ಆಲನಹಳ್ಳಿ ಗ್ರಾ.ಪಂ.ಗೆ ಸಿಇಒ ಭೇಟಿ : ನರೇಗ ಗುರಿ ಸಾಧನೆಗೆ ನಿರ್ದೇಶನ

zp ceo visit alanahalli GP
Published on

ಮೈಸೂರು: ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ.ಎಂ.ಗಾಯತ್ರಿ ಆಲನಹಳ್ಳಿ ಗ್ರಾಮ ಪಂಚಾಯಿತಿಗೆ ಬುಧವಾರ ಭೇಟಿ ನೀಡಿ ಸರ್ಕಾರದ ಅನೇಕ ಯೋಜನೆಗಳನ್ನು ಕುರಿತು ಚರ್ಚಿಸಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಸಿಬ್ಬಂದಿಗೆ ಸಲಹೆ, ಸೂಚನೆ ನೀಡಿದರು.

ಗ್ರಾಮ ಪಂಚಾಯಿತಿಯು ನಗರ ಪ್ರದೇಶಕ್ಕೆ ಹೊಂದಿಕೊಂಡಿದ್ದು, ಬಡಾವಣೆಗಳು ಹೆಚ್ಚಿನ ಸಂಖ್ಯೆಯಲ್ಲಿ ನಿರ್ಮಾಣವಾಗುತ್ತಿದೆ. ಬಡಾವಣೆಯಲ್ಲಿ ನಿವೇಶನವನ್ನು ಪರಿವರ್ತಿಸುವಾಗ ಹೆಚ್ಚಿನ ಜಾಗೃತೆ ವಹಿಸಬೇಕು. ದಾಖಲೆಗಳ ನಿರ್ವಹಣೆ ಹಾಗೂ ಸ್ಥಳಪರಿಶೀಲನೆಯನ್ನು ಕಡ್ಡಾಯವಾಗಿ ಮಾಡಬೇಕು ಎಂದು ಸೂಚನೆ ನೀಡಿದರು.

ಗ್ರಾಮ ಪಂಚಾಯಿತಿಗೆ ವ್ಯಾಪ್ತಿಗೆ ಬರುವ ಗ್ರಾಮಗಳಲ್ಲಿ ಮೂಲಸೌಕರ್ಯದ ವ್ಯವಸ್ಥೆಗೆ ಯಾವುದೇ ತೊಡಕಾಗಬಾರದು. ನೈರ್ಮಲ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕು. ಸ್ವಚ್ಛ ಭಾರತ್‌ಮಿಷನ್ ಯೋಜನೆಯಡಿ ದೊರಕುವ ಸೌಲಭ್ಯಗಳನ್ನು ಜನರಿಗೆ ದೊರಕಿಸಿಕೊ ಡಬೇಕು ಎಂದರು.

ನರೇಗಾ ಯೋಜನೆಯಡಿ ನಿಗದಿಪಡಿಸಿರುವ ಮಾನವದಿನಗಳ ಗುರಿ ಸಾಧಿಸಬೇಕು. ಯೋಜನೆಯಡಿ ಜನರಿಗೆ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಬೇಕು. ನರೇಗಾ ಯೋಜನೆಯಡಿ ಶಾಲೆಗಳಿಗೆ ಅಗತ್ಯವಿರುವ ಶೌಚಗೃಹ, ತಡೆಗೋಡೆ, ಆಟದ ಮೈದಾನ, ಕೈತೋಟ ಅಭಿವೃದ್ಧಿಪಡಿಸಲು ಕ್ರಮವಹಿಸಬೇಕು. ಜತೆಗೆ ಶಾಲೆಗೆ ಅಗತ್ಯವಿರುವ ಮೂಲಸೌಕರ್ಯವನ್ನು ಕಲ್ಪಿಸಬೇಕು ಎಂದು ನಿರ್ದೇಶನ ನೀಡಿದರು.

ಇದೇ ಸಂದರ್ಭ ಆಲನಹಳ್ಳಿ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಕೇಂದ್ರದಲ್ಲಿ ಮಕ್ಕಳಿಗೆ ಸರಿಯಾಗಿ ಶಾಲಾ ಪೂರ್ವ ಶಿಕ್ಷಣ ನೀಡಬೇಕು. ಗಾಳಿ, ಬೆಳಕು ಉತ್ತಮವಾಗಿರಬೇಕು. ಪ್ರಮುಖವಾಗಿ ಸ್ವಚ್ಛತೆ ಕಾಯ್ದುಕೊಳ್ಳಬೇಕು. ಮಕ್ಕಳಿಗೆ ನೀಡುವ ಪೌಷ್ಟಿಕ ಆಹಾರ, ಶುದ್ಧ ಕುಡಿಯುವ ನೀರು ನೀಡಬೇಕು. ಮಕ್ಕಳ ಮೇಲೆ ಸದಾ ನಿಗವಹಿಸಬೇಕು ಎಂದು ಅಂಗನವಾಡಿ ಮೇಲ್ವಿಚಾರಕರಿಗೆ ಸೂಚಿಸಿದರು.

ಬಳಿಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಜತೆಗೆ ಸಂವಾದ ನಡೆಸಿದ ಸಿಇಒ, ಬಿಸಿಯೂಟ ವ್ಯವಸ್ಥೆ ಮತ್ತು ಮಕ್ಕಳ ಪಾಠದ ಕುರಿತು ಮಾಹಿತಿ ಪಡೆದರು. ಅಪೌಷ್ಟಿಕೆಯಿಂದ ಬಳಲುತ್ತಿರುವ ಮಕ್ಕಳನ್ನು ಗುರುತಿಸಿ ಆರೋಗ್ಯ ತಪಾಸಣೆ ಮಾಡಿಸಬೇಕು. ಮಕ್ಕಳಲ್ಲಿ ಪೌಷ್ಟಿಕಾಂಶ ಹೆಚ್ಚಿಸುವ ಹಾಲು, ಮೊಟ್ಟೆಯಂಥ ಆಹಾರ ನೀಡಬೇಕು ಎಂದು ಸಲಹೆ ನೀಡಿದರು.

ಸಂಜೀವಿನಿ ಒಕ್ಕೂಟದ ಸದಸ್ಯರಾದ ಸವಿತಾ ಅವರ ಕೈಮಗ್ಗ ನೇಕಾರಿಕೆ ಘಟಕಕ್ಕೆ ಭೇಟಿ ನೀಡಿ, ರೇಷ್ಮೆ ಸೀರೆ ಬಗ್ಗೆ ಮಾಹಿತಿ ಪಡೆದರು. ಹೆಚ್ಚಿನ ಸೀರೆ ತಯಾರಿಸಿದರೆ ಮಾರಾಟಕ್ಕೆ ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು. ನಂತರ ಒಕ್ಕೂಟದ ಸದಸ್ಯರ ಸಿದ್ಧಪಡಿಸುತ್ತಿದ್ದ ಶುದ್ಧ ಕುಡಿಯುವ ನೀರಿನ ಘಟಕಕ್ಕೂ ಭೇಟಿ ನೀಡಿ ಮಾಹಿತಿ ಪಡೆದರು.

ಈ ಸಂದರ್ಭ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಂ.ಎಸ್.ಗಿರಿಧರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಡಿ.ರವಿ, ಕಾರ್ಯದರ್ಶಿ ಸಂಜೀವ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net