ಚಿ.ನಾ.ಹಳ್ಳಿಯಲ್ಲಿ ಬಿಜೆಪಿಗೆ ಬಂಡಾಯದ ಭಯ ; ಕಮಲದಲ್ಲಿ ಬಣ, ಕಾಂಗ್ರೆಸ್ ಒಡೆದ ಮನೆ, ಜೆಡಿಎಸ್‌ನಲ್ಲಿ ನಿರುತ್ಸಾಹ

ZP tmk
Published on

ಚಿಕ್ಕನಾಯಕನಹಳ್ಳಿ ; ಜಿಪಂ, ತಾಪಂ ಚುನಾವಣೆಗೆ ಮೀಸಲಾತಿ ೋಷಣೆಯಾದ ನಂತರ ಸಹಜವಾಗಿಯೇ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಪ್ರತಿನಿಧಿಸುವ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿಯೂ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಬಿಜೆಪಿಯಲ್ಲಿ ಬಣ, ಕಾಂಗ್ರೆಸ್ ಒಡೆದ ಮನೆ ಹಾಗೂ ಜೆಡಿಎಸ್ ಸಾರಥಿಯ ಕೊರತೆ ಎದುರಿಸುತ್ತಿದೆ.

ಬುಕ್ಕಾಪಟ್ಟಣ ಜಿಪಂ ಕ್ಷೇತ್ರವನ್ನೂ ಒಳಗೊಂಡಂತೆ ಚಿಕ್ಕನಾಯನಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಆರು ಜಿಪಂ, 14 ತಾಪಂ ಕ್ಷೇತ್ರಗಳಿವೆ. ಬಿಜೆಪಿಯಲ್ಲಿ ಜೆ.ಸಿ.ಮಾಧುಸ್ವಾಮಿ ಹಾಗೂ ಕೆ.ಎಸ್.ಕಿರಣ್‌ಕುಮಾರ್ ಪ್ರತ್ಯೇಕ ಬಣ, ಜೆಡಿಎಸ್‌ನಲ್ಲಿ ಚುನಾವಣೆ ನಂತರ ಸಿ.ಬಿ.ಸುರೇಶ್‌ಬಾಬು ಅನುಪಸ್ಥಿತಿ ಹಾಗೂ ಕಾಂಗ್ರೆಸ್‌ನಲ್ಲಿ ಡಾ.ಸಾಸಲು ಸತೀಶ್‌ಗೆ ಹಿರಿಯ ಮುಖಂಡರ ಹಸ್ತಕ್ಷೇಪದ ಕಿರಿಕಿರಿ ಆಕಾಂಕ್ಷಿಗಳ ಆತಂಕ ಹೆಚ್ಚಿಸಿದೆ.

ಹುಳಿಯಾರು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದ ನಂತರ ಸೃಜನವಾದ ತಮ್ಮಡಿಹಳ್ಳಿ (ಎಸ್‌ಸಿ ಮಹಿಳೆ), ಕೆಂಕೆರೆ, ಶೆಟ್ಟಿಕೆರೆ (ಸಾಮಾನ್ಯ ಮಹಿಳೆ), ಹಂದನಕೆರೆ (ಎಸ್‌ಟಿ), ತಿಮ್ಮನಹಳ್ಳಿ (ಸಾಮಾನ್ಯ) ಹಾಗೂ ಬುಕ್ಕಾಪಟ್ಟಣ (ಬಿಸಿಎಂಎ ಮಹಿಳೆ) ಕ್ಷೇತ್ರದಲ್ಲಿ ಮೀಸಲಾತಿ ಪ್ರಕಟವಾದ ನಂತರ ಆಕಾಂಕ್ಷಿಗಳು ಪಕ್ಷದ ಟಿಕೆಟ್‌ಗೆ ನಾಯಕರ ಮನೆಗೆ ಎಡತಾಕಲಾರಂಭಿಸಿದ್ದಾರೆ.

ಕಾಮಲಾಪುರ, ತಮ್ಮಡಿಹಳ್ಳಿ (ಸಾಮಾನ್ಯ ಮಹಿಳೆ), ಶೆಟ್ಟಿಕೆರೆ, ತಿಮ್ಲಾಪುರ (ಬಿಸಿಎಂಎಮಹಿಳೆ), ದೊಡ್ಡಎಣ್ಣೆಗೆರೆ, ಮುದ್ದೇನಹಳ್ಳಿ, ಹಂದನಕರೆ, ಬೆಳಗುಲಿ, ಬೆಳ್ಳಾರ (ಸಾಮಾನ್ಯ), ದಸೂಡಿ (ಎಸ್‌ಸಿ ಮಹಿಳೆ), ಕೆಂಕೆರೆ (ಬಿಸಿಎಂ.ಬಿ), ತಿಮ್ಮನಹಳ್ಳಿ (ಎಸ್‌ಸಿಮಹಿಳೆ), ಕಾತ್ರಿಕೆಹಾಳ್ (ಎಸ್‌ಟಿ ಮಹಿಳೆ), ಗೋಡೆಕೆರೆ (ಎಸ್‌ಸಿ) ಕ್ಷೇತ್ರದಲ್ಲಿಯೂ ಆಕಾಂಕ್ಷಿಗಳ ದೊಡ್ಡ ಪಡೆಯೇ ಸೃಷ್ಟಿಯಾಗಿದೆ.

ಬಿಜೆಪಿಯಲ್ಲಿ ಮಾಧುಸ್ವಾಮಿ ಹಾಗೂ ಮಾಜಿ ಶಾಸಕ ಕೆ.ಎಸ್.ಕಿರಣ್‌ಕುಮಾರ್ ಪ್ರತ್ಯೇಕ ಬಣ ಸೃಷ್ಟಿಯಾಗಿದ್ದು ಟಿಕೆಟ್ ಹಂಚಿಕೆ ಸಂದರ್ಭದಲ್ಲಿ ಸ್ಫೋಟಗೊಳ್ಳುವುದು ಬಹುತೇಕ ಖಚಿತವಾಗಿದೆ. ಕ್ಷೇತ್ರದ ರಾಜಕೀಯ ಚಿತ್ರಣವೇ ಬದಲಾದರೂ ಆಶ್ಚರ್ಯಪಡುವಂತಿಲ್ಲ. ಶೆಟ್ಟಿಕೆರೆ, ಹಂದನಕೆರೆ, ಕೆಂಕೆರೆ ಜಿಪಂ ಕ್ಷೇತ್ರದ ಮೇಲೆ ಆಸೆ ಇಟ್ಟುಕೊಂಡಿದ್ದ ಸಾಮಾನ್ಯ ಅಭ್ಯರ್ಥಿಗಳಿಗೆ ಮೀಸಲಾತಿ ತೀವ್ರ ನಿರಾಸೆ ತಂದಿದ್ದು ಚುನಾವಣೆ ಸಂದರ್ಭದಲ್ಲಿ ಬಿಜೆಪಿಗೆ ಮುಳುವಾಗಲೂಬಹುದು.

ಸೋಲು ಕಂಡಿದ್ದರೂ ಕ್ಷೇತ್ರದಲ್ಲಿ ಸಾಕಷ್ಟು ಜನಪ್ರಿಯತೆ ಉಳಿಸಿಕೊಂಡಿರುವ ಜೆಡಿಎಸ್ ಮುಖಂಡ ಸಿ.ಬಿ.ಸುರೇಶ್‌ಬಾಬು ಕ್ಷೇತ್ರದಲ್ಲಿ ಕಾಣಿಸಿಕೊಳ್ಳದಿರುವುದು ಕಾರ್ಯಕರ್ತರ ಉತ್ಸಾಹ ತಗ್ಗಿಸಿದೆ. ಈ ನಡುವೆ ಸುರೇಶ್‌ಬಾಬು ಕಾಂಗ್ರೆಸ್ ಸೇರುತ್ತಾರೆ ಎಂಬ ವದಂತಿಯೂ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಚುನಾವಣೆ ಸ್ಫರ್ಧಿಸುವ ಮೊದಲು ಕಾದುನೋಡುವ ತಂತ್ರಕ್ಕೆ ಕಾರ್ಯಕರ್ತರು ಮೊರೆಹೋಗಿದ್ದಾರೆ.

ಹಂದನಕೆರೆಗೆ ಸಿಂಗದಹಳ್ಳಿ ಫಿಕ್ಸ್ : ಪರಿಶಿಷ್ಟ ವರ್ಗಕ್ಕೆ ಮೀಸಲಾಗಿರುವ ಹಂದನಕೆರೆ ಜಿಪಂ ಕ್ಷೇತ್ರದಿಂದ ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿಂಗದಹಳ್ಳಿ ರಾಜಕುಮಾರ್ ಸ್ಫರ್ಧಿಸುವುದು ಖಚಿತ ಎನಿಸಿದೆ. ಬಿಜೆಪಿಯಲ್ಲಿದ್ದರೂ ಇತ್ತೀಚೆಗೆ ಸಚಿವ ಮಾಧುಸ್ವಾಮಿ ಜತೆ ಅಂತರ ಕಾಯ್ದುಕೊಂಡಿರುವ ರಾಜ್‌ಕುಮಾರ್ ಯಾವ ಪಕ್ಷದಿಂದ ಸ್ಫರ್ಧೆಗಿಳಿಯುತ್ತಾರೆ ಎಂಬ ಕುತೂಹಲವಿದೆ.

ಜೆಸಿಎಂ ಪಾಳಯದಲ್ಲಿನ ಪ್ರಮುಖ ಮುಖಂಡರೆಲ್ಲ ಅವರಿಂದ ದೂರವಾಗುತ್ತಿರುವ ಸಂಕೇತದ ನಡುವೆಯೇ ಬಿಜೆಪಿಯಲ್ಲಿರುವ ಬಣ ರಾಜಕೀಯ ಟಿಕೆಟ್ ಹಂಚಿಕೆ ಸಂದರ್ಭದಲ್ಲಿ ಸ್ಫೋಟಗೊಳ್ಳುವುದು ನಿಶ್ಚಿತ ಎನಿಸಿದೆ. ಜಿಪಂ ಮಾಜಿ ಅಧ್ಯಕ್ಷ ಜಿ.ರಘುನಾಥ್ ಅವರ ಪತ್ನಿ ಲಕ್ಷ್ಮೀ ತಮ್ಮಡಿಹಳ್ಳಿ ಕ್ಷೇತ್ರದಿಂದ ಕಣಕ್ಕಿಳಿಯುವ ಸಾಧ್ಯತೆಯಿದೆ. ಜಿಪಂ ನಿಕಟಪೂರ್ವ ಸದಸ್ಯರಿಗೆ ಮೀಸಲಾತಿ ಸಿಗದೆ ಕ್ಷೇತ್ರವೇ ಇಲ್ಲದಂತಾಗಿದ್ದು ರಾಜಕೀಯ ಹಿನ್ನೆಡೆ ಎನಿಸಿದೆ. ಬೇರೆ ಕ್ಷೇತ್ರಗಳಲ್ಲಿ ಸ್ಪರ್ಧಿಸುವ ವರ್ಚಸ್ಸು ಯಾರೂ ಹೊಂದಿಲ್ಲ.

ಚುನಾವಣೆ ಹೊಣೆಗೆ ಡಾ.ಸತೀಶ್ ಹಿಂದೇಟು? ; ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಬಲವಾಗಿದ್ದರೂ ಈ ಚುನಾವಣೆಯಲ್ಲಿ ಜವಾಬ್ದಾರಿ ತೆಗೆದುಕೊಳ್ಳುವವರೇ ಇಲ್ಲವಾಗಿದೆ, ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಮಹತ್ವಾಕಾಂಕ್ಷೆಯಿಂದ ಕ್ಷೇತ್ರದೆಲ್ಲೆಡೆ ಪಕ್ಷ ಸಂಘಟಿಸಿದ್ದ ಜಿಲ್ಲಾ ಕಾರ್ಯಾಧ್ಯಕ್ಷ ಡಾ.ಸಾಸಲು ಸತೀಶ್‌ಗೆ ಹುಳಿಯಾರು ಪಪಂ ಚುನಾವಣೆ ಸಂದರ್ಭದಲ್ಲಿ ಜಿಲ್ಲೆಯ ಹಿರಿಯ ಮುಖಂಡರ ಹಸ್ತಕ್ಷೇಪ ಬೇಸರ ತರಿಸಿದೆ ಎನ್ನಲಾಗಿದ್ದು ತಾಪಂ, ಜಿಪಂ ಚುನಾವಣೆಯಿಂದಲೂ ಡಾ.ಸತೀಶ್ ದೂರ ಉಳಿದರೆ ಸ್ಫರ್ಧೆಗೆ ಕಾಂಗ್ರೆಸ್ ಟಿಕೆಟ್ ಕೇಳುವವರೇ ಇಲ್ಲದಂತಾಗುತ್ತದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಯಾಗಿದ್ದ ಟಿ.ಜೆ.ಸಂತೋಷ್ ನಂತರ ಕ್ಷೇತ್ರದಲ್ಲಿ ಕಾಣಿಸಿಕೊಂಡಿಲ್ಲ. ಕ್ಷೇತ್ರದಲ್ಲಿ ಕಾರ್ಯಕರ್ತರ ಪರಿಚಯವಿರುವ ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಕೂಡ ಚುನಾವಣೆ ಜವಾಬ್ದಾರಿ ವಹಿಸಿಕೊಳ್ಳುವ ಸಾಧ್ಯತೆ ಇಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net