ಎಲ್ಲ ಗ್ರಾಪಂ ಅಧಿಕಾರಿಗಳು ಕ್ರಿಯಾ ಯೋಜನೆ ಸಿದ್ಧಪಡಿಸಿ

TMK zp 1
Published on

ತುಮಕೂರು: ಗ್ರಾಮಗಳ ಪ್ರತೀ ಮನೆಗೂ ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವ ‘ಮನೆ-ಮನೆಗೆ ಗಂಗೆ’ ವಿನೂತನ ಯೋಜನೆ ಬಜೆಟ್‌ನಲ್ಲಿ ಘೋಷಣೆಯಾಗಿದ್ದು, ಯೋಜನೆ ಅನುಷ್ಠಾನಕ್ಕೆ ತರಲು ಎಲ್ಲ ಗ್ರಾಪಂ ಅಧಿಕಾರಿಗಳು ಕೂಡಲೇ ಕ್ರಿಯಾ ಯೋಜನೆ ಸಿದ್ಧಪಡಿಸಬೇಕು ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಆಯುಕ್ತ ಡಾ.ಆರ್.ವಿಶಾಲ್ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ 10 ಜಿಲ್ಲೆಗಳ ಸಿಇಒಗಳೊಂದಿಗೆ ಆಯೋಜಿಸಿದ್ದ ಸ್ವಚ್ಛ ಭಾರತ್ ಮಿಷನ್ (ಗ್ರಾ)ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಈ ಯೋಜನೆಯಡಿ ಮನೆ-ಮನೆಗೆ ನೀರಿನ ಸಂಪರ್ಕ ಕಲ್ಪಿಸುವುದು ಮಾತ್ರವಲ್ಲ, ನೀರು ಸರಬರಾಜು ಮಾಡಲು ಶುಲ್ಕ ನಿಗದಿಪಡಿಸಿ ವಸೂಲಿ ಮಾಡಬೇಕು. ವಸೂಲಾದ ಶುಲ್ಕವನ್ನು ಕುಡಿಯುವ ನೀರು ನಿರ್ವಹಣೆಗೆ ವಿನಿಯೋಗಿಸಬೇಕು ಎಂದರು.

ಶೌಚಗೃಹ ರಹಿತ ಕುಟುಂಬಗಳಿಗೆ ಮುಂದಿನ 6 ವಾರದೊಳಗಾಗಿ ಶೌಚಗೃಹ ನಿರ್ಮಿಸಿಕೊಡಬೇಕು ಎಂದು ಎಲ್ಲ ಸಿಇಒಗಳಿಗೆ ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯದರ್ಶಿ ಪರಮೇಶ್ವರನ್ ಅಯ್ಯರ್ ಗಡುವು ನೀಡಿದರು.

ಬಯಲು ಬಹಿರ್ದೆಸೆ ಮುಕ್ತ ರಾಷ್ಟ್ರ ನಿರ್ಮಿಸಲು ಕೇಂದ್ರ ಸರ್ಕಾರ ಮಹತ್ವಾಕಾಂಕ್ಷಿ ಸ್ವಚ್ಛಭಾರತ್ ಮಿಷನ್ ಯೋಜನೆ ಜಾರಿಗೆ ತಂದು 5 ವರ್ಷ ಕಳೆದಿದ್ದು, ಮುಂದಿನ 5 ವರ್ಷಗಳಿಗಾಗಿ 2ನೇ ಹಂತದಲ್ಲಿ ಸ್ವಚ್ಛಭಾರತ್(ಮಿಷನ್) ಯೋಜನೆ ಅನುಷ್ಠಾನಗೊಳಿಸಲು ಯೋಜಿಸಲಾಗಿದೆ. ಇದಕ್ಕಾಗಿ 1.4ಲಕ್ಷಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗುವುದು ಎಂದರು.

2021ರ ಜನಗಣತಿಯಲ್ಲಿ ಶೌಚಗೃಹದ ಸೌಲಭ್ಯವಿರುವ, ಅದನ್ನು ಬಳಕೆ ಮಾಡುತ್ತಿರುವ ಬಗ್ಗೆ ನಿಖರ ಮಾಹಿತಿ ಸಂಗ್ರಹಿಸುವುದರಿಂದ ಯೋಜನೆಯ ಯಶಸ್ಸಿಗೆ ಅನುಕೂಲವಾಗಲಿದೆ ಎಂದರು. ಜಿಪಂ ಸಿಇಒ ಶುಭಾಕಲ್ಯಾಣ್ ಉತ್ತರಿಸಿ, ಜಿಲ್ಲೆಯಲ್ಲಿ 100 ಸಮುದಾಯ ಶೌಚಾಲಯ ನಿರ್ಮಿಸಲಾಗಿದ್ದು, ಇದಕ್ಕಾಗಿ ಮೊದಲ ಹಂತದಲ್ಲಿ 90ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ಉಳಿದಂತೆ ಅಗತ್ಯವಿರುವ 90 ಲಕ್ಷ ರೂ.ಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ವಿವರಿಸಿದರು. ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ದಾವಣಗೆರೆ, ಹಾಸನ ಸೇರಿ 10 ಜಿಲ್ಲೆಗಳ ಜಿಪಂ ಸಿಇಒ, ಅಧಿಕಾರಿಗಳು ಇದ್ದರು.

ಜಿಲ್ಲೆಯಲ್ಲಿ ನಿರೀಕ್ಷಿತ ಗುರಿ ಸಾಧಿಸಿಲ್ಲ: ಬಯಲುಶೌಚ ಮುಕ್ತ ಜಿಲ್ಲೆ ಎಂದು ಘೋಷಿಸಿಕೊಂಡಿರುವ ತುಮಕೂರು ಜಿಲ್ಲೆಯಲ್ಲಿ ಇನ್ನೂ ಸಾಕಷ್ಟುಕುಟುಂಬಗಳಿಗೆ ಶೌಚಗೃಹ ಇಲ್ಲ ಎಂಬುದನ್ನು ಹಿರಿಯ ಅಧಿಕಾರಿಗಳೇ ಸಭೆಯಲ್ಲಿ ಹೊರಹಾಕಿದರು. ಜಿಲ್ಲೆಯಲ್ಲಿ 10566 ಶೌಚಗೃಹ ನಿರ್ಮಿಸುವ ಗುರಿ ನೀಡಿದ್ದರೆ ಶೇ.98 ಮಾತ್ರ ಪ್ರಗತಿಯಾಗಿದೆ, ಎನ್‌ಒಎಲ್‌ಬಿಯಲ್ಲಿ ಶೇ.9 ಪ್ರಗತಿಯಾಗಿದ್ದು ಇನ್ನೂ ಸಾಕಷ್ಟು ಸರ್ಕಾರಿ ಶಾಲೆ, ಅಂಗನವಾಡಿ ಕೇಂದ್ರಗಳಲ್ಲಿ ಶೌಚಗೃಹಗಳಿಲ್ಲ, ಇರುವ ಶೌಚಗೃಹಗಳ ನಿರ್ವಹಣೆಯೂ ಅಷ್ಟಕಷ್ಟೇ ಎಂದು ಜಿಪಂ ಸಿಇಒ ಅವರನ್ನು ಡಾ.ವಿಶಾಲ್ ತರಾಟೆಗೆ ತೆಗೆದುಕೊಂಡರು.

ಗ್ರಾಮೀಣ ಪ್ರದೇಶಗಳಲ್ಲಿ ಶೇ.40ರಷ್ಟು ಮಾತ್ರ ಕುಡಿಯುವ ನೀರು ಸರಬರಾಜಿದೆ, 5 ವರ್ಷದಲ್ಲಿ ಶೇ.100 ನೀರು ಪೂರೈಸುವ ಉದ್ದೇಶವಿದೆ, ಇದಕ್ಕಾಗಿ 2019ರಲ್ಲಿ ಜಲ್-ಜೀವನ್ ಮಿಷನ್‌ಯೋಜನೆ ಜಾರಿಯಾಗಿದ್ದು ನೀರಿನ ಮೂಲಗಳ ಮರುಪೂರಣ, ಮಳೆ ನೀರು ಮರುಬಳಕೆಗೆ ಆದ್ಯತೆ ನೀಡಲಾಗುವುದು. ಡಾ.ವಿಶಾಲ್ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಆಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net