ನೀರಿನ ಮೂಲಗಳನ್ನು ಅಭಿವೃದ್ಧಿಗೊಳಿಸಿ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಆಯುಕ್ತ ಶಿಲ್ಪಾನಾಗ್ ಸೂಚನೆ

ಶಿಲ್ಪನಾಗ್ 1
Published on

ಮಂಡ್ಯ: ಜಿಲ್ಲೆಯಲ್ಲಿರುವ ನೀರಿನ ಮೂಲಗಳನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಆಯುಕ್ತ ಶಿಲ್ಪಾನಾಗ್ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಮಹಾತ್ಮ ಗಾಂಧಿ ರಾಷ್ತ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಸ್ವಾತಂತ್ರ್ಯ ಅಮೃತ ಸರೋವರ ಕಾಮಗಾರಿ, ಶಾಲಾ ಆಟದ ಮೈದಾನ, ಶೌಚಗೃಹ, ಅಂಗನವಾಡಿ ಕೇಂದ್ರ, ಸ್ವಸಹಾಯ ಗುಂಪಿನ ನರ್ಸರಿ ಪ್ರಾರಂಭಿಸಿರುವ ಕುರಿತ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನೀರಿನ ಮೂಲಗಳನ್ನು ಉಳಿಸಿಕೊಂಡು ಅಭಿವೃದ್ಧಿ ಮಾಡುವುದು ನಮ್ಮೆಲ್ಲರ ಮುಖ್ಯ ಕರ್ತವ್ಯವಾಗಿದೆ. ನರೇಗಾ ಯೋಜನೆಯಡಿ ಗ್ರಾಮ ಪಂಚಾಯಿತಿ ಸಂಪನ್ಮೂಲಗಳನ್ನು ಬಳಸಿ ನೀರಿನ ಸಂಗ್ರಹಣೆ ಹಾಗೂ ಸಂರಕ್ಷಣೆ ಮಾಡಬೇಕು. ಕಾಲುವೆ, ನಾಲೆಗಳನ್ನು ಅಭಿವೃದ್ಧಿಪಡಿಸಬೇಕು. ಒತ್ತುವರಿಯಾಗಿರುವ ಕೆರೆ, ಕಾಲುವೆಗಳನ್ನು ತೆರವುಗೊಳಿಸಿ ಜಲ ಸಂರಕ್ಷಣೆಗೆ ಕ್ರಮವಹಿಸಬೇಕು. ಕಾಲುವೆ ಅಭಿವೃದ್ಧಿ ಪಡಿಸಿದರೆ ಕೃಷಿ ಭೂಮಿ ಫಲವತ್ತತೆಯಿಂದ ಕೂಡಿರುತ್ತದೆ. ಜತೆಗೆ ಅಂತರ್ಜಲದ ಮಟ್ಟವು ಹೆಚ್ಚುತ್ತದೆ ಎಂದರು.
ಜಿಲ್ಲಾ ಪಂಚಾಯಿತಿ ಸಿಇಒ ಶಾಂತಾ ಎಲ್.ಹುಲ್ಮನಿ, ಉಪ ಕಾರ್ಯದರ್ಶಿ(ಅಭಿವೃದ್ಧಿ) ಸಂಜೀವಪ್ಪ, ಇಒ ರಾಮಲಿಂಗಯ್ಯ, ಸಹಾಯಕ ನಿರ್ದೇಶಕ(ಗ್ರಾ.ಉ) ದೀಪು ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.
ಸಭೆ ಬಳಿಕ ಮಳವಳ್ಳಿ ತಾಲೂಕು ಹುಸ್ಕೂರು ಮತ್ತು ಯತ್ತಂಬಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾಲುವೆ ಕಾಮಗಾರಿ, ಮದ್ದೂರು ತಾಲೂಕಿನ ಸಿ.ಎ ಕೆರೆ ಮತ್ತು ಹೆಮ್ಮನಹಳ್ಳಿ ಗ್ರಾಮ ಪಂಚಾಯತಿಯ ಕಾಲುವೆ ಕಾಮಗಾರಿಗಳಿಗೆ ಭೇಟಿ ನೀಡಿ ಕೂಲಿ ಕಾರ್ಮಿಕರ ಸಮಸ್ಯೆಗಳನ್ನು ಆಲಿಸಿದರು. ಅಂತೆಯೇ ಯತ್ತಂಬಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪ್ರಗತಿಯಲ್ಲಿರುವ ಅಂಗನವಾಡಿ ಕೇಂದ್ರವನ್ನು ವೀಕ್ಷಿಸಿ ಕಾಮಗಾರಿಯನ್ನು ಪೂರ್ಣಗೊಳಿಸಲು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net