

ತುಮಕೂರು: ಸಾಂತ್ವನ ಕೇಂದ್ರಗಳು ಮತ್ತಷ್ಟು ಬಲಗೊಳ್ಳಬೇಕಿದ್ದು ಕೇವಲ ಹೆಸರಿಗಷ್ಟೇ ಕಾರ್ಯ ನಿರ್ವಹಿಸುವ ಕೇಂದ್ರಗಳಾಗಬಾರದು ಎಂದು ಜಿಪಂ ಉಪಕಾರ್ಯದರ್ಶಿ ರಮೇಶ್ ಹೇಳಿದರು.
ಜಿಲ್ಲಾ ಪಂಚಾಯಿತಿಯಲ್ಲಿ ಮಂಗಳವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸಾಂತ್ವನ ಕೇಂದ್ರಗಳ ಪ್ರಗತಿ ಪರಿಶೀಲನಾ ಸಾಂತ್ವನ ಸಭೆಯಲ್ಲಿ ಮಾತನಾಡಿದ ಅವರು, ಶೋಷಣೆಗೊಳಗಾಗುವ ಮಹಿಳೆಯರಿಗೆ ಆಶ್ರಯವಾಗಿರುವ ಸಾಂತ್ವನ ಕೇಂದ್ರಗಳು ಅತ್ಯಂತ ಕಡಿಮೆ ಅವಧಿಯಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸಿ ನೊಂದ ಮಹಿಳೆಯರಿಗೆ ನೆರವಾಗಬೇಕು ಎಂದರು.
2020ರ ಏಪ್ರಿಲ್‌ನಿಂದ ಡಿಸೆಂಬರ್ ಅಂತ್ಯದವರೆಗೆ ಜಿಲ್ಲೆಯಲ್ಲಿ ಒಟ್ಟು 1105 ಪ್ರಕರಣಗಳು ದಾಖಲಾಗಿವೆ. ಅವುಗಳಲ್ಲಿ 1003 ಪ್ರಕರಣ ಇತ್ಯರ್ಥಗೊಂಡಿವೆ. ಬಾಕಿ ಉಳಿದ 102 ಪ್ರಕರಣ ಶೀಘ್ರ ಇತ್ಯರ್ಥಗೊಳಿಸಿ. ಸಾಧ್ಯವಾದಷ್ಟು ಎರಡೂ ಕಡೆಯವರನ್ನೂ ಜತೆಗೂಡಿಸಿ ಸಮಾಲೋಚನೆ ಮೂಲಕವೇ ಸಮಸ್ಯೆ ಇತ್ಯರ್ಥಪಡಿಸಿ. ದಾಖಲಾಗಿರುವ ಪ್ರಕರಣಗಳು ಇತ್ಯರ್ಥವಾಗದೆ ಉಳಿದಿರುವ ಹಾಗೂ ಮಾನದಂಡಗಳನ್ನು ಪೂರೈಸದೆ, ಮಾರ್ಗಸೂಚಿಗಳನ್ನು ನಿರ್ಲಕ್ಷ್ಯ ವಹಿಸುವ ಕೇಂದ್ರಗಳಿಗೆ ನೋಟಿಸ್ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮಹಿಳೆಯರಿಗಾಗುವ ಶೋಷಣೆ ತಪ್ಪಿಸಲು ಪ್ರಕರಣಗಳನ್ನು ಶೀಘ್ರ ಇತ್ಯರ್ಥ ಪಡಿಸಬೇಕು. ಮಾಹಿತಿ ಬಂದ ತಕ್ಷಣವೇ ಸ್ಪಂದಿಸಿ, ಮುಕ್ತ ಸಮಾಲೋಚನೆ ನಡೆಸಬೇಕು. ಕೌಟುಂಬಿಕ ಸಮಸ್ಯೆಗಳು ಹೊರ ಜಗತ್ತಿಗೆ ಗೊತ್ತಾಗುವುದಿಲ್ಲ. ಪ್ರಕರಣಗಳ ಗಂಭೀರತೆ ಅರಿತು ಸಾಧ್ಯವಾದಷ್ಟು ಕಡಿಮೆ ಅವಧಿಯೊಳಗೆ ಇತ್ಯರ್ಥಪಡಿಸಬೇಕು. ಸಾಂತ್ವನ ಸಮಾಲೋಚನೆಯಲ್ಲಿ ಇತ್ಯರ್ಥಗೊಳ್ಳದ ಕಾನೂನಾತ್ಮಕ ಪ್ರಕರಣಗಳನ್ನು ಪೊಲೀಸ್ ಠಾಣೆಗೆ ವರ್ಗಾಯಿಸಬೇಕು ಎಂದು ನಿರ್ದೇಶನ ನೀಡಿದರು.
ಮಹಿಳೆಯರು ಹಾಗೂ ಮಕ್ಕಳ ಅನೈತಿಕ ಸಾಗಣೆ ತಡೆಗಟ್ಟುವಿಕೆ, ಬಾಲ್ಯವಿವಾಹ ನಿಷೇಧ ಹಾಗೂ ಸಮಗ್ರ ಮಕ್ಕಳ ರಕ್ಷಣೆಗಾಗಿ ಗ್ರಾಪಂ ಮಟ್ಟದಲ್ಲಿ ರಚಿಸಲಾಗಿರುವ ಸಮಿತಿಗಳನ್ನು ಮತ್ತಷ್ಟು ಬಲಪಡಿಸಬೇಕು ಎಂದು ರಮೇಶ್ ತಿಳಿಸಿದರು.
ಸಭೆಯಲ್ಲಿ ಶಿಕ್ಷಣ ಇಲಾಖೆಯ ಬಂಡೀವೀರಪ್ಪ, ಕೃಷಿ ಇಲಾಖೆಯ ಸುಜಾತ, ಪೊಲೀಸ್ ಇಲಾಖೆಯ ರಾಮಚಂದ್ರಯ್ಯ, ವರದಕ್ಷಿಣೆ ವಿರೋಧಿ ವೇದಿಕೆಯ ಪ್ರಧಾನ ಕಾರ್ಯದರ್ಶಿ ಸಾ.ಚಿ.ರಾಜಕುಮಾರ, ತಿಪಟೂರು ಬದುಕು ಸಾಂತ್ವನ ಕೇಂದ್ರದ ನಂದಕುಮಾರ್, ಮಹಿಳಾ ಇಲಾಖೆಯ ನಾಗರಾಜು, ಅಂಬಿಕಾ, ದಿನೇಶ್ ಉಪಸ್ಥಿತರಿದ್ದರು.
ಪುರುಷರಿಗೆ ನಿರಾಶ್ರಿತರ ಕೇಂದ್ರವಿದೆ. ಆದರೆ, ಮಾನಸಿಕ ಅಸ್ವಸ್ಥ ಹಾಗೂ ಬುದ್ದಿಮಾಂಧ್ಯ ಮಹಿಳೆಯರಿಗೆ ಯಾವುದೇ ಕೇಂದ್ರವಿಲ್ಲ. ಇವರನ್ನು ಸ್ವಾಧಾರ ಕೇಂದ್ರಗಳಿಗೆ ಸೇರಿಸಲು ಆಗುತ್ತಿಲ್ಲ. ಹಾಗಾಗಿ, ಪ್ರತ್ಯೇಕ ವಸತಿ ಗೃಹ ತೆರೆಯಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಎಸ್. ನಟರಾಜು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಇತ್ತೀಚೆಗೆ ಆರ್ಥಿಕ ಸ್ಥಿತಿವಂತರು ಹಾಗೂ ವಿದ್ಯಾವಂತರ ಕುಟುಂಬದಲ್ಲೇ ಹೆಚ್ಚು ದೌರ್ಜನ್ಯ ಪ್ರಕರಣ ನಡೆಯುತ್ತಿವೆ. ಸಾಂತ್ವನ ಕೇಂದ್ರದ ಮುಖ್ಯಸ್ಥರು ಸಭೆ ಗಮನಕ್ಕೆ ತಂದಾಗ ಅಂತಹ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ಪ್ರಯತ್ನಿಸಿ. ಸಾಧ್ಯವಾಗದಿದ್ದರೆ ಮುಂದಿನ ಹಂತಕ್ಕೆ ವರ್ಗಾಯಿಸಿ. ರಮೇಶ್ ಜಿಪಂ ಉಪಕಾರ್ಯದರ್ಶಿ