ಕಾಮನೂರು, ಮೋರನಾಳ ದತ್ತು ಗ್ರಾಮಕ್ಕೆ ಆಯ್ಕೆ

zp koppal adaption village kamanoor moranala
Published on

ಕೊಪ್ಪಳ: ನರೇಗಾದಡಿ ಕಾಮನೂರು ಹಾಗೂ ಮೋರನಾಳ ಗ್ರಾಮಗಳನ್ನು ಜಿಪಂ ದತ್ತು ಗ್ರಾಮಗಳೆಂದು ಘೋಷಿಸಿದ್ದು, ಅಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿ ಸಾರ್ವಜನಿಕರೊಂದಿಗೆ ಸಭೆ ನಡೆಸಿತು.

ಇತ್ತೀಚೆಗೆ ನಡೆದ ಜಿಪಂ ದಿಶಾ ಸಮಿತಿ ಸಭೆಯಲ್ಲಿ ದತ್ತು ಗ್ರಾಮ ಸ್ವೀಕಾರ ಚರ್ಚೆ ನಡೆದಿತ್ತು. ಈ ವೇಳೆ ಸಂಸದ ರಾಜಶೇಖರ ಹಿಟ್ನಾಳ ಕಾಮನೂರು ಹಾಗೂ ಮೋರನಾಳ ಗ್ರಾಮ ಆಯ್ಕೆಗೆ ಸೂಚಿಸಿದರು. ಈ ಬೆನ್ನಲ್ಲೇ ಜಿಪಂ ಯೋಜನಾ ನಿರ್ದೇಶಕ ಪ್ರಕಾಶ ವಡ್ಡರ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲಿಸಿತು. ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗಾಗಿ ದತ್ತು ಪಡೆಯಲಾಗಿದೆ. ಗ್ರಾಮಸ್ಥರು ಅಭಿವೃದ್ಧಿ ಕಾರ್ಯಕ್ಕೆ ಕೈ ಜೋಡಿಸುವಂತೆ ಮನವಿ ಮಾಡಿದರು. ಗ್ರಾಪಂ, ಕೃಷಿ, ತೋಟಗಾರಿಕೆ, ಅರಣ್ಯ, ರೇಷ್ಮೆ ಇಲಾಖೆ ಕಾಮಗಾರಿ ಅನುಷ್ಠಾನಕ್ಕೆ ಇರುವ ಅವಕಾಶಗಳ ಕುರಿತು ಜನರಿಗೆ ತಿಳಿಸಿದರು.

ಜನರು ತಮ್ಮೂರಿಗೆ ಬೇಕಾದ ಯೋಜನೆಗಳ ಕುರಿತು ಅಭಿಪ್ರಾಯ ಹಂಚಿಕೊಂಡರು. ತಾಂತ್ರಿಕ ಸಹಾಯಕರು ವಾರ್ಡ್​ವಾರು ತೆರಳಿ ಚರಂಡಿ, ರಸ್ತೆ, ಶಾಲಾಭಿವೃದ್ಧಿ ಕಾಮಗಾರಿಗಳ ವಿವರ ಪಡೆದರು. ನರೇಗಾ ಹಾಗೂ ವಿವಿಧ ಯೋಜನೆಗಳನ್ನು ಒಗ್ಗೂಡಿಸಿಕೊಂಡು ಕಾಮಗಾರಿ ಅನುಷ್ಠಾನಗೊಳಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದರು. ಸಣ್ಣ, ಅತೀ ಸಣ್ಣ ರೈತರಿಗೆ ನರೇಗಾದಡಿ ಸಿಗುವ ಸೌಲಭ್ಯಗಳ ಮಾಹಿತಿ ಒದಗಿಸಿದರು.

ಅಂಗನವಾಡಿಗೆ ಭೇಟಿ ನೀಡಿದ ತಂಡ ಮಕ್ಕಳ ತೂಕ ಹಾಕುತ್ತಿರುವ ಬಗ್ಗೆ ಪರಿಶೀಲಿಸಿದರು. ಮಕ್ಕಳಿಗೆ ಆಹಾರ ವಿತರಿಸುವ ಕುರಿತು ಮಾಹಿತಿ ಪಡೆದರು. ಗ್ರಾಮದ ಕೆರೆ ಇತರ ಸ್ಥಳ ಪರಿಶೀಲಿಸಿ ಕೈಗೊಳ್ಳಬಹುದಾದ ಕಾಮಗಾರಿಗಳ ಬಗ್ಗೆ ಸಮಾಲೋಚಿಸಿದರು.

ನರೇಗಾ ಸಹಾಯಕ ನಿರ್ದೇಶಕ ಯಂಕಪ್ಪ, ಗ್ರಾಮಸ್ಥರಾದ ದ್ಯಾಮಣ್ಣ ಹೊನ್ನತ್ತಿ, ಮಲ್ಲಪ್ಪ ಕೊಡ್ಲಿ, ದೇವಪ್ಪ, ಮಹಾದೇವಪ್ಪ ಕುರಿ, ಪಿಡಿಒ ಸಂಗಮೇಶ ತೇರಿನ, ನರೇಗಾ ಸಿಬ್ಬಂದಿ ಪಂಪನಗೌಡ, ಯಮನೂರಪ್ಪ, ದೇವರಾಜ ಪತ್ತಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net