

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ದೇವನಹಳ್ಳಿ ತಾಲೂಕು ಜಿಲ್ಲಾಡಳಿತಭವನದಲ್ಲಿನ ಜಿಪಂ ಸಭಾಂಗಣದಲ್ಲಿ ನಡೆಯುವ ಪ್ರತಿ ಸಭೆಗಳ ನಡುವೆ ನೀಡುವ ಲಂಚ್‌ಬ್ರೇಕ್ ಅಧಿಕಾರಿಗಳನ್ನು ಹೈರಾಣಾಗಿಸುತ್ತಿದೆ.
ಬೆಳಗ್ಗೆ ಸುಮಾರು 10 ಗಂಟೆಯಿಂದ ಸಭೆಯಲ್ಲಿ ನಿರಂತರವಾಗಿ ಕುಳಿತ ಅಧಿಕಾರಿ ವರ್ಗ ಮಧ್ಯಾಹ್ನ ನೀಡುವ ಲಂಚ್‌ಬ್ರೇಕ್‌ನಲ್ಲಿ ಆಹಾರ ಸ್ವೀಕರಿಸಲು ಜಂಗಿಕುಸ್ತಿ ಮಾಡಬೇಕಾದ ಪರಿಸ್ಥಿತಿ ಸಾಮಾನ್ಯವಾಗಿದೆ. ಕೆಡಿಪಿ ಸಭೆ ಸೇರಿ ಜಿಪಂ ಸಭಾಂಗಣದಲ್ಲಿ ನಡೆಯುವ ಪ್ರತಿ ಸಭೆ ವೇಳೆಯೂ ಇದೇ ಪರಿಸ್ಥಿತಿ ಎದುರಾಗುತ್ತಿದ್ದು, ಉಪಹಾರ ವಿತರಣೆಯಲ್ಲಿ ಶಿಸ್ತು ಕಾಯ್ದುಕೊಳ್ಳುವಲ್ಲಿ ಜಿಪಂ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ ಎಂಬ ಬೇಸರ ಅಧಿಕಾರಿ ವರ್ಗದಲ್ಲಿ ಕೇಳಿಬರುತ್ತಿದೆ.
ಇದೇ ಮೊದಲೇನಲ್ಲ! ಇತ್ತೀಚಿಗೆ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆ ವೇಳೆ ಮಧ್ಯಾಹ್ನ ನೀಡಿದ ಲಂಚ್‌ಬ್ರೇಕ್‌ನಲ್ಲಿ ಉಪಹಾರ ವಿತರಣೆಯಲ್ಲಿ ಶಿಸ್ತು ಕಾಯ್ದುಕೊಳ್ಳದ ಪರಿಣಾಮ ಉಪಹಾರ ಪಡೆಯಲು ನೂಕುನುಗ್ಗಲು ಏರ್ಪಟ್ಟಿತ್ತು. ಹಲವು ಅಧಿಕಾರಿಗಳಿಗೆ ಉಪಹಾರ ಸಿಗದೆ ನೀರು ಕುಡಿದು ವಾಪಸ್ ಸಭೆಗೆ ಮರಳಿದ ದೃಶ್ಯ ಕಂಡುಬಂತು. ಇಂತ ಪರಿಸ್ಥಿತಿ ಇದೇ ಮೊದಲೇನಲ್ಲ. ಜಿಲ್ಲಾಡಳಿತಭವನ ಕಾರ್ಯಾರಂಭ ಮಾಡಿದ ದಿನದಿಂದಲೂ ಇಲ್ಲಿ ನಡೆಯುವ ಪ್ರತಿ ಸಭೆಗಳಲ್ಲಿ ಇಂಥ ಅವ್ಯವಸ್ಥೆ ನಡೆಯುತ್ತಲೇ ಇದೆ. ಇದು ಅಧಿಕಾರಿಗಳಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲು ಅಧಿಕಾರಿಗಳಿಗೆ ಮುಜುಗರ ಇದರ ಪರಿಣಾಮವಾಗಿ ಉಪಹಾರ ವಿತರಣೆಯಲ್ಲಿನ ಅವ್ಯವಸ್ಥೆ ಮುಂದುವರೆದುಕೊಂಡು ಬಂದಿದೆ.
ಗಣ್ಯರ ಗಮನಕ್ಕೆ ಬರಲ್ಲ: ಸಭೆ ವೇಳೆ ಜನಪ್ರತಿನಿಧಿಗಳು ಸೇರಿ ಹಿರಿಯ ಅಧಿಕಾರಿಗಳಿಗೆ ಪ್ರತ್ಯೇಕವಾಗಿ ಉಪಹಾರದ ವ್ಯವಸ್ಥೆ ಮಾಡುವುದರಿಂದ ಇಲ್ಲಿನ ಅವ್ಯವಸ್ಥೆ ಅವರ ಗಮನಕ್ಕೆ ಬರುತ್ತಿಲ್ಲ. ಆದರೆ ಸಭೆಯಲ್ಲಿ ಹಾಜರಾಗಿರುವ ಇನ್ನಿತರ ಅಧಿಕಾರಿ ವರ್ಗ ಇದೇ ಅವ್ಯವಸ್ಥೆ ನಡುವೆ ಉಪಹಾರ ಪಡೆಯಲು ಪೈಪೋಟಿಗೆ ಬೀಳುವಂತಾಗಿದೆ. ಇನ್ನು ಮಹಿಳಾ ಅಧಿಕಾರಿಗಳ ಪರಿಸ್ಥಿತಿ ಹೇಳುವಂತೆಯೇ ಇಲ್ಲ. ಜನಜಂಗುಳಿ ನಡುವೆ ನುಗ್ಗಲಾರದೆ ಈ ಅವ್ಯವಸ್ಥೆಯನ್ನು ನೋಡಿಕೊಂಡು ನಿಟ್ಟುಸಿರುವ ಬಿಡುವಂತಾಗಿದೆ.
ಅವ್ಯವಸ್ಥೆಗೆ ಕಾರಣವೇನು? ಪ್ರತಿ ದಿನ ಸಾಮಾನ್ಯವಾಗಿ ಡಿಸಿ ಕಚೇರಿಯಲ್ಲಿ ನೂರಾರು ಸಾರ್ವಜನಿಕರು ಆಗಮಿಸಿರುತ್ತಾರೆ. ಇನ್ನೂ ಕೆಡಿಪಿ ಸಭೆಯಂಥ ವೇಳೆ ಜನಪ್ರತಿನಿಧಿಗಳ ಹಿಂಬಾಲಕರ ಸಂಖ್ಯೆಯೂ ದೊಡ್ಡದಿರುತ್ತದೆ. ಈ ಹಿನ್ನೆಲೆಯಲ್ಲಿ ಸಭೆಯ ನಡುವೆ ಲಂಚ್‌ಬ್ರೇಕ್ ಬಿಟ್ಟಾಗ ಅಧಿಕಾರಿಗಳಿಗಿಂತ ಬೇರೆಯವರ ಸಂಖ್ಯೆಯೇ ದುಪ್ಪಟ್ಟಾಗಿರುತ್ತದೆ. ಎಲ್ಲರೂ ಏಕಾಏಕಿ ಉಪಹಾರಕ್ಕೆ ಮುಗಿಬೀಳುವುದರಿಂದ ಇಂಥ ಅವ್ಯವಸ್ಥೆ ನಿರ್ಮಾಣವಾಗುತ್ತಿದೆ ಎಂದು ಅಧಿಕಾರಿಗಳು ಕಾರಣ ನೀಡುತ್ತಾರೆ. ನೂರಾರು ಸಂಖ್ಯೆಯಲ್ಲಿ ಜನ ಮುಗಿಬೀಳುವುದರಿಂದ ಉಪಹಾರ ವಿತರಿಸುವವರು ಗಾಬರಿಯಾಗುತ್ತಾರೆ, ತಳ್ಳಾಟ ನೂಕಾಟದಿಂದ ಉಪಹಾರವೂ ಚೆಲ್ಲುತ್ತದೆ, ಕೆಲವರ ಕೈತಾಗಿ ಊಟದ ತಟ್ಟೆ ಕೆಳಗೆ ಬೀಳುವ ಸಂದರ್ಭಗಳು ಸಾಮಾನ್ಯವಾಗಿವೆ. ಈ ವೇಳೆ ಕೆಳಗೆ ಬಿದ್ದ ತಟ್ಟೆಗಳನ್ನೇ ತುಳಿದುಕೊಂಡು ಜನ ಓಡಾಡುವ ದೃಶ್ಯಗಳು ಕಂಡುಬರುತ್ತವೆ.
ಡಸ್ಟ್‌ಬಿನ್ ಇಡುವುದಿಲ್ಲ: ಇನ್ನು ಉಪಹಾರ ಆಯೋಜಕರು ಸಮರ್ಪಕವಾಗಿ ಡಸ್ಟ್ ಬಿನ್‌ಗಳನ್ನು ಇಡುವುದಿಲ್ಲ ಇದರಿಂದ ಉಪಹಾರ ಸೇವಿಸಿದ ಜನ ಎಲ್ಲೆಂದರಲ್ಲಿ ತಟ್ಟೆಗಳನ್ನು ಎಸೆಯುತ್ತಾರೆ, ನೀರಿನ ಬಾಟಲಿಗಳನ್ನು ಡಿಸಿ ಕಚೇರಿಯ ಆವರಣದಲ್ಲೇ ಎಸೆಯುತ್ತಾರೆ, ಅರ್ಧತಿಂದ ಉಪಾಹಾರ ತಟ್ಟೆಗಳು ಅರ್ಧ ಕುಡಿದ ನೀರಿನ ಬಾಟಲಿಗಳು ಎಲ್ಲೆಂದರಲ್ಲಿ ಬಿದ್ದು ಅವ್ಯವಸ್ಥೆಗೆ ಕಾರಣವಾಗುತ್ತಿದೆ. ಇನ್ನು ಕುಡಿಯಲು ಇಟ್ಟಿರುವ ಫಿಲ್ಟರ್‌ನಲ್ಲಿ ಎಷ್ಟೋ ಬಾರಿ ನೀರೇ ಬರುವುದಿಲ್ಲ. ಇದರಿಂದ ಉಪಹಾರ ಸೇವಿಸದ ಬಳಿಕ ಕುಡಿವ ನೀರಿಗೆ ಪರದಾಡುವ ದೃಶ್ಯಗಳು ಕಂಡುಬರುತ್ತವೆ.
ಪ್ಲಾಸ್ಟಿಕ್‌ಮಯ: ಕೆಡಿಪಿ ಸೇರಿ ಇನ್ನಿತರ ಸಭೆಗಳಲ್ಲಿ ಕುಡಿವ ನೀರಿಗೆ ಪ್ಲಾಸ್ಟಿಕ್ ಬಳಕೆ ಮಾಡುವುದಿಲ್ಲ ಎಂದು ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಆರ್.ಲತಾ ಅವಧಿಯಲ್ಲಿ ೋಷಿಸಲಾಗಿತ್ತು. ಕೆಲವೊಂದು ಸಭೆಗಳಲ್ಲಿ ಇದನ್ನು ನಿಷೇಧ ಮಾಡಲಾಗಿತ್ತು. ಅದರೆ ಮತ್ತೆ ಇದರ ಪುನಾರ್ವನೆಯಾಗಿದೆ. ಸಭೆ ಸೇರಿ ಎಲ್ಲ ಕಡೆ ಪ್ಲಾಸ್ಟಿಕ್ ಬಾಟಲಿಗಳ ಬಳಕೆ ಅವ್ಯಾಹತವಾಗಿದೆ.
ಪ್ರತಿ ಸಭೆ ವೇಳೆಯೂ ಇಂಥ ಅವ್ಯವಸ್ಥೆ ನಡೆಯುತ್ತದೆ, ಇದಕ್ಕೆ ಕಡಿವಾಣ ಹಾಕಬೇಕಿದೆ, ಉಪಹಾರ ವಿತರಣೆಯಲ್ಲಿ ಶಿಸ್ತು ಕಾಯ್ದುಕೊಳ್ಳಬೇಕಿದೆ, ಕೆಲವರು ಮನೆಯಿಂದಲೇ ಊಟ ತಂದಿರುತ್ತಾರೆ ಆದರೆ ಹಲವರು ಮಧ್ಯಾಹ್ನದ ವೇಳೆ ಹೋಟೆಲ್‌ಗಳನ್ನು ಅವಲಂಬಿಸಿರುತ್ತಾರೆ. ಜಿಲ್ಲಾಡಳಿತಭವನದ ಹತ್ತಿರದಲ್ಲಿ ಸೂಕ್ತ ಹೋಟೆಲ್‌ಗಳಿಲ್ಲ. ಇಲ್ಲಿ ಉಪಹಾರ ಪಡೆಯಲು ಹರಸಾಹಸ ಮಾಡಬೇಕಿದೆ. ಇದರಿಂದ ಎಷ್ಟೋ ಬಾರಿ ಉಪಹಾರ ಬಿಟ್ಟು ಸಭೆಯಲ್ಲಿ ಕುಳಿತುಕೊಳ್ಳುವಂತಾಗಿದೆ.
ಹೆಸರೇಳಲಿಚ್ಚಿಸದ ಅಧಿಕಾರಿ