

ಮಂಡ್ಯ: ಜಿಲ್ಲೆಯಲ್ಲಿ 2011ರ ಜನಗಣತಿ ಆಧರಿಸಿ ಶೇ.80ಕ್ಕೂ ಹೆಚ್ಚು ಹಾಗೂ ಶೇ.60ಕ್ಕೂ ಕಡಿಮೆ ಸಾಕ್ಷರತೆ ಹೊಂದಿರುವ ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡಬೇಕು. ಕಲಿಕಾ ಕೇಂದ್ರಗಳನ್ನು ಸ್ಥಾಪಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ಕವಿತಾ ಸೂಚಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಮಿನಿ ಸಭಾಂಗಣದಲ್ಲಿ ಆಯೋಜಿಸಿದ್ದ 2022-23ನೇ ಸಾಲಿನ ಸಾಕ್ಷರತಾ ಕಾರ್ಯಕ್ರಮಗಳ ಅನುಷ್ಠಾನ ಸಂಬಂಧ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಾಕ್ಷರತಾ ಕಾರ್ಯಕ್ರಮಕ್ಕೆ ಅಂಗನವಾಡಿ ಕಾರ್ಯಕರ್ತೆಯರು, ಶಿಕ್ಷಕರು, ಆಶಾ ಕಾರ್ಯಕರ್ತೆಯರು, ಪ್ರೇರಕರು, ಸ್ವಯಂ ಸೇವಾ ಸಂಸ್ಥೆಗಳು, ಸ್ವಸಹಾಯ ಸಂಘಗಳ ಪ್ರತಿನಿಧಿಗಳು, ಬಿಇಡಿ ಮತ್ತು ಪದವೀಧರರ ಸಹಕಾರದ ಅಗತ್ಯವಿದೆ. ವಿದ್ಯುನ್ಮಾನ, ತಂತ್ರಜ್ಞಾನ, ಜಾನಪದ, ಸ್ಥಳೀಯ ಕಲೆ ಸಂಸ್ಕೃತಿ, ಮಾಧ್ಯಮ ಬಳಕೆ, ನಾವೀನ್ಯ ರೀತಿಯ ಯೋಜನೆ, ತಂತ್ರಜ್ಞಾನ ಮೂಲಕ ಸಾಕ್ಷರತಾ ಕಾರ್ಯಕ್ರಮ ಅನುಷ್ಠಾನ ಮಾಡಲಾಗುವುದು ಎಂದರು.
ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆಯ ಸಾಕ್ಷರತಾ ಕಾರ್ಯಕ್ರಮವನ್ನು ಹಂತ ಹಂತವಾಗಿ, ಪ್ರಾಮಾಣಿಕವಾಗಿ, ಶ್ರದ್ಧೆಯಿಂದ ಅನುಷ್ಠಾನ ಗೊಳಿಸಿದರೆ ಗುರಿ ತಲುಪಲು ಸಾಧ್ಯವಾಗುತ್ತದೆ. ರಾಷ್ಟ್ರೀಯ ಶಿಕ್ಷಣ ನೀತಿ-2020 ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಆಧರಿಸಿ ಎಲ್ಲ ಅನಕ್ಷರಸ್ಥರಿಗೆ ಮೂಲ ಶಿಕ್ಷಣ, ಸುಲಭ ಲೆಕ್ಕಚಾರ, ಜೀವನ ಕೌಶಲ, ಕೌಶಲಾಭಿವೃದ್ಧಿ ಜೀವನೋಪಾಯದ ಅವಕಾಶ ಹಾಗೂ ಮುಂದುವರಿದ ಕಲಿಕೆ ನೀಡುವುದರ ಮೂಲಕ 2030ರ ವೇಳೆಗೆ ಶೇ.100ರಷ್ಟು ಸಾಕ್ಷರತೆ ಹೊಂದುವ ಉದ್ದೇಶ ಹೊಂದಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ನವ ಭಾರತ ಸಾಕ್ಷರತಾ ಕಾರ್ಯಕ್ರಮ ಎಂಬ ಮಹತ್ವಕಾಂಕ್ಷಿ ಯೋಜನೆ ರೂಪಿಸಿದೆ. ಈ ಕಾರ್ಯಕ್ರಮವು ಐದು ವರ್ಷದವರೆಗೆ ಅಂದರೆ, 2022-23ರಿಂದ 2026- 27ರವರೆಗೆ ಅನುಷ್ಠಾನಗೊಳ್ಳಲಿದೆ ಎಂದರು.
ಕೇಂದ್ರ ಪುರಸ್ಕೃತ ನವಭಾರತ ಸಾಕ್ಷರತಾ ಕಾರ್ಯಕ್ರಮ 2022-23ನೇ ಸಾಲಿನ ಆಯವ್ಯಯದಡಿ 1000 ಗ್ರಾಮ ಪಂಚಾಯಿತಿಗಳನ್ನು ಸಂಪೂರ್ಣ ಸಾಕ್ಷರ ಗ್ರಾಮಗಳೆಂದು ಘೋಷಿಸುವ ಕಾರ್ಯಕ್ರಮವಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ವಲಯ ಲಿಂಕ್ ಡಾಕ್ಯುಮೆಂಟ್ ಸಾಕ್ಷರತಾ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುವುದು. ನಗರ-ಗ್ರಾಮೀಣ ಪ್ರದೇಶಗಳ ಮಧ್ಯೆ ಇರುವ ಸಾಕ್ಷರತಾ ಪ್ರಮಾಣದ ಅಂತರ ಕಡಿಮೆ ಮಾಡುವುದು. ನಿರಂತರ ಕಲಿಕೆ ಮೂಲಕ ಜೀವನ ಮಟ್ಟ ಸುಧಾರಣೆ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಆದ್ಯತೆ ನೀಡುವುದು ದೇಶದ ಸಂವಿಧಾನದಡಿ ಕಲ್ಪಿಸಿರುವ ನಾಗರಿಕರ ಕರ್ತವ್ಯ ಮತ್ತು ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಡುವುದು. ಸಂಪೂರ್ಣ ಸಾಕ್ಷರ ಗ್ರಾಮ/ನಗರ ಘೊಷಣೆ ಮಾಡುವ ಮೂಲ ಉದ್ದೇಶವಾಗಿದೆ ಎಂದರು.
ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಚಂದ್ರಶೇಖರ್ ಮಾತನಾಡಿ, ಸಾಕ್ಷರತಾ ಕಾರ್ಯಕ್ರಮ ವಯಸ್ಕರಿಗಷ್ಟೇ ಸೀಮಿತವಲ್ಲ. 15 ವರ್ಷ ಮೇಲ್ಪಟ್ಟ ಎಲ್ಲರನ್ನೂ ಸಾಕ್ಷರನ್ನಾಗಿಸಿ ಜೀವನೋಪಾಯಕ್ಕೆ ಅವಕಾಶ ಕಲ್ಪಿಸುವುದು ಕಾರ್ಯಕ್ರಮದ ಸದಾಶಯವಾಗಿದೆ. ಮುಖ್ಯಮಂತ್ರಿ ಅವರು ಪ್ರಸಕ್ತ ವರ್ಷದಲ್ಲಿ 500 ಗ್ರಾಪಂಗಳನ್ನು ಸಂಪೂರ್ಣ ಸಾಕ್ಷರವೆಂದು ಘೋಷಿಸಿದ್ದಾರೆ. 2022-23ನೇ ಸಾಲಿನಲ್ಲಿ ಜಿಲ್ಲೆಗೆ 20 ಗ್ರಾಪಂಗಳಿಂದ 11,900 ಭೌತಿಕ ಗುರಿಯನ್ನು ನಿಗದಿಪಡಿಸಲಾಗಿದೆ. ಸಾಕ್ಷರತೆಯಲ್ಲಿ ಹಿಂದುಳಿದ ಗ್ರಾಪಂಗಳನ್ನು ಲೋಕ ಶಿಕ್ಷಣ ನಿರ್ದೇಶನಾಲಯದ ಮಾರ್ಗಸೂಚಿಯಂತೆ ಆಯ್ಕೆ ಮಾಡಲಾಗಿದೆ ಎಂದರು.
ಸಭೆಯಲ್ಲಿ ಜಿಪಂ ಯೋಜನಾ ನಿರ್ದೇಶಕ ಧನರಾಜ್ ಬೋರಳೆ, ಡಿಡಿಪಿಐ ಜವರೇಗೌಡ, ಬಿಇಒಗಳಾದ ಚಂದ್ರಕಾಂತಾ, ಮಹದೇವ, ಚಿಕ್ಕಸ್ವಾಮಿ, ಡಾ.ಭವಾನಿ ಶಂಕರ್, ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ವೇಣುಗೋಪಾಲ್ ಇತರರಿದ್ದರು.