

ತುಮಕೂರು : ತಾಪಂ ಆಡಳಿತಾವಧಿ ಮಾಸಾಂತ್ಯಕ್ಕೆ ಕೊನೆಗೊಳ್ಳಲಿದ್ದು, ಸೋಮವಾರ ಆಯೋಜಿಸಿದ್ದ ಕೊನೆಯ ಸಾಮಾನ್ಯಸಭೆ ನೀರಸವಾಗಿತ್ತು. ಕರೊನಾತಂಕದ ನಡುವೆ ನಡೆದ ತಾಪಂ ಸಭೆಯಲ್ಲಿ ಯಾವುದೇ ಬಿಸಿಬಿಸಿ ಚರ್ಚೆ ನಡೆಯಲಿಲ್ಲ. 15ನೇ ಹಣಕಾಸು ಯೋಜನೆಯಡಿ ಬಂದಿರುವ ಮೊದಲ ಕಂತು 60 ಲಕ್ಷ ರೂ.,ಗಳಿಗೆ ಕ್ರಿಯಾಯೋಜನೆ ಸಭೆಯಲ್ಲಿ ಅನುಮೋದನೆ ನೀಡಲಾಯಿತು. ಕರೊನಾ ಮಾರ್ಗಸೂಚಿಗಳನ್ವಯ ಎನ್.ಇ.ಕವಿತಾ ಅಧ್ಯಕ್ಷತೆವಹಿಸಿದ್ದರು.
ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೆ ಸಾಗಿದೆ. ಪೊಲೀಸರು, ಅಬಕಾರಿ ಇಲಾಖೆ ಸಿಬ್ಬಂದಿಯೇ ಇದರಲ್ಲಿ ಶಾಮೀಲಾಗಿದ್ದಾರೆ ಎಂದು ಪಕ್ಷಾತೀತವಾಗಿ ಸದಸ್ಯರು ತರಾಟೆಗೆ ತೆಗೆದುಕೊಂಡರು. ಕರೊನಾ ಸಂಕಷ್ಟದಲ್ಲೂ ಬಡವರಿಗೆ ಪಡಿತರ ವಿತರಿಸುವಲ್ಲಿ ಅನ್ಯಾಯವೆಸಗಲಾಗಿದೆ. ಜನರು ತಿನ್ನುವ ಅನ್ನಕ್ಕೂ ಕಲ್ಲು ಹಾಕುವ ನ್ಯಾಯಬೆಲೆ ಅಂಗಡಿ ಮಾಲೀಕರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಸದಸ್ಯರು ಒತ್ತಾಯಿಸಿದರು.
ಅಕ್ರಮ ಮದ್ಯ ಮಾರಾಟ: ಲಾಕ್‌ಡೌನ್ ವೇಳೆ ದಿನಸಿ, ತರಕಾರಿಯಂತೆ ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ ನಡೆದಿದ್ದು ಪೊಲೀಸರು, ಅಬಕಾರಿ ಇಲಾಖೆಯವರು ಇದರಲ್ಲಿ ಶಾಮೀಲಾಗಿದ್ದಾರೆ. ಮದ್ಯ ಅಕ್ರಮ ಮಾರಾಟ ಮಾಡುವರಿಗೆ ಮೊದಲೇ ಮಾಹಿತಿ ಕೊಟ್ಟು ಅಬಕಾರಿ ಇಲಾಖೆ ಸಿಬ್ಬಂದಿ ದಾಳಿ ಮಾಡಿ ಶಾಸ್ತ್ರ ಮುಗಿಸುತ್ತಾರೆ ಎಂದು ಹಿರಿಯ ಸದಸ್ಯ ಗಂಗಾಂಜನೇಯ ಆರೋಪಿಸಿದರು. ಇದಕ್ಕೆ ರಂಗಸ್ವಾಮಯ್ಯ, ಶಿವಕುಮಾರ್, ವಿಜಯಕುಮಾರ್ ಧ್ವನಿಗೂಡಿಸಿದರು. ತಾಲೂಕಿನಾದ್ಯಂತ ಮದ್ಯ ಅಕ್ರಮ ಮಾರಾಟ ಹೆಚ್ಚಿದ್ದರೂ ಅದರ ನಿಯಂತ್ರಣಕ್ಕೆ ಅಧಿಕಾರಿಗಳು ಮುಂದಾಗಿಲ್ಲ. ಗ್ರಾಮಸ್ಥರು ದೂರು ಕೊಟ್ಟರೆ ನೆಪಕ್ಕೆ ದಾಳಿ ಮಾಡುತ್ತಾರೆ. ಮತ್ತೆ ಈ ದಂಧೆ ತಲೆ ಎತ್ತುತ್ತೆ. ಹಾಗಾಗಿ, ಅಬಕಾರಿ ಇಲಾಖೆ ಅಧಿಕಾರಿಗಳಲ್ಲಿ ಅಕ್ರಮದಲ್ಲಿ ಶಾಮೀಲಾಗಿರುವ ಅನುಮಾನುಗಳಿವೆ ಎಂದು ತರಾಟೆಗೆ ತೆಗೆದುಕೊಂಡರು.
ಪಡಿತರ ವಿತರಣೆಯಲ್ಲಿ ಲೋಪ: ಕರೊನಾ ಸಂಕಷ್ಟದಲ್ಲಿ ಸಿಲುಕಿರುವ ಜನರಿಗೆ ಪಡಿತರ ವಿತರಣೆಯನ್ನೂ ಮಾಡದೆ ಮೋಸ ಮಾಡಲಾಗುತ್ತಿದೆ. 2-3 ದಿನ ಮಾತ್ರ ಅಂಗಡಿ ತೆರೆಯಲಾಗುತ್ತೆ. ಪಡಿತರದಾರರಿಗೆ ಸರಿಯಾದ ಮಾಹಿತಿ ನೀಡುವುದಿಲ್ಲ. ಇದರಿಂದ ಎಷ್ಟೋ ಕುಟುಂಬಗಳ ಅನ್ನವನ್ನು ಕಿತ್ತುಕೊಳ್ಳಲಾಗುತ್ತಿದೆ. ಅಧಿಕಾರಿಗಳು ಮಾತ್ರ ಮೌನವಹಿಸಿದ್ದಾರೆ ಎಂದು ಸದಸ್ಯ ರಂಗಸ್ವಾಮಯ್ಯ ದೂರಿದರು. ಇತರ ಸದಸ್ಯರು ತಮ್ಮ ಕ್ಷೇತ್ರಗಳಲ್ಲಿ ಗೋಳು ಬಿಚ್ಚಿಟ್ಟರು.
ಕಾಲುಬಾಯಿ ಲಸಿಕೆ ಹಾಕಿದರೂ ಪಶುಗಳು ಸಾವನ್ನಪ್ಪುತ್ತಿವೆ. ಲಸಿಕೆ ಹಾಕಿ ಏನು ಪ್ರಯೋಜನ? ಲಾಕ್‌ಡೌನ್‌ನಲ್ಲಿ ನಷ್ಟ ಅನುಭವಿಸಿದ ತೋಟಗಾರಿಕೆ ಬೆಳೆಗಾರರಿಗೆ ಪರಿಹಾರ ನೀಡಲಾಗಿದೆಯೇ? ಕಾರ್ಮಿಕ ಇಲಾಖೆ ವಿಷಯಗಳನ್ನು ಸಭೆಯಲ್ಲಿ ಪ್ರಸ್ತಾಪವಾದವು. ಯಾವ ವಿಚಾರಗಳು ಗಂಭೀರವಾಗಿ ಚರ್ಚೆಗೊಳಪಡಲಿಲ್ಲ.
ಸಭೆಯಲ್ಲಿ ತಾಪಂ ಉಪಾಧ್ಯಕ್ಷ ಶಾಂತಕುಮಾರ್, ಸ್ಥಾಯಿಸಮಿತಿ ಅಧ್ಯಕ್ಷ ಮಧು, ಇಒ ಜೈಪಾಲ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಕರೊನಾಗೆ 6 ಶಿಕ್ಷಕರು ಬಲಿ: ಕರೊನಾಕ್ಕೆ ಎರಡನೇ ಅಲೆಯಲ್ಲಿ 6 ಶಿಕ್ಷಕರು ಬಲಿಯಾಗಿದ್ದಾರೆ. ಶಿಕ್ಷಕರು ಸುರಕ್ಷಿತರಾಗಿರುವಂತೆ ಜಾಗೃತಿ ಮೂಡಿಸಲಾಗಿದೆ. ಇನ್ನೂ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ತಾಲೂಕಿನ 10150 ವಿದ್ಯಾರ್ಥಿಗಳು ಹಾಜರಾಗಲಿದ್ದು 54 ಪರೀಕ್ಷಾಕೇಂದ್ರಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. 12 ವಿದ್ಯಾರ್ಥಿಗಳಿಗೆ ಒಂದು ಕೊಠಡಿಯಂತೆ ವ್ಯವಸ್ಥೆ ಮಾಡಲಾಗುವುದು. ವಿದ್ಯಾರ್ಥಿಗಳ ರಕ್ಷಣೆ ನಮ್ಮ ಆದ್ಯತೆ ಎಂದು ಬಿಇಒ ಹನುಮಾನಾಯ್ಕ ಸಭೆಗೆ ಮಾಹಿತಿ ನೀಡಿದರು.