

ತುಮಕೂರು : ಬಹುನಿರೀಕ್ಷಿತ ಜಿಪಂ ಹಾಗೂ ತಾಪಂ ಚುನಾವಣೆಗೆ ಮೀಸಲಾತಿ ಕರಡು ಪ್ರಕಟವಾಗಿದ್ದು, ಜಿಲ್ಲೆಯೆಲ್ಲೆಡೆ ರಾಜಕೀಯ ಚಟುವಟಿಕೆ ಗರಿಗೆದರಿದೆ.
ಕ್ಷೇತ್ರದಲ್ಲಿ ಪ್ರಭಾವಿಯಾಗಿರುವ ಶಾಸಕರು, ಆಡಳಿತ ಪಕ್ಷದ ಮಾಜಿ ಶಾಸಕರು ಎರಡನೇ ತಲೆಮಾರಿನ ನಾಯಕರು ಬೆಳೆಯದಂತೆ ಮೀಸಲಾತಿ ನಿಗದಿಯಲ್ಲಿ ಕೈಯಾಡಿಸಿದ್ದಾರೆ ಎಂಬ ಮಾತು ಎಲ್ಲ ಕ್ಷೇತ್ರದಲ್ಲಿಯೂ ಇದೆ.
ತೀವ್ರ ಕುತೂಹಲ ಉಳಿಸಿಕೊಂಡಿದ್ದ ತುಮಕೂರು ಗ್ರಾಮೀಣ ಕ್ಷೇತ್ರದ 9 ಜಿಪಂ ಕ್ಷೇತ್ರಗಳಲ್ಲಿ ಆರು ಕ್ಷೇತ್ರಗಳು ಮಹಿಳೆಗೆ ಮೀಸಲಾಗಿಟ್ಟಿರುವುದರ ಹಿಂದೆ ಮಾಜಿ ಶಾಸಕ ಬಿ.ಸುರೇಶ್‌ಗೌಡ ಪ್ರಭಾವವಿದೆ ಎಂಬ ಮಾತು ಬಿಜೆಪಿ ಪಾಳಯದಲ್ಲಿಯೇ ಕೇಳಿಬರುತ್ತಿದೆ. ಪರ್ಯಾಯ ನಾಯಕತ್ವದ ದಮನದ ಜತೆಗೆ ಟಿಕೆಟ್‌ಗೆ ಪೈಪೋಟಿಯೇ ಬರದಂತೆ ಮೀಸಲು ನಿಗದಿಯಾಗಿದೆ.
ಬಿಜೆಪಿ ಜಿಲ್ಲಾಧ್ಯಕ್ಷರೂ ಆಗಿರುವ ಮಾಜಿ ಶಾಸಕ ಬಿ.ಸುರೇಶ್‌ಗೌಡ ಸರ್ಕಾರದಲ್ಲಿ ಪ್ರಭಾವ ಬಳಸಿಕೊಂಡು ಮಹಿಳೆಯರಿಗೆ ಹೆಚ್ಚು ಅವಕಾಶ ಮಾಡಿಕೊಟ್ಟಿರುವ ರಾಜಕೀಯ ನಡೆಯ ಬಗ್ಗೆ ತರಹೇವಾರಿ ಚರ್ಚೆ ಹುಟ್ಟಿಕೊಂಡಿವೆ.
ತುಮಕೂರು ತಾಲೂಕಿನ ಸಿದ್ಧಗಂಗಾ ಮಠ, ಗೂಳೂರು, ಹೆಬ್ಬೂರು, ಹೊನ್ನುಡಿಕೆ ಕ್ಷೇತ್ರ ಸಾಮಾನ್ಯ ಮಹಿಳೆಗೆ, ಊರ್ಡಿಗೆರೆ ಬಿಸಿಎಂಎ ಮಹಿಳೆಗೆ ಮೀಸಲಾಗಿಗಿದೆ. ಹೆಗ್ಗೆರೆ ಎಸ್‌ಟಿಗೆ, ನಾಗವಲ್ಲಿ ಎಸ್‌ಸಿಗೆ ಹಾಗೂ ಊರುಕೆರೆ ಮಾತ್ರ ಸಾಮಾನ್ಯ ಕ್ಷೇತ್ರವಾಗಿದೆ. ಎಸ್‌ಸಿ ಮೀಸಲು ವಿಧಾನಸಭಾ ಕ್ಷೇತ್ರ ಕೊರಟಗೆರೆಯಲ್ಲಿರುವ ಐದು ಕ್ಷೇತ್ರದಲ್ಲಿ ನಾಲ್ಕು ಸಾಮಾನ್ಯರಿಗೆ ಮೀಸಲಿದೆ, ಅದರಲ್ಲಿ ಎರಡು ಸಾಮಾನ್ಯ ಮಹಿಳೆಗೆ ಉಳಿದ ಒಂದರಲ್ಲಿ ಎಸ್‌ಸಿ ಮಹಿಳೆಗೆ ಮೀಸಲಾಗಿದೆ.
ಕಾಂಗ್ರೆಸ್ ಹಿರಿಯ ನಾಯಕ ಕೆಂಚಮಾರಯ್ಯ ಶಿರಾ ತಾಲೂಕು ನಾದೂರು ಕ್ಷೇತ್ರ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಯಿದೆ, ಶಾಂತಲಾ ರಾಜಣ್ಣ ಮಧುಗಿರಿ ತಾಲೂಕು ಇಟಕದಿಬ್ಬನಹಳ್ಳಿ ಕ್ಷೇತ್ರದಲ್ಲಿ, ನಾರು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಬಿ.ಕೆ.ಮಂಜುನಾಥ್ ಶಿರಾ ತಾಲೂಕು ಬೇವಿನಹಳ್ಳಿ ಕ್ಷೇತ್ರದಲ್ಲಿ ಸ್ಫರ್ಧಿಸಲು ಅವಕಾಶವಿದೆ. ವೈ.ಎಚ್.ಹುಚ್ಚಯ್ಯ, ಎಂ.ಲತಾ, ಶಾರದಾ ಮತ್ತಿತರರ ಹಿರಿಯ ಸದಸ್ಯರು ಹೊಸ ಕ್ಷೇತ್ರಗಳನ್ನು ಹುಡುಕಿಕೊಳ್ಳುವುದು ಅನಿವಾರ್ಯ ಎನಿಸಿದೆ.
ಅರಕೆರೆ ರವೀಶ್‌ಗೆ ನಿರಾಶೆ!: ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಅರಕೆರೆ ರವೀಶ್‌ಗೆ ಮೀಸಲಾತಿ ತೀವ್ರ ನಿರಾಸೆ ತಂದಿದೆ, ಸಿ.ಟಿ.ಕೆರೆ ಕ್ಷೇತ್ರದಿಂದ ಸ್ಫರ್ಧಿಸುವ ಆಸೆಯೊಂದಿಗೆ ಕಳೆದ ಗ್ರಾಪಂ ಚುನಾವಣೆಯಲ್ಲಿ ಭಾರಿ ಸಂಪನ್ಮೂಲದ ಜತೆಗೆ ಚುನಾವಣೆ ನಡೆಸಿದ್ದ ರವೀಶ್ ಜಿಪಂ ಸ್ಫರ್ಧೆಯ ಮೂಲಕ ಚುನಾವಣಾ ರಾಜಕೀಯಕ್ಕೆ ಪ್ರವೇಶಿಸುವ ಕನಸು ಕಂಡಿದ್ದರು.
ಸಾಮಾನ್ಯ ಅಥವಾ ಬಿಸಿಎಂ(ಬಿ) ಮೀಸಲಾತಿ ಬಂದರಷ್ಟೇ ರವೀಶ್‌ಗೆ ಸ್ಪರ್ಧಿಸಲು ಅವಕಾಶವಿತ್ತು. ಆದರೆ, ಸಿ.ಟಿ.ಕೆರೆ ಕ್ಷೇತ್ರ ಎಸ್‌ಸಿ ಮಹಿಳೆಗೆ ಮೀಸಲಾಗಿದ್ದು ಭರವಸೆಯ ಯುವ ನಾಯಕನಿಗೆ ತೀವ್ರ ನಿರಾಸೆ ತಂದಿದೆ. ಅನಿರೀಕ್ಷಿತ ಬೆಳವಣಿಗೆಯಲ್ಲಿ ಊರುಕೆರೆ ಕ್ಷೇತ್ರ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಬ್ಬಾಕ ರವಿ ಸ್ಫರ್ಧೆ ಖಚಿತ ಎನಿಸಿದೆ.
ಜೆಸಿಎಂ ಹಸ್ತಕ್ಷೇಪವಿಲ್ಲದ ಚಿನಾ ಹಳ್ಳಿ? : ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಸ್ವಕ್ಷೇತ್ರ ಚಿಕ್ಕನಾಯನಹಳ್ಳಿ ತಾಲೂಕಿನ ಜಿಪಂ ಕ್ಷೇತ್ರದ ಮೀಸಲಾತಿ ನಿಗದಿಯಲ್ಲಿ ಸಚಿವರು ಪ್ರಭಾವ ಬಳಸದಿರುವುದು ಅಚ್ಚರಿ ಮೂಡಿಸಿದೆ. ಟಿಕೆಟ್ ಹಂಚಿಕೆ ಸಮಯದಲ್ಲಿ ತೀವ್ರ ಜಿದ್ದಾಜಿದ್ದಿ ಸೃಷ್ಟಿಸಲಿರುವ ಕೆಂಕೆರೆ ಕ್ಷೇತ್ರ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು ಜೆಸಿಎಂ ಮೀಸಲಾತಿ ನಿಗದಿಯಲ್ಲಿ ಪ್ರಭಾವ ಬೀರಿಲ್ಲ ಎಂಬುದಕ್ಕೆ ಪುಷ್ಟಿ ನೀಡಿದೆ. ಹೊಸ ಕ್ಷೇತ್ರ ತಮ್ಮಡಿಹಳ್ಳಿ ಎಸ್‌ಸಿ ಮಹಿಳೆಗೆ, ತಿಮ್ಮನಹಳ್ಳಿ ಸಾಮಾನ್ಯರಿಗೆ, ಶೆಟ್ಟಿಕೆರೆ ಸಾಮಾನ್ಯ ಮಹಿಳೆ ಹಾಗೂ ಬುಕ್ಕಾಪಟ್ಟಣ ಬಿಸಿಎಂಎ(ಮಹಿಳೆ)ಗೆ ಮೀಸಲಿಡಲಾಗಿದೆ.