ಬಾಲ್ಯವಿವಾಹ ತಡೆಗೆ ಅಗತ್ಯ ಕ್ರಮ ; ಅಧಿಕಾರಿಗಳಿಗೆ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷೆ ಡಾ.ಜಯಶ್ರೀ ಚನ್ನಾಲ್ ಸೂಚನೆ

11-klr-002
Published on

ಕೋಲಾರ: ಬಾಲ್ಯ ವಿವಾಹ ಪ್ರಕರಣಗಳು ಕಂಡು ಬಂದರೆ ಸಾಮಾನ್ಯ ವಿಷಯದಂತೆ ಪರಿಗಣಿಸದೆ ಮಕ್ಕಳ ಕಲ್ಯಾಣ ಸಮಿತಿ ಗಮನಕ್ಕೆ ತಂದು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡರೆ ಮಾತ್ರ ಅವುಗಳನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯ ಎಂದು ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷೆ ಡಾ.ಜಯಶ್ರೀ ಚನ್ನಾಲ್ ಹೇಳಿದರು.

ನಗರದ ಜಿಪಂ ಸಭಾಂಗಣದಲ್ಲಿ ಶುಕ್ರವಾರ ಮಕ್ಕಳ ಹಕ್ಕುಗಳಿಗೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನಾ ಸಭೆ ಹಾಗೂ ಸಾರ್ವಜನಿಕ ವಿಚಾರಣಾ ಕಾರ್ಯಕ್ರಮ ನಡೆಸಿ ಮಾತನಾಡಿದರು. ಬಾಲ್ಯವಿವಾಹ ಕಂಡು ಬಂದ ಸಮಯದಲ್ಲಿ ಅಧಿಕಾರಿಗಳು 15, 20 ದಿನಕ್ಕೊಮ್ಮೆ ಫಾಲೋಅಪ್ ಮಾಡುವುದಲ್ಲ. ಆಗಿಂದಾಗ್ಗೆ ಸಂಪೂರ್ಣ ವಾಹಿತಿ ಪಡೆದು ತಪ್ಪಿತಸ್ಥರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಂಡರೆ ಇತರ ಪಾಲಕರಿಗೂ ಭಯ ಬರುತ್ತದೆ ಎಂದರು.

ಮಕ್ಕಳನ್ನು ಅಂಗಡಿ, ಹೋಟೆಲ್, ಕಾರ್ಖಾನೆ, ಗ್ಯಾರೇಜ್‌ಗಳಲ್ಲಿ ಕೆಲಸಕ್ಕೆ ಇಟ್ಟಿಕೊಂಡು ದುಡಿಸಿಕೊಳ್ಳುವುದು ಅಪರಾಧ. ಶಾಲೆಗಳಿಂದ ದೂರ ಉಳಿದಿರುವ ಎಲ್ಲ ಮಕ್ಕಳನ್ನು ಹುಡುಕಿ ಅವರನ್ನು ಶಾಲೆಗೆ ಸೇರಿಸಬೇಕು. ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಕೃಷಿ ಹೊಂಡಗಳಲ್ಲಿ ಮಕ್ಕಳು ಬಿದ್ದು ಸಾವನ್ನಪ್ಪಿರುವ ಟನೆ ಹೆಚ್ಚಾಗಿವೆ. ಸಂಬಂಧಪಟ್ಟ ಅಧಿಕಾರಿಗಳು ಕ್ರಮ ವಹಿಸಬೇಕು ಎಂದರು.

ಜಿಲ್ಲೆಯಲ್ಲಿ ಸಮವಸ ಮತ್ತು ಸೈಕಲ್ ವಿತರಣೆ ವಿಳಂಬವಾಗಿದೆ. ಬಾಲಕಾರ್ಮಿಕ ಪದ್ಧತಿ ತಡೆಗಟ್ಟುವಲ್ಲಿ ಅಧಿಕಾರಿಗಳು ಬದ್ಧತೆಯಿಂದ ಕಾರ್ಯನಿರ್ವಹಿಸಬೇಕು. ಶಾಲಾ ಬಿಟ್ಟ ಮಕ್ಕಳನ್ನು ದುಡಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ. 2016ರಿಂದ ಇಲ್ಲಿವರೆಗೆ ಸರ್ಕಾರಿ ಬಾಲಮಂದಿರದಲ್ಲಿ 151 ಮಕ್ಕಳು ಕಾಣೆಯಾಗಿದ್ದು ಈ ಪ್ರಕರಣ ಹೈಕೋರ್ಟ್‌ನಲ್ಲಿ ಪ್ರಸ್ತಾಪಿಸಿದ್ದೇವೆ ಎಂದರು.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಮೇಶ್ ಮಾತನಾಡಿ, ಬಾಲ್ಯವಿವಾಹಕ್ಕೆ ಸಂಬಂಧಿಸಿದ ಅನೇಕ ಪ್ರಕರಣಗಳಲ್ಲಿ ನಮಗೆ ಮಗುವಿನ ಹೆಸರು, ಫೋಟೋ ಹೊರತುಪಡಿಸಿ ಯಾವುದೇ ದಾಖಲೆ ಸಿಗುವುದಿಲ್ಲ. ಎಂಗೇಜ್‌ಮೆಂಟ್ ವಾಡಿದ್ದೀವಿ ಮದುವೆ ಇಲ್ಲ ಎಂದು ಹೇಳುತ್ತಾರೆ. ಹೀಗಾಗಿ ಎಫ್‌ಐಆರ್ ದಾಖಲಿಸಲು ತಡವಾಗುತ್ತಿದೆ ಎಂದರು.

ಅಲ್ಲದೆ ಶಿಕ್ಷಣಕ್ಕೆ ಸಂಬಂಧಿಸಿದಂತೆ ಶುಲ್ಕ ಪಾವತಿಸದ ಹಿನ್ನೆಲೆಯಲ್ಲಿ ವರ್ಗಾವಣೆ ಪತ್ರ ನೀಡದೆ ವಿದ್ಯಾರ್ಥಿಗಳಿಗೆ ತೊಂದರೆಯಾಗಿದ್ದ ಬಗ್ಗೆ 23 ಪ್ರಕರಣ ದಾಖಲಾಗಿದ್ದು, ಅವೆಲ್ಲವೂ ಬಗಹರಿದಿವೆ. ಕರೊನಾ ಸಂದರ್ಭದಲ್ಲಿ ಇಬ್ಬರೂ ಪಾಲಕರನ್ನು ಕಳೆದುಕೊಂಡ 5 ಮಂದಿ ಮಕ್ಕಳಿಗೆ ಸರ್ಕಾರದಿಂದ ಆರ್ಥಿಕ ಸಹಾಯ ನೀಡಲಾಗುತ್ತಿದೆ ಎಂದರು.

ಆಯೋಗ ಸದಸ್ಯೆ ಭಾರತಿ ಮಾತನಾಡಿ, ಬಾಲ್ಯವಿವಾಹ ಪ್ರಕರಣಗಳಲ್ಲಿ ಎಲ್ಲ ರೀತಿಯಲ್ಲೂ ಮಾಹಿತಿ ಜಾಲಾಡಿ ಸಿಕ್ಕ ಕೂಡಲೇ ಪಾಲಕರ ವಿರುದ್ಧ ದೂರು ದಾಖಲಿಸಬೇಕು. ಆಗ ಇತರರೂ ದಾರಿಗೆ ಬರುತ್ತಾರೆ. ಶುಲ್ಕ ಬಾಕಿ ಹೆಸರಿನಲ್ಲಿ ಮಕ್ಕಳಿಗೆ ಶಾಲೆಗಳಲ್ಲಿ ತೊಂದರೆ ನೀಡಬಾರದೆಂದು ನ್ಯಾಯಾಲಯದ ಆದೇಶವಿದ್ದು, ಶಿಕ್ಷಣ ಸಂಸ್ಥೆಯವರಿಗೆ ಎಚ್ಚರಿಕೆ ನೀಡಬೇಕು ಎಂದು ಸೂಚಿಸಿದರು.

ಜಿಪಂ ಸಿಇಒ ಉಕೇಶ್‌ಕುಮಾರ್ ವಾತನಾಡಿ, ಇನ್ನು ಮುಂದೆ ಪ್ರಗತಿ ಪರಿಶೀಲನಾ ಸಭೆಗಳಲ್ಲಿ ಈ ಬಗ್ಗೆ ಅಜೆಂಡಾ ಸೇರಿಸಿ. ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಅಗತ್ಯ ಕ್ರಮ ಕೈಗೊಂಡು ಎಫ್‌ಐಆರ್ ದಾಖಲಿಸೋಣ ಎಂದರು. ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಅಶೋಕ್.ಜಿ ಯರಗಟ್ಟಿ, ಮಹಿಳಾ ಮತ್ತು ಮಕ್ಕಳ ಇಲಾಖೆ ಉಪ ನಿರ್ದೇಶಕಿ ಎಂ.ಜಿ.ಪಾಲಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಚೌಡಪ್ಪ, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

ಹೋಟೆಲ್‌ಗಳು, ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಡಾಬಾ, ರೆಸಾರ್ಟ್‌ಗಳು, ಕಿರಾಣಿ ಅಂಗಡಿಗಳಲ್ಲಿ, ಬಾಲಕಾರ್ಮಿಕರು ಇದ್ದಾರೆಯೇ ಎಂಬುದನ್ನು ತಿಳಿಯಲು ದಾಳಿ ನಡೆಸಬೇಕು. ಜಿಲ್ಲೆಯ ಎಲ್ಲ ತಾಲೂಕಿನಲ್ಲೂ ಇದರ ಬಗ್ಗೆ ಕ್ರಮ ವಹಿಸಬೇಕು. ವೆಂಕಟ್ ರಾಜಾ, ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net