ಜಿಲ್ಲಾ ಪಂಚಾಯಿತಿ ಸಾಮನ್ಯ ಸಭೆ ಮತ್ತೆ ಮುಂದೂಡಿಕೆ

18 TMK ZP meeting
Published on

ತುಮಕೂರು: ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಲತಾ ವಿರುದ್ಧ ಮುನಿಸಿಕೊಂಡಿರುವ ಜೆಡಿಎಸ್ ಸದಸ್ಯರ ಸಾಮೂಹಿಕ ಗೈರಿನ ಕಾರಣಕ್ಕೆ ಸಾಮಾನ್ಯಸಭೆ ಮತ್ತೊಮ್ಮೆ ಮುಂದೂಡಲಾಯಿತು.

ಮುಂದಿನ ವರ್ಷಕ್ಕೆ ಬೇಕಾಗುವ ಕೃಷಿ ಇಲಾಖೆಗೆ ಬಿತ್ತನೆಬೀಜ ಖರೀದಿ ಹಾಗೂ ಪಶು ಇಲಾಖೆಯಲ್ಲಿ ಔಷಧ ಖರೀದಿಗೆ ತುರ್ತಾಗಿ ಜಿಪಂ ಸಾಮಾನ್ಯಸಭೆ ಅನುಮೋದನೆ ಅಗತ್ಯವಿದ್ದು, ಸದಸ್ಯರ ರಾಜಕೀಯ ಹಗ್ಗಜಗ್ಗಾಟ ಭವಿಷ್ಯದಲ್ಲಿ ದೊಡ್ಡ ಸಂಕಷ್ಟ ತಂದೊಡ್ಡುವ ಅಪಾಯ ಎದುರಾಗಿಸಿದೆ.

ಮಂಗಳವಾರ ಜಿಪಂ ಕಚೇರಿ ಸಭಾಂಗಣದಲ್ಲಿ ಅಧ್ಯಕ್ಷೆ ಲತಾ ಆಹ್ವಾನಿಸಿದ್ದ ಸಾಮಾನ್ಯಸಭೆ ಕೋರಂ ಕೊರತೆಯಿಂದ ಮುಂದೂಡಲಾಯಿತು. 14 ಜೆಡಿಎಸ್ ಸದಸ್ಯರ ಪೈಕಿ ಲತಾ ಹೊರತಾಗಿ ಉಳಿದ 13 ಸದಸ್ಯರೂ ಸಭೆಗೆ ಗೈರಾಗಿದ್ದು, ವಿಶೇಷವಾಗಿತ್ತು.

ಅಧ್ಯಕ್ಷೆ ಲತಾ ರಾಜೀನಾಮೆಗೆ ಒತ್ತಾಯಿಸಿರುವ ಜೆಡಿಎಸ್ ಸದಸ್ಯರು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮನೆಯ ಕದ ತಟ್ಟಿದ್ದು ಅವರು ನೀಡುವ ಸೂಚನೆ ಜಿಲ್ಲೆಯ ರಾಜಕೀಯದಲ್ಲಿ ಕುತೂಹಲ ಮೂಡಿಸಿದೆ.

ಬೆಳಗ್ಗೆ 11ಕ್ಕೆ ಆರಂಭವಾದ ಸಭೆಗೆ ಕಾಂಗ್ರೆಸ್, ಬಿಜೆಪಿ ಹಾಗೂ 5 ಜನ ತಾಪಂ ಅಧ್ಯಕ್ಷರು ಸೇರಿ ಒಟ್ಟು 18 ಸದಸ್ಯರು ಮಾತ್ರ ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡಿದರು. ಸಭೆ ಆರಂಭಿಸಲು ಕನಿಷ್ಠ 43 ಸದಸ್ಯರ ಅವಶ್ಯಕತೆಯಿದ್ದು ಅದಕ್ಕಾಗಿ 12ರ ವರೆಗೂ ಕಾದರೂ ಯಾವುದೇ ಪ್ರಯೋಜನವಾಗದೆ ಅನಿವಾರ್ಯವಾಗಿ ಸಭೆ ಮುಂಡಲಾಯಿತು.

ಸಭೆಯಲ್ಲಿ ಸದಸ್ಯರ ಗೈರು ಹಾಜರಿಯಿಂದ ಮುಜುಗರಕ್ಕೆ ಒಳಗಾದ ಅಧ್ಯಕ್ಷೆ, ಉಪಾಧ್ಯಕ್ಷೆ ಸಭೆಯನ್ನು ಅನಿಧಿಷ್ಟಾವಧಿಗೆ ಮುಂದೂಡಿ, ಹೊರನಡೆದರು. ಸಭೆಯಲ್ಲಿ ಜಿಪಂ ಸಿಇಒ ಶುಭಾಕಲ್ಯಾಣ್ ಇದ್ದರು.

ಬಿಜೆಪಿ, ಜೆಡಿಎಸ್ ಸದಸ್ಯರ ಆಗ್ರಹ: ಅಧ್ಯಕ್ಷೆ ಲತಾ ಹಾಗೂ ಉಪಾಧ್ಯಕ್ಷೆ ಶಾರದಾ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಸುದ್ದಿಗೋಷ್ಠಿ ನಡೆಸಿ ಆಗ್ರಹಿಸಿದರು. ಜೆಡಿಎಸ್ ಸದಸ್ಯರಾದ ತಿಮ್ಮಣ್ಣ, ರಾಮಚಂದ್ರಯ್ಯ, ಕಲ್ಲೇಶ್, ಬಿಜೆಪಿ ಸದಸ್ಯರಾದ ಮಹಾಲಿಂಗಯ್ಯ, ಯಶೋದಾ ಮತ್ತಿತರರು ಅಧ್ಯಕ್ಷೆ ಲತಾ ವಿರುದ್ಧ ಎಲ್ಲ ಸದಸ್ಯರಿಗೂ ಅಸಮಧಾನವಿದ್ದು, ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಜೆಡಿಎಸ್ ಸದಸ್ಯ ತಿಮ್ಮಣ್ಣ ಮಾತನಾಡಿ, ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗಿದೆ. ಗ್ರಾಮ ಪಂಚಾಯಿತಿ ಕಚೇರಿಗೆ ಕದ್ದುಮುಚ್ಚಿ ಬಂದು ಹೋಗಿದ್ದು ಏಕೆ ಎಂಬ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

2016ರಿಂದ ಜಿಲ್ಲಾ ಪಂಚಾಯಿತಿ ಆಡಳಿತ ಸತ್ತಿದೆ, ನರೇಗಾ ಯೋಜನೆಯಲ್ಲಿ ನಡೆದಿರುವ ಅಕ್ರಮದ ತನಿಖೆ ನಡೆಸಲು ಕೇಳಿಕೊಂಡರೂ ಅಧ್ಯಕ್ಷೆ, ಉಪಾಧ್ಯಕ್ಷೆ ಜಾಣ ಮೌನವಾಗಿದ್ದಾರೆ. ಕಳೆದ 4 ವರ್ಷದಲ್ಲಿ ಜಿಲ್ಲಾ ಪಂಚಾಯಿತಿಯಲ್ಲಿ ಸಾಕಷ್ಟು ಅಕ್ರಮಗಳು ನಡೆದಿದ್ದು, ಎಲ್ಲವೂ ತನಿಖೆಯಾಗಬೇಕು. ಮಹಾಲಿಂಗಯ್ಯ ಬಿಜೆಪಿ ಸದಸ್ಯ ಅಧಿಕಾರ ಹಂಚಿಕೆಯಾದಂತೆ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷೆ ಎರಡುವರೆ ವರ್ಷಕ್ಕೆ ರಾಜಿನಾಮೆ ನೀಡಬೇಕಿತ್ತು. ಈಗಿರುವ ಅಧ್ಯಕ್ಷೆ, ಉಪಾಧ್ಯಕ್ಷೆ ಮೇಲೆ ಸದಸ್ಯರಿಗೆ ವಿಶ್ವಾಸ ಹೋಗಿದ್ದು ಕೂಡಲೇ ರಾಜೀನಾಮೆ ನೀಡಬೇಕು. ತಿಮ್ಮಣ್ಣ ಜೆಡಿಎಸ್ ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net