ಜಲ ಜೀವನ್ ಮಿಷನ್ ಕಾಮಗಾರಿ ಚುರುಕುಗೊಳಿಸಬೇಕು

zp meeting devnhalli
Published on

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸಲ್ಮಾ ಕೆ.ಫಾಹಿಂ ಸೂಚನೆ

ಜಿಪಂ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಮನೆ ಮನೆಗೆ ಸುರಕ್ಷಿತ ಮತ್ತು ಸಮರ್ಪಕ ಕುಡಿಯುವ ನೀರನ್ನು ಒದಗಿಸಲು ಜಲ ಜೀವನ್‌ಮಿಷನ್ ಯೋಜನೆ ಜಾರಿಗೆ ತರಲಾಗಿದ್ದು, ವಿಳಂಬ ಮಾಡದೇ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲು ಕ್ರಮವಹಿಸಬೇಕು ಎಂದು ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ಕಾರ್ಯದರ್ಶಿ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆ ಉಸ್ತುವಾರಿ ಕಾರ್ಯದರ್ಶಿ ಸಲ್ಮಾ ಕೆ.ಫಾಹಿಂ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಯಲ್ಲಿ ಜಲ ಜೀವನ್‌ಮಿಷನ್ ಕಾಮಗಾರಿ ಪ್ರಗತಿ ಪರಿಶೀಲನೆ ನಡೆಸಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು, ಇದೊಂದು ಮಹತ್ತರ ಯೋಜನೆಯಾಗಿದೆ. ಗ್ರಾಮದ ಪ್ರತಿ ಮನೆಗಳಿಗೂ ಕೊಳಾಯಿ ಮೂಲಕ ನೀರು ಪೂರೈಸಬೇಕು ಎಂಬ ನಿಟ್ಟಿನಲ್ಲಿ ಈ ಯೋಜನೆ ರೂಪಿಸಲಾಗಿದೆ ಎಂದರು.
ದೇವನಹಳ್ಳಿ ತಾಲೂಕು ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನ ಸಭೆಯಲ್ಲಿ ಮಾತನಾಡಿದರು. ಯಾವ ಭಾಗಗಳಲ್ಲಿ ಕಾಮಗಾರಿ ಮಂದಗತಿಯಲ್ಲಿ ಸಾಗಿದೆ ಎಂಬುದನ್ನು ಖುದ್ದು ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಬೇಕು. ಕಾಮಗಾರಿ ವಿಳಂಬಕ್ಕೆ ಕಾರಣವೇನು? ಅದನ್ನು ಚುರುಕುಗೊಳಿಸಲು ಅವಶ್ಯವಾಗಿ ಏನು ಮಾಡಬೇಕು ಎಂಬುದನ್ನು ಅಧಿಕಾರಿಗಳು ವರದಿ ಮಾಡಬೇಕು ಎಂದು ಸೂಚಿಸಿದರು. ಜಿಲ್ಲೆಯ 1192 ಪ್ರದೇಶಗಳಲ್ಲಿ ಕಾಮಗಾರಿ ಕೈಗೊಂಡಿದ್ದು, ಕೆಲವು ಪ್ರದೇಶಗಳಲ್ಲಿ ಒವರ್‌ಹೆಡ್ ಟ್ಯಾಂಕ್ ನಿರ್ಮಿಸಲು, ಕೊಳವೆ ಬಾವಿ ಕೊರೆಸಲು ವಿಳಂಬವಾಗಿದೆ. ಹೀಗಾಗಿ ಕಾಮಗಾರಿ ಪ್ರಗತಿ ವಿಳಂಬವಾಗುತ್ತಿದ್ದು, ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರಿಗೆ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲು ನಿರ್ದೇಶನ ನೀಡಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ತ್ಯಾಜ್ಯ ವಿಲೇವಾರಿ ಪರಿಶೀಲನೆ: ಜಿಲ್ಲೆಯಲ್ಲಿ ಘನತ್ಯಾಜ್ಯ ವಿಲೇವಾರಿ ಕುರಿತು ಮಾಹಿತಿ ಪಡೆದ ಉಸ್ತುವಾರಿ ಕಾರ್ಯದರ್ಶಿ ಘನತ್ಯಾಜ್ಯ ವಿಲೇವಾರಿ ಘಟಕಗಳನ್ನು ನಿರ್ಮಿಸಲು ಗುರುತಿಸಿರುವ ಜಾಗಗಳಲ್ಲಿ ಕೆಲವು ಕಡೆ ಕಾಮಗಾರಿ ಪ್ರಗತಿಯಲ್ಲಿವೆ. ದೇವನಹಳ್ಳಿ ಹಾಗೂ ವಿಜಯಪುರ ಟೌನ್ ವ್ಯಾಪ್ತಿಯ ಘನತ್ಯಾಜ್ಯ ವಿಲೇವಾರಿ ಘಟಕಗಳನ್ನು ನಿರ್ಮಿಸಲು ಜಾಗ ಗುರುತಿಸಲಾಗಿದೆ ಶೀಘ್ರವೇ ಕಾಮಗಾರಿ ಪ್ರಾರಂಭಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು, ತ್ಯಾಜ್ಯ ವಿಂಗಡಣೆ ಬಗ್ಗೆ ಪ್ರತಿ ಗ್ರಾಮಗಳಲ್ಲಿ, ನಗರ ಪ್ರದೇಶಗಳಲ್ಲಿ ಹೆಚ್ಚು ಅರಿವು ಮೂಡಿಸಬೇಕು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net