೆಯಲಿವೆ ಎಂದು ವಿಧಾನ ಪರಿಷತ್ ಸದಸ್ಯ ದಿನೇಶ್‌ಗೂಳಿಗೌಡ ಹೇಳಿದರು.

ತಾಲೂಕಿನ ಕಾಂತಾಪುರ ಗ್ರಾಮ ಪಂಚಾಯಿತಿ ವತಿಯಿಂದ ಕರಿಕ್ಯಾತನಹಳ್ಳಿ ಗ್ರಾಮದಲ್ಲಿ ನಿರ್ಮಿಸಿರುವ ಅಂಗಡಿ ಮಳಿಗೆಗಳನ್ನು ಸೋಮವಾರ ಉದ್ಘಾಟಿಸಿ ಮಾತನಾಡಿ, ಸದ್ಯಕ್ಕೆ ಸ್ಥಳೀಯ ಚುನಾವಣೆಗಳು ನಡೆಯುವುದಿಲ್ಲ. 2023ರಲ್ಲಿ ನಡೆಯುವ ವಿಧಾನಸಭೆ ಚುನಾವಣೆ ನಂತರವಷ್ಟೇ ನಡೆಯಲಿವೆ. ಗ್ರಾಪಂಗಳು ಸ್ಥಳೀಯವಾಗಿ ಆದಾಯವನ್ನು ಕ್ರೋಡೀಕರಿಸಿಕೊಂಡು ಲಾಭದಾಯಕವಾಗಿದ್ದಾಗ ಮಾತ್ರ ಹಳ್ಳಿಗಳ ಅಭಿವೃದ್ಧಿ ಸಾಧ್ಯ ಎಂದರು.

ಬಿಜೆಪಿ ಸರ್ಕಾರದ ದುರಾಡಳಿತದಿಂದ ಬೇಸತ್ತಿರುವ ದೇಶದ ಜನರಿಗೆ ಆತ್ಮಸ್ಥೈರ್ಯ ತುಂಬುವ ದೃಷ್ಟಿಯಿಂದ ರಾಹುಲ್ ಗಾಂಧಿ ಭಾರತ್ ಜೋಡೊ ಯಾತ್ರೆ ಮಾಡುತ್ತಿದ್ದಾರೆ. ಆಂತರಿಕ ಸಮೀಕ್ಷೆ ಪ್ರಕಾರ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 130 ರಿಂದ 140 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಗ್ರಾ.ಪಂ.ಅಧ್ಯಕ್ಷ ಶಂಭುಗೌಡ, ಗ್ರಾಪಂ ಸದಸ್ಯರಾದ ಕವಿತಾ ಯೋಗೇಶ್, ರಂಗಶೆಟ್ಟಿ, ಮುಖಂಡರಾದ ಸುನೀಲ್ ಲಕ್ಷ್ಮೀಕಾಂತ್, ಯೋಗೇಶ್, ತಾ.ಪಂ.ಮಾಜಿ ಸದಸ್ಯರಾದ ಕೃಷ್ಣೇಗೌಡ, ಪ್ರಕಾಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net