ತಾಲೂಕು ಮಟ್ಟದಲ್ಲಿ ಸೈಕ್ಲಾಥಾನ್ ಆಯೋಜಿಸಿ: ಜಿಪಂ ಸಿಇಒ ಕೆ.ಆರ್.ನಂದಿನಿ ಸೂಚನೆ

ZP CEO meeting on Womens Day Mandya
Published on

ಮಂಡ್ಯ: ಮಹಿಳಾ ದಿನಾಚರಣೆ ಅಂಗವಾಗಿ ಪ್ರತಿ ತಾಲೂಕು ಮಟ್ಟದಲ್ಲಿ ವಿಷಯಾಧಾರಿತ ಸೈಕ್ಲಾಥಾನ್ ಕಾರ್ಯಕ್ರಮ ಆಯೋಜಿಸಲು ಸಿದ್ಧತೆ ಮಾಡಿಕೊಳ್ಳಿ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಸೂಚಿಸಿದರು.

ನಗರದ ಜಿಪಂ ಕಚೇರಿಯ ಮಿನಿ ಸಭಾಂಗಣದಲ್ಲಿ ಆಯೋಜಿಸಿದ್ದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸೈಕ್ಲಾಥಾನ್ ಮೂಲಕ ಹೆಣ್ಣು ಭ್ರೂಣ ಹತ್ಯೆಯ ದುಷ್ಪರಿಣಾಮ, ಬಾಲ್ಯ ವಿವಾಹದ ದುಷ್ಪರಿಣಾಮ, ಮಹಿಳೆಯರು ಋತುಚಕ್ರದಲ್ಲಿ ವಹಿಸಬೇಕಾದ ಸ್ವಚ್ಛತೆ, ಪೌಷ್ಟಿಕ ಆಹಾರ ಸೇವನೆ, ಆರ್ಥಿಕ ಅಭಿವೃದ್ಧಿಯಲ್ಲಿ ಮಹಿಳೆಯ ಪಾತ್ರ, ಸಾಧನೆಯ ಉತ್ತುಂಗದಲ್ಲಿರುವ ಮಹಿಳೆಯರು ಸೇರಿದಂತೆ ವಿವಿಧ ವಿಷಯ ಕುರಿತು ಜಾಗೃತಿ ಮೂಡಿಸಲಾಗುವುದು ಎಂದರು.

ಏ.4ರೊಳಗಾಗಿ ತಾಲೂಕು ಮಟ್ಟದ ಕಾರ್ಯಕ್ರಮ ಆಯೋಜಿಸಿ. ಕ್ರಿಕೆಟ್ ಪಂದ್ಯಾವಳಿ, ಹಗ್ಗ ಜಗ್ಗಾಟ, ರಂಗೋಲಿ, ತರಕಾರಿ ಕೆತ್ತನೆ, ಚರ್ಚಾ ಸ್ಪರ್ಧೆ, ಆಶು ಭಾಷಣ ಸ್ಪರ್ಧೆ ಆಯೋಜಿಸಿ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಏ.7 ಅಥವಾ 8ರಂದು ಏರ್ಪಡಿಸಿ. ಆರೋಗ್ಯ ಇಲಾಖೆ ವತಿಯಿಂದ ತಾಲೂಕುವಾರು ವಿಚಾರ ಸಂಕಿರಣ ಕಾರ್ಯಕ್ರಮ ಹಾಗೂ ಜಿಲ್ಲಾಮಟ್ಟದಲ್ಲಿ ಹೆಣ್ಣು ಭ್ರೂಣ ಹತ್ಯೆ ದುಷ್ಪರಿಣಾಮ ಕುರಿತು ನಾಟಕ ಆಯೋಜಿಸುವಂತೆ ತಿಳಿಸಿದರು.

ಎನ್‌ಆರ್‌ಎಲ್ಎಂ ಯೋಜನೆಯಡಿ ಕಸ ವಿಲೇವಾರಿ ವಾಹನ ಚಲಾಯಿಸುವ ಚಾಲಕಿ, ಆಶಾ ಕಾರ್ಯಕರ್ತೆ, ಅಂಗನವಾಡಿ ಕಾರ್ಯಕರ್ತೆ, ಪಶು ಸಖಿ, ವಾಟರ್ ವುಮೆನ್, ಕೃಷಿ ಸಖಿ ವಿಭಾಗದಲ್ಲಿ ಉತ್ತಮವಾಗಿ ಸೇವೆ ಸಲ್ಲಿಸಿರುವವರನ್ನು ಗುರುತಿಸಿ ಸನ್ಮಾನಿಸಲು ಸಿದ್ಧತೆ ಮಾಡಿಕೊಳ್ಳಬೇಕು ಎಂದು ಹೇಳಿದರು.

ಸಭೆಯಲ್ಲಿ ಜಿಪಂ ಉಪಕಾರ್ಯದರ್ಶಿ ಚಂದ್ರು, ಯೋಜನಾ ನಿರ್ದೇಶಕ ರವೀಂದ್ರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಜಮೂರ್ತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಮಧುಶ್ರೀ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ಎಸ್.ಎಚ್.ನಿರ್ಮಲಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net