ವೈದ್ಯರ ಸಂಪರ್ಕ ಪತ್ತೆಗೆ 7 ತಂಡ

web (3)
Published on

ಚಿಕ್ಕಮಗಳೂರು: ಮೂಡಿಗೆರೆ, ತರೀಕೆರೆ ಮತ್ತು ಎನ್.ಆರ್. ಪುರದಲ್ಲಿ ಬೆಳಕಿಗೆ ಬಂದಿರುವ ಕರೊನಾ ಸೋಂಕಿತರ ಪ್ರಾಥಮಿಕ ಮತ್ತು ಎರಡನೇ ಸಂಪರ್ಕದಲ್ಲಿ ಬಂದಿರುವ ವ್ಯಕ್ತಿಗಳ ಪತ್ತೆಗೆ ಜಿಲ್ಲಾಡಳಿತ ಏಳು ತಂಡ ರಚನೆ ಮಾಡಿದ್ದು, ಈ ತಂಡಗಳ ನಿರ್ವಹಣೆ ಹೊಣೆಯನ್ನು ಜಿಪಂ ಸಿಇಒ ಎಸ್.ಪೂವಿತಾ ಅವರಿಗೆ ವಹಿಸಿದೆ.

ಸೋಂಕಿತ ವೈದ್ಯರು ಕೆಲಸ ಮಾಡುತ್ತಿದ್ದ ಮೂಡಿಗೆರೆ ತಾಲೂಕು ನಂದೀಪುರ ಪ್ರಾಥಮಿಕ ಆರೋಗ್ಯ ಕೇಂದ್ರದ 11 ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಸೋಂಕಿತ ವೈದ್ಯರ ಬಳಿ ಹಾಸನ ಜಿಲ್ಲೆಯವರೂ ಚಿಕಿತ್ಸೆ ಪಡೆದಿರುವ ಮಾಹಿತಿ ಲಭ್ಯವಾಗಿದ್ದು, ಈ ಮಾಹಿತಿಯನ್ನು ಹಾಸನ ಜಿಲ್ಲಾಧಿಕಾರಿಗೆ ಕಳುಹಿಸಲಾಗಿದೆ.

ಸೋಂಕಿತರ ಸಂಪರ್ಕಕ್ಕೆ ಬಂದಿರುವ ಕೆಲವರ ಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ಈಗಾಗಲೇ ತರೀಕೆರೆಯಲ್ಲಿ ಒಂಭತ್ತು ಹಾಗೂ ಎನ್.ಆರ್.ಪುರದಲ್ಲಿ 27 ಮಂದಿಯನ್ನು ಗುರುತಿಸಿ ತಪಾಸಣೆಗೆ ಒಳಪಡಿಸಲಾಗಿದೆ. ಅಗತ್ಯವಿರುವವರನ್ನು ಸಾಂಸ್ಥಿಕ ಕ್ವಾರಂಟೈನ್​ನಲ್ಲಿ ಇಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ತಿಳಿಸಿದ್ದಾರೆ.

ಸೋಂಕಿತ ಸರ್ಕಾರಿ ವೈದ್ಯರ ಟ್ರಾವೆಲ್ ಹಿಸ್ಟ್ರಿ ಬಗ್ಗೆ ಗಮನ ಹರಿಸಲಾಗಿದ್ದು, ಈ ವೈದ್ಯ ಲಾಕ್​ಡೌನ್ ಜಾರಿಗೆ ಬರುವ ಮುನ್ನವೇ ಮಾ.6ರಂದು ಒಮ್ಮೆ ಬೆಂಗಳೂರಿಗೆ ಹೋಗಿ ಬಂದಿರುವ ಮಾಹಿತಿ ಇದೆ. ವೈದ್ಯರು ಕಳೆದ 14 ದಿನಗಳಲ್ಲಿ ಚಿಕಿತ್ಸೆ ನೀಡಿರುವ ಹೊರ ರೋಗಿ ಮತ್ತು ಒಳರೋಗಿಗಳನ್ನು ಹಾಗೂ ಅವರ ಕರ್ತವ್ಯದ ಅವಧಿ ಬಳಿಕ ಸಂಪರ್ಕಕ್ಕೆ ಬಂದವರ ಪಟ್ಟಿ ತಯಾರಿಸಲಾಗುತ್ತಿದೆ. ಹಾಸನದಿಂದಲೂ ಇವರಲ್ಲಿಗೆ ಚಿಕಿತ್ಸೆಗೆ ಬಂದವರು ಇರುವ ಕಾರಣ ಹಾಸನ ಜಿಲ್ಲಾ ಸರ್ಜನ್​ಗೆ ಚಿಕಿತ್ಸೆ ಪಡೆದವರ ಪಟ್ಟಿ ಕಳುಹಿಸಲಾಗಿದೆ ಎಂದು ತಿಳಿಸಿದರು.

ಸರ್ಕಾರದ ನಿರ್ದೇಶನದಂತೆ ಸರ್ವೆಕ್ಷಣಾ ಚಟುವಟಿಕೆಯಲ್ಲಿರುವ 100ಕ್ಕೂ ಹೆಚ್ಚು ಆರೋಗ್ಯ ನಿಗಾ ಸಿಬ್ಬಂದಿಯನ್ನು ತಪಾಸಣೆಗೆ ಒಳಪಡಿಸಿದ ಸಂದರ್ಭ ಮೂಡಿಗೆರೆಯ ವೈದ್ಯರಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಪ್ರತಿ ವಾರ ಶಸ್ತ್ರಚಿಕಿತ್ಸೆಗೆ ಒಳಗಾದ 50 ಮಂದಿ ರೋಗಿಗಳನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಹೀಗೆ ನಡೆಸಿದ ತಪಾಸಣೆ ವೇಳೆ ತರೀಕೆರೆಯ ಗರ್ಭಿಣಿಯಲ್ಲಿ ಕರೊನಾ ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜಿಲ್ಲೆಯಲ್ಲಿ ಒಂಬತ್ತು ಮಂದಿ ಸೂಪರ್ ಸ್ಪೆಷಲ್ ವೈದ್ಯರ ತಂಡವನ್ನು ರಚಿಸಲಾಗಿದ್ದು, ಅಗತ್ಯವಿದ್ದಲ್ಲಿ ಈ ತಂಡದ ಸೇವೆ ಪಡೆದುಕೊಳ್ಳಲಾಗುವುದು ಎಂದರು.

ಎರಡು ಕುಟುಂಬದ ಮಕ್ಕಳು: ಕಳೆದ 15 ದಿನಗಳಿಂದ ಉಸಿರಾಟದ ಸಮಸ್ಯೆ ಇರುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಪರೀಕ್ಷೆಗೊಳಪಡಿಸಿದ್ದೇವೆ. ಆ ರೀತಿ ಪರೀಕ್ಷೆ ನಡೆಸಿದ ವೇಳೆ ಎನ್.ಆರ್.ಪುರದ ಮಕ್ಕಳಲ್ಲಿ ಸೋಂಕು ಇರುವುದು ಪತ್ತೆಯಾಗಿದೆ. ಮುಂಬಯಿನಿಂದ ಬಂದ ಎರಡು ಕುಟುಂಬಕ್ಕೆ ಈ ಮೂರು ಮಕ್ಕಳು ಸೇರಿದ್ದು, ಇನ್ನೂ 6 ಜನರನ್ನು ಕ್ವಾರಂಟೈನ್​ಗೆ ಒಳಪಡಿಸಲಾಗಿದೆ. ತರೀಕೆರೆಯ ಕರೊನಾ ಸೋಂಕಿತ ಗರ್ಭಿಣಿಗೆ ಮೂಡಿಗೆರೆ ವೈದ್ಯರು ಚಿಕಿತ್ಸೆ ನೀಡಿಲ್ಲ ಎಂದು ಡಿಸಿ ಸ್ಪಷ್ಟಪಡಿಸಿದರು.

ಸಂರ್ಪತರನ್ನು ಗುರುತಿಸುವಲ್ಲಿ ಪ್ರಗತಿ: ಸೋಂಕಿತ ವೈದ್ಯರ ಸಂಪರ್ಕದಲ್ಲಿದ್ದವರ ಪತ್ತೆ ಕಾರ್ಯ ಮಂಗಳವಾರ ಮಧ್ಯಾಹ್ನದಿಂದ ಆರಂಭವಾಗಿದ್ದು, ಸಾಕಷ್ಟು ಪ್ರಗತಿಯಾಗಿದೆ. ವೃತ್ತಿಯಲ್ಲಿ ಈ ವೈದ್ಯರು ಹೆಸರು ಗಳಿಸಿರುವ ಕಾರಣ ಪಕ್ಕದ ಹಾಸನ ಜಿಲ್ಲೆ ಸೇರಿದಂತೆ ದೂರ ದೂರದ ಊರುಗಳಿಂದಲೂ ಚಿಕಿತ್ಸ್ಸೆಗೆ ಬರುತ್ತಿದ್ದರು. ಈ ಹಿನ್ನೆಲೆಯಲ್ಲಿ ಇರಿಸಿಕೊಂಡು ಅವರ ಸೋಂಕಿನ ಮೂಲ ಪತ್ತೆಹಚ್ಚಲಾಗುತ್ತಿದೆ. ಅವರು ಕರ್ತವ್ಯ ನಿರ್ವಹಿಸುತ್ತಿದ್ದ ನಂದಿಪುರ ಆಸ್ಪತ್ರೆಯ ಎಲ್ಲ 11 ಜನ ಸಿಬ್ಬಂದಿಯನ್ನು ಕ್ವಾರಂಟೈನ್​ನಲ್ಲಿಟ್ಟು ಪರೀಕ್ಷಿಸಲಾಗುತ್ತಿದೆ. ಅವರೊಂದಿಗೆ ಇತರೆ 15 ಜನರನ್ನು ಕ್ವಾರಂಟೈನ್​ನಲ್ಲಿ ಇರಿಸಲಾಗಿದೆ. ಇಷ್ಟಾಗಿಯೂ ಸೋಂಕಿತ ವೈದ್ಯನ ಮೂಲಕ ಇನ್ನೊಬ್ಬರಿಗೆ ಪಾಸಿಟಿವ್ ಬಂದಿರುವ ನಿದರ್ಶನವಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net