

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಹೆಚ್ಚಿಸಲು ಗುಣಮಟ್ಟದ ಶಿಕ್ಷಣ ಅಗತ್ಯವಾಗಿದೆ ಈ ನಿಟ್ಟಿನಲ್ಲಿ ಶಿಕ್ಷಕರು ಹಾಗೂ ಇಲಾಖೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದಶಿ ಡಾ.ಪಿ.ಸಿ.ಜಾಫರ್ ಹೇಳಿದರು.
ದೇವನಹಳ್ಳಿಯ ಜಿಲ್ಲಾಡಳಿತ ಭವನದ ಜಿಪಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ 2025-26 ನೇ ಸಾಲಿನ ಜಿಲ್ಲಾ ಪಂಚಾಯತಿ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು. ಶಾಲಾ ಕಾಲೇಜುಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಿ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಉತ್ತಮ ಫಲಿತಾಂಶ ತರಲು ಕ್ರಮ ವಹಿಸಬೇಕು ಎಂದು ಸೂಚಿಸಿದರು. ಅಂಗನವಾಡಿಗಳಲ್ಲಿ ಎಲ್ಕೆಜಿ ಮತ್ತು ಯುಕೆಜಿ ಆರಂಭ ಮಾಡಲಾಗಿದ್ದು, ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಪ್ರಮಾಣ ಹೆಚ್ಚಾಗಲಿದೆ. ಗುಣಮಟ್ಟದ ಶಿಕ್ಷಣ ಹಾಗೂ ಆಧುನಿಕ ಮೂಲ ಸೌಕರ್ಯಗಳನ್ನು ಒದಗಿಸಿದರೆ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಾಗಲಿದೆ ಎಂದರು. ಮುಂಬರುವ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಉತ್ತಮ ಅಂಕಗಳಿಸಿ ಜಿಲ್ಲೆಗೆ ಒಳ್ಳೆಯ ಸ್ಥಾನ ಬರುವಂತೆ ನೋಡಿಕೊಳ್ಳಲು ಶಿಕ್ಷಣ ಇಲಾಖೆ ಅಗತ್ಯ ಕ್ರಮಕೈಗೊಳ್ಳಬೇಕು ಸರ್ಕಾರಿ ಶಾಲೆಗಳಲ್ಲಿ ದೊರೆಯುವ ಸೌಲಭ್ಯಗಳ ಬಗ್ಗೆ ಜನರಿಗೆ ತಿಳಿಸುವ ಅಭಿಯಾನ ಮತ್ತು ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ತಿಳಿಸಿದರು.
ಶೇ.100 ಸಮೀಕ್ಷೆ ಪೂರ್ಣಗೊಳಿಸಬೇಕು: ಜಿಲ್ಲೆಯಲ್ಲಿ 2024-25 ನೇ ಸಾಲಿಗೆ ಅಂದಾಜಿಸಿದಂತೆ 3,85,237 ಕುಟುಂಬಗಳಿದ್ದು 12,26,357 ಜನಸಂಖ್ಯೆ ಇದೆ. ಇದುವರೆಗೆ 3,01,800 ಕುಟುಂಬಗಳ 10,10,421 ಜನರ ಸಮೀಕ್ಷೆ ನಡೆಸಲಾಗಿದ್ದು ಶೇ.82.59ಕುಟುಂಬಗಳ ಸಮೀಕ್ಷೆ ಪೂರ್ಣಗೊಳಿಸಲಾಗಿದೆ. ಜಿಲ್ಲೆಯಲ್ಲಿ 5 ಸಹಾಯವಾಣಿ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು ಸಮೀಕ್ಷೆಯಲ್ಲಿ ಬಿಟ್ಟು ಹೋದ ಕುಟುಂಬಗಳು, ಭಾಗವಹಿಸದೇ ಇರುವವರು ಸಹಾಯವಾಣಿ ಸಂಪರ್ಕಿಸಿದರೆ ಗಣತಿದಾರರು ನಿಮ್ಮ ಮನೆ ಬಾಗಿಲಿಗೆ ಬಂದು ಸಮೀಕ್ಷೆ ಮಾಡಲಿದ್ದಾರೆ. ನಿಗದಿತ ಅವಧಿಯೊಳಗೆ ಜಿಲ್ಲೆಯಲ್ಲಿ ಶೇ.100 ಸಮೀಕ್ಷೆ ಕಾರ್ಯ ಪೂರ್ಣಗೊಳಿಸಬೇಕು ಎಂದು ಜಾರ್ ಅಧಿಕಾರಿಗಳಿಗೆ ಸೂಚಿಸಿದರು.
ಪ್ರೋತ್ಸಾಹ ಧನ ನೀಡಿ: ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಕೈಮಗ್ಗ ಮತ್ತು ವಿದ್ಯುತ್ ಮಗ್ಗದಿಂದ ಸಿದ್ಧ ಉಡುಪುಗಳನ್ನು ತಯಾರಿಸುತ್ತಿದ್ದು, ಅವರಿಗೆ ಜಿಲ್ಲೆಯಲ್ಲಿ ಉತ್ಪಾದನಾ ಘಟಕಗಳಿಗೆ ಒಂದು ಮಾರುಕಟ್ಟೆಯ ಅವಶ್ಯಕತೆಯಿದೆ. ಹಾಗಾಗಿ ಒಂದು ಸ್ಥಳವನ್ನು ಗುರುತಿಸಿ ಅಲ್ಲಿ ಮಾರುಕಟ್ಟೆಯನ್ನು ನಿರ್ಮಿಸಿಲಾಗುವುದು, ಮತ್ತು ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಕೈಮಗ್ಗ ಮತ್ತು ಜವಳಿಯನ್ನು ಹಲವು ಜನರು ತಮ್ಮ ಮನೆಗಳಲ್ಲಿ ಹಾಗೂ ಕೆಲವರು ಜಾಗವನ್ನು ಬಾಡಿಗೆಗೆ ಪಡೆದು ಮಗ್ಗವನ್ನು ಮಾಡುತ್ತಿದ್ದಾರೆ. ಇವರಿಗೆ ಎಸ್‌ಎಂಇ ಯೋಜನೆ ಹಾಗೂ ವಿವಿಧ ಯೋಜನೆಗಳಿಂದ ಲಭ್ಯವಿರುವ ಪ್ರೋತ್ಸಾಹ ಧನ, ಸಹಾಯಧನವನ್ನು ಒದಗಿಸುವ ಮೂಲಕ ಉತ್ತೇಜನ ನೀಡಬೇಕು ಎಂದು ಅಧಿಕಾರಿಗಳಿಗೆ ಉಸ್ತುವಾರಿ ಕಾರ್ಯದರ್ಶಿಗಳು ಸೂಚಿಸಿದರು.
ಬಾಕಿ ಪೂರ್ಣಗೊಳಿಸಿ: ಇತ್ತೀಚಿನ ದಿನಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತಿದ್ದು, ಇದರ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಹಾಗೂ ಅಭಿಯಾಯನಗಳನ್ನು ಹೆಚ್ಚಿನ ಮಟ್ಟದಲ್ಲಿ ನಡೆಸಬೇಕು. ನವೆಂಬರ್ ತಿಂಗಳಿನಲ್ಲಿ ಕಾಲುಬಾಯಿ ರೋಗಕ್ಕೆ ಉಚಿತವಾಗಿ ಲಸಿಕೆ ನೀಡುವ ಬಗ್ಗ ಕ್ರಮವಹಿಸಬೇಕು. ಸಭೆಯಲ್ಲಿ ಎಲ್ಲ ಇಲಾಖೆಗಳ ಪ್ರಗತಿ ಉದ್ದೇಶಿಸಿ ಮುಂದಿನ ಬಾರಿ ಯಾವುದೇ ಕಾರಣಗಳನ್ನು ನೀಡದೆ ಬಾಕಿ ಉಳಿದಿರುವ ಕಾರ್ಯಗಳನ್ನು ಸಮಯಕ್ಕೆ ಪೂರ್ಣಗೊಳಿಸಿ ಎಂದು ಅಧಿಕಾರಿಗಳಿಗೆ ಜಾರ್ ಸೂಚಿಸಿದರು.