

ಮಂಡ್ಯ: ಗ್ರಾಮೀಣ ಆರ್ಥಿಕತೆ ವೃದ್ಧಿ, ಪರಿಸರ ಸಮತೋಲನ ಹಾಗೂ ಆಹಾರ ಭದ್ರತೆಗೆ ತೋಟಗಾರಿಕಾ ಬೆಳೆಗಳಿಗೆ ಪ್ರೋತ್ಸಾಹ ನೀಡುವುದು ಬಹು ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ತೋಟಗಾರಿಕಾ ಬೆಳೆಗಳನ್ನು ಬೆಳೆಯುವಂತೆ ರೈತರನ್ನು ಪ್ರೋತ್ಸಾಹಿಸಬೇಕು. ಅಂತೆಯೇ ಈ ಬೆಳೆಗಳಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸುವಂತೆ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಸೂಚಿಸಿದರು.
ಮಂಡ್ಯ, ಶ್ರೀರಂಗಪಟ್ಟಣ ಮತ್ತು ಪಾಂಡವಪುರ ತಾಲೂಕಿನ ತೋಟಗಾರಿಕಾ ಇಲಾಖೆಯ ಫಲಾನುಭವಿಗಳ ಜಮೀನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಅಣಬೆ, ಕರಿಬೇವು, ಪಪ್ಪಾಯ, ಬಾಳೆ ಬೆಳೆ ಬೆಳೆದಿರುವ ರೈತರೊಂದಿಗೆ ಚರ್ಚಿಸಿ ಯೋಜನೆಯಿಂದಾಗಿರುವ ಪ್ರಯೋಜನದ ಬಗ್ಗೆ ಮಾಹಿತಿ ಪಡೆದರು.
ತೋಟಗಾರಿಕೆ ಇಲಾಖೆಯಿಂದ ಬಿತ್ತನೆ, ಮಲ್ಚಿಂಗ್, ಹನಿ ನೀರಾವರಿ, ಗ್ರೀನ್ ಹೌಸ್‌ಗಳಿಗೆ ಸರ್ಕಾರದ ಮಾರ್ಗಸೂಚಿಯನ್ವಯ ಸಹಾಯಧನ ನೀಡಲಾಗುತ್ತದೆ. ರೈತರು ಇದರ ಸದುಪಯೋಗಪಡೆದುಕೊಳ್ಳಬೇಕು. ತೋಟಗಾರಿಕೆ ಬೆಳೆಗಳನ್ನು ಬೆಳೆದು ಯಶಸ್ವಿಯಾಗಿರುವ ರೈತರ ಯಶೋಗಾಥೆಗಳನ್ನು ಸಿದ್ದಪಡಿಸಿ ಜಿಲ್ಲೆಯಾದ್ಯಂತ ಪ್ರಚಾರ ಮಾಡುವಂತೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
10*10 ಅಡಿ ಅಳತೆಯಲ್ಲಿ ಅಣಬೆ ಬೇಸಾಯ: ಮನೆಯ ಛಾವಣಿಯ 10*10 ಅಡಿ ಅಳತೆಯಲ್ಲಿ ಅಣಬೆ ಬೇಸಾಯ ಮಾಡುತ್ತಿರುವ ಸುನೀಲ್ ಎಂಬುವವರು ಡಿಪ್ಲೊಮೋ ಪದವಿ ಪಡೆದಿದ್ದು, ಅಣಬೆ ಬೇಸಾಯದಿಂದ ಪ್ರತೀ ಮಾಹೆ 25,000 ರೂನಿಂದ 30 ಸಾವಿರ ರೂವರೆಗೆ ಆದಾಯ ಗಳಿಸುತ್ತಿದ್ದಾರೆ. 2 ಲಕ್ಷ ರೂಗಳ ಮೂಲ ಬಂಡವಾಳದೊಂದಿಗೆ ಅಣಬೆ ಬೇಸಾಯ ಪ್ರಾರಂಭಿಸಿದ್ದು, ತೋಟಗಾರಿಕಾ ಇಲಾಖೆಯಿಂದ 1 ಲಕ್ಷ ರೂವರೆಗೆ ಸಹಾಯಧನ ದೊರೆಯುತ್ತದೆ. ಇದೇ ಮಾದರಿಯಲ್ಲಿ ಸ್ವ-ಸಹಾಯ ಸಂಘಗಳು ಅಣಬೆ ಬೇಸಾಯ ಮಾಡಿಸಲು ತರಬೇತಿ ನೀಡಬೇಕು ಹಾಗೂ ಅವರು ಬೆಳೆದ ಬೆಳೆಗೆ ಸೂಕ್ತ ಮಾರುಕಟ್ಟೆಯನ್ನು ಕಲ್ಪಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಮಂಡ್ಯ ತಾಲೂಕಿನ ಎಲೆಚಾಕನಹಳ್ಳಿ ಗ್ರಾಮದ ರೈತ ತಿಮ್ಮೆಗೌಡರ ಜಮೀನಿನಲ್ಲಿ ನರೇಗಾ ಯೋಜನೆಯ ಸಹಾಯದಿಂದ ಬೆಳೆಯಲಾಗಿರುವ ಕರಿಬೇವನ್ನು ನೇರವಾಗಿ ಕಾರ್ಖಾನೆಗೆ ಸರಬರಾಜು ಮಾಡಲಾಗುತ್ತಿದೆ. ಇದರಿಂದ ಉತ್ತಮ ಲಾಭ ದೊರೆಯುತ್ತಿದೆ ಎಂದು ರೈತ ಸಂತಸ ವ್ಯಕ್ತಪಡಿಸಿದ ಸಿಇಒ, ಪ್ರಗತಿಪರ ರೈತ ಲಕ್ಷ್ಮೇಗೌಡರು ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರಿನಲ್ಲಿರುವ ತಮ್ಮ 10 ಎಕರೆ ತೋಟದಲ್ಲಿ ನರೇಗಾ ಹಾಗೂ ತೋಟಗಾರಿಕಾ ಇಲಾಖೆಯ ಅನುದಾನ ಪಡೆದು ಪಪ್ಪಾಯ ಹಾಗೂ ಅಂತರ ಬೆಳೆಯಾಗಿ ದಾಳಿಂಬೆ ಬೆಳೆದಿದ್ದು, ಮಂಡ್ಯ ಜಿಲ್ಲೆಯಲ್ಲಿನ ಹಾಪ್‌ಕಾಮ್ಸ್ಗಳಿಗೆ ಕಳೆದ ಸಾಲಿನಲ್ಲಿ ಅತಿ ಹೆಚ್ಚು ಪಪ್ಪಾಯ ಸರಬರಾಜು ಮಾಡಿದ ರೈತರಾಗಿದ್ದಾರೆ ಎಂದರು.
ತೋಟಗಾರಿಕೆ ಇಲಾಖೆಯ ಉಪನಿರ್ದೇಶಕಿ ರೂಪಶ್ರೀ, ಸಹಾಯಕ ಸಾಂಖ್ಯಿಕ ಅಧಿಕಾರಿ ಮಂಜೇಶ್ ಸೇರಿದಂತೆ ಇತರೆ ಅಧಿಕಾರಿ ಹಾಗೂ ಸಿಬ್ಬಂದಿ ಹಾಜರಿದ್ದರು.