ಸಿಎಂ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಆದ್ಯತೆ ಕೊಡಿ; ಜಿಪಂ ಸಿಇಒ ಅಕ್ಷಯ ಶ್ರೀಧರ

8 HVR 2 A
Published on

ಹಾವೇರಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಬಾರಿ ಆಯವ್ಯಯದಲ್ಲಿ ಘೋಷಣೆ ಮಾಡಿರುವ ಒಂಭತ್ತು ಕಾಮಗಾರಿಗಳನ್ನು ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸುವ ಮೂಲಕ ಅತ್ಯುತ್ತಮ ಪ್ರಗತಿ ಸಾಧಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಎಂಟು ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರು ಹಾಗೂ 223 ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಅಭಿವೃದ್ಧಿ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಜಿಲ್ಲೆಯಲ್ಲಿ 223 ಗೋಮಾಳ ಅಭಿವೃದ್ದಿ, 2230 ಎಕರೆ (ಪ್ರತಿ ಗ್ರಾಮ ಪಂಚಾಯತಿಗೆ 10 ಎಕರೆ) ಬಹು ವಾರ್ಷಿಕ ಹುಲ್ಲುಗಾವಲು ಅಭಿವೃದ್ಧಿ, 9903 ವಿಪತ್ತು ನಿರ್ವಹಣೆ (ಬರಗಾಲ ತಡೆಗಟ್ಟುವಿಕೆ ಹಾಗೂ ನೆರೆಹಾವಳಿ), 340 ಶಾಂತಿಧಾಮ (ಸ್ಮಶಾನ ಅಭಿವೃದ್ಧಿಪಡಿಸುವುದು), 162 ಕೂಸಿನ ಮನೆ (ಶಿಶುಪಾಲನಾ ಕೇಂದ್ರ), 312 ವಿದ್ಯಾಧಾಮ (ಸಮಗ್ರ ಶಾಲಾ ಅಭಿವೃದ್ಧಿ ಪಡಿಸುವುದು), 24 ಗ್ರಾಮೀಣ ಸಂತೆ, 1,115 ಬೋರ್‌ವೆಲ್ ರಿಚಾರ್ಜ್ (ಕೊಳವೆಬಾವಿ ಮರುಪೂರಣ ಘಟಕ) ಹಾಗೂ 100 ಶಾಲಾ ಶೌಚಗೃಹ ನಿರ್ಮಾಣ ಗುರಿ ನೀಡಲಾಗಿದೆ. ಆಯವ್ಯಯದಲ್ಲಿ ಘೋಷಿಸಿದ ಕಾಮಗಾರಿಗಳನ್ನು ಅತಿ ಜೂರೂರು ಎಂದು ಪರಿಗಣಿಸಿ ಶೀಘ್ರವಾಗಿ ಕ್ರಿಯಾ ಯೋಜನೆ ತಯಾರಿಸಿ ಸೆ.15ರಿಂದ ಕಾಮಗಾರಿ ಪ್ರಾರಂಭಿಸಬೇಕು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಗ್ರಾಮೀಣ ಭಾಗದಲ್ಲಿ ಬೂದು ನೀರು ನಿರ್ವಹಣೆ ಯೋಜನೆಯಡಿ 684 ಗ್ರಾಮಗಳಲ್ಲಿ ಸಮುದಾಯ ಸೋಕ್ ಪಿಟ್ ನಿರ್ಮಾಣ ಮಾಡುವ ಕುರಿತು ಪ್ರಗತಿ ಪರಿಶೀಲಿಸಲಾಯಿತು. 81 ಗ್ರಾಮಗಳಲ್ಲಿ ಕಾಮಗಾರಿ ಪ್ರಾರಂಭವಾಗಿದ್ದು, 36 ಗ್ರಾಮಗಳಲ್ಲಿ ಪೂರ್ಣಗೊಂಡಿದೆ. ಉಳಿದ ಗ್ರಾಮಗಳಲ್ಲಿ ಶೀಘ್ರದಲ್ಲಿ ಪ್ರಾರಂಭಿಸಬೇಕು. ಅಕ್ಟೋಬರ್ ಮೊದಲ ವಾರದೊಳಗಾಗಿ ಎಲ್ಲವೂ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.
ಜಿ.ಪಂ.ಉಪಕಾರ್ಯದರ್ಶಿ ಎಸ್.ಬಿ.ಮುಳ್ಳಳ್ಳಿ, ಜಿ.ಪಂ.ಮುಖ್ಯ ಯೋಜನಾಧಿಕಾರಿ ಎಸ್.ವೈ.ಮೀಶಿ, ಜಿಪಂ ಮುಖ್ಯ ಲೆಕ್ಕಾಧಿಕಾರಿ ವಸಂತ ಕುಮಾರ, ಸಹಾಯಕ ಕಾರ್ಯದರ್ಶಿ ಸಿ.ಎಸ್.ಹಾಲಪ್ಪನವರಮಠ, ಜಿಲ್ಲೆಯ ಎಂಟು ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರು, 223 ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಉಪಸ್ಥಿತರಿದ್ದರು.
ಸ್ವಚ್ಛ ಭಾರತ ಯೋಜನೆ:
ಸ್ವಚ್ಛ ಭಾರತ ಮಿಷನ್ ಅಡಿ ವೈಯಕ್ತಿಕ ಶೌಚಗೃಹ ಯೋಜನೆಯಡಿ 396 ಶೌಚಗೃಹಗಳನ್ನು 15 ದಿನಗಳೊಗಾಗಿ ಪೂರ್ಣಗೊಳಿಸಲು ಎಲ್ಲ ಅಭಿವೃದ್ದಿ ಅಧಿಕಾರಿಗಳಿಗೆ ನಿರ್ದೇಶಿಸಿದರು. ಈಗಾಗಲೇ 1,490 ಫಲಾನುಭವಿಗಳಿಗೆ ಶೌಚಗೃಹ ನಿರ್ಮಾಣದ ಮೊತ್ತ ಪಾವತಿಸಲಾಗಿದೆ ಎಂದು ಸಿಇಒ ತಿಳಿಸಿದರು.
843 ಸಕಾಲ ಬಾಕಿ :
ಸಕಾಲ ಯೋಜನೆಯಡಿ 843 ಬಾಕಿ ಪ್ರಕರಣಗಳಿದ್ದು, ಎಲ್ಲವೂ ಇ-ಸ್ವತ್ತು ಅಡಿ ಬರುವುದರಿಂದ ನಿಗದಿತ ಸಮಯದೊಳಗಾಗಿ ವಿಲೇವಾರಿ ಮಾಡಲು ಎಲ್ಲ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸಿಇಒ ಅಕ್ಷಯ ಸೂಚಿಸಿದರು.
20 ರೂ.ಗೆ 2 ಲಕ್ಷ ವಿಮೆ
ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಜೀವನ ಜ್ಯೋತಿ ಭಿಮಾ ಯೋಜನೆ ಅಡಿ ಪ್ರತಿ ವರ್ಷ 436 ರೂ. ಪಾವತಿಸಿದಲ್ಲಿ 2 ಲಕ್ಷ ರೂ. ಜೀವವಿಮೆ, ಪಿಎಂ ಸುರಕ್ಷಾ ಜೀವನ ಭಿಮಾ ಯೋಜನೆಯಡಿ ಪ್ರತಿ ವರ್ಷ 20 ರೂ. ಪಾವತಿಸಿದರೆ 2 ಲಕ್ಷ ರೂ. ಜೀವವಿಮೆ ದೊರೆಯುತ್ತದೆ. ಎಸ್‌ಬಿಐ ಆಕ್ಸಿಡೆಂಟಲ್ ಇನ್ಸೂರೆನ್ಸ್ ಯೋಜನೆಯಡಿ 1,000 ರೂ. ಪ್ರತಿ ವರ್ಷ ಪಾವತಿಸಿದರೆ 20 ಲಕ್ಷ ರೂ. ಜೀವವಿಮೆ ದೊರೆಯುತ್ತದೆ. ಜಿಪಂ, ತಾಪಂ ಹಾಗೂ ಗ್ರಾಪಂ ಅಧಿಕಾರಿಗಳು, ಸಿಬ್ಬಂದಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಿಇಒ ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net