

ಧಾರವಾಡ: ನಿಯಮಾವಳಿ ಉಲ್ಲಂಘಿಸಿ ಅನುದಾನ ಬಿಡುಗಡೆಗಾಗಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ ಆರೋಪ ಮೇರೆಗೆ ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕಿ ರೇಖಾ ಡೊಳ್ಳಿನವರ ಅವರನ್ನು ಮಂಗಳವಾರ ಅಮಾನತು ಮಾಡಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧೀನ ಕಾರ್ಯದರ್ಶಿ ಎ. ಶ್ರೀನಿಧಿ ಆದೇಶ ಹೊರಡಿಸಿದ್ದಾರೆ.
ರಾಜೀವ ಗಾಂಧಿ ಚೈತನ್ಯ ಯೋಜನೆಯಡಿ ಕೈಗೊಂಡ ಕಾರ್ಯಕ್ರಮಗಳಿಗೆ ಅನುದಾನ ಬಿಡುಗಡೆ ಮಾಡುವ ಕುರಿತು ರಾಷ್ಟ್ರೀಯ ಜೀವನೋಪಾಯ ಅಭಿಯಾನದ ನಿರ್ದೇಶಕರು ನಿರ್ದೇಶನ ನೀಡಿದ್ದರು. ಜಿಪಂ ಸಿಇಒ ಜಿಲ್ಲಾ ಮಟ್ಟದ ಸಮಿತಿ ರಚಿಸಿ, ಬಾಕಿ ಉಳಿದಿರುವ ಪ್ರಸ್ತಾವನೆಯನ್ನು ಪರಿಶೀಲಿಸಿ ಸಮಿತಿಯ ಶಿಫಾರಸಿನೊಂದಿಗೆ ಪ್ರಸ್ತಾವ ಸಲ್ಲಿಸಲು ಸೂಚಿಸಲಾಗಿತ್ತು. ಆದರೆ, ರೇಖಾ ಡೊಳ್ಳಿನವರ ಅವರು ಸಿಇಒ ಗಮನಕ್ಕೆ ತರದೆ, ಸಮಿತಿ ರಚಿಸದೆ, ಸಭೆಯನ್ನೂ ನಡೆಸದೆ ಅನುದಾನ ಬಿಡುಗಡೆ ಮಾಡಲು ಕಡತ ಮಂಡಿಸಿದ್ದಾರೆ. ಅದರಲ್ಲಿ ಸ್ಯಾನ್ ಐಟಿ ಸಲ್ಯುಷನ್ ಸಂಸ್ಥೆಗೆ 3.65 ಕೋಟಿ ರೂ. ಅನುದಾನ ಬಿಡುಗಡೆ ಮಾಡಲು ಕೋರಿದ್ದಾರೆ. ಇಲಾಖೆಯ ಮಾರ್ಗಸೂಚಿ ಮತ್ತು ನಿಯಮಾವಳಿ ಉಲ್ಲಂಘಿಸಿರುವ ಅರೋಪದಡಿ ಡೊಳ್ಳಿನವರ ಅವರ ವಿರುದ್ಧ ಇಲಾಖಾ ವಿಚಾರಣೆ ಬಾಕಿ ಇರಿಸಿ ಅಮಾನತು ಮಾಡಿ ಆದೇಶಿಸಲಾಗಿದೆ.