

ಮಂಡ್ಯ: ಜಿಲ್ಲೆಯಲ್ಲಿ ಡೆಂಘೆ ರೋಗ ಪ್ರಕರಣಗಳು ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ನಿಯಂತ್ರಣ ಮಾಡಲು ಅಗತ್ಯ ಕ್ರಮವಹಿಸಿ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್ ಸೂಚನೆ ನೀಡಿದರು.
ನಗರದ ಜಿಪಂ ಕಚೇರಿ ಮಿನಿ ಸಭಾಂಗಣದಲ್ಲಿ ವೈದ್ಯಾಧಿಕಾರಿಗಳು, ತಾಲೂಕು ಪಂಚಾಯಿತಿ ಇಒ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳೊಂದಿಗೆ ಆಯೋಜಿಸಿದ್ದ ಡೆಂಘೆ ನಿಯಂತ್ರಣ ಕುರಿತು ವಿಡಿಯೋ ಸಂವಾದದಲ್ಲಿ ಮಾತನಾಡಿದ ಅವರು, 2024ನೇ ಸಾಲಿನಲ್ಲಿ ಜೂನ್‌ವರೆಗೆ ಜಿಲ್ಲೆಯಲ್ಲಿ 189 ಡೆಂಘೆ ಪ್ರಕರಣ ದಾಖಲಾಗಿದೆ. ಮಂಡ್ಯ ತಾಲೂಕಿನಲ್ಲಿ 89, ಮದ್ದೂರಿನಲ್ಲಿ 34, ಮಳವಳ್ಳಿಯಲ್ಲಿ 14, ಪಾಂಡವಪುರದಲ್ಲಿ 18, ಶ್ರೀರಂಗಪಟ್ಟಣದಲ್ಲಿ 16, ಕೆ.ಆರ್.ಪೇಟೆಯಲ್ಲಿ 9 ಮತ್ತು ನಾಗಮಂಗಲ ತಾಲೂಕಿನಲ್ಲಿ 9 ಪ್ರಕರಣ ದಾಖಲಾಗಿವೆ. ಸಾರ್ವಜನಿಕರು ಮುನ್ನೆಚ್ಚರಿಕಾ ಕ್ರಮ ವಹಿಸಿ ಎಂದರು.
ಸ್ಥಳೀಯ ಸಂಸ್ಥೆಗಳು ಕಸ ವಿಲೇವಾರಿ ಮಾಡುವ ವಾಹನದಲ್ಲಿ ದಿನವು ಡೆಂಘೆ ನಿಯಂತ್ರಣದ ಬಗ್ಗೆ ನೀಡಿರುವ ಆಡಿಯೋ ತುಣುಕುಗಳನ್ನು ಪ್ರಸಾರ ಪಡಿಸುವುದರ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಗುಂಡಿ ಹಾಗೂ ತಗ್ಗುಗಳನ್ನು ಮುಚ್ಚಿಸುವುದರ ಮೂಲಕ ನೀರು ಸಂಗ್ರಹವಾಗದಂತೆ ತಡೆಗಟ್ಟಬೇಕು. ಸಾರ್ವಜನಿಕ ನಲ್ಲಿ ಹಾಗೂ ಕೊಳವೆ ಬಾವಿಗಳಿಂದ ನೀರು ಸರಾಗವಾಗಿ ಹರಿದು ಹೋಗುವಂತೆ ಸೂಕ್ತವಾದ ವ್ಯವಸ್ಥೆ ಮಾಡುವುದರ ಜತೆಗೆ ಈಗಾಗಲೇ ಇರುವ ಚರಂಡಿಗಳಲ್ಲಿ ಹುದುಗಿರುವ ಹೂಳನ್ನು ಎತ್ತಿ ನೀರು ಸರಾಗವಾಗಿ ಹರಿಯುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.
ನಿಯಮಿತ ಹಾಗೂ ಸಮರ್ಪಕ ನೀರು ಸರಬರಾಜಾಗುವ ಪೈಪುಗಳು ಸೋರದಂತೆ ನೋಡಿಕೊಳ್ಳಬೇಕು. ಕೊಳವೆ ಬಾವಿ ಹಾಗೂ ನಲ್ಲಿ ಪೈಪ್‌ಗಳು ಒಳಚರಂಡಿ ಜಾಗದಿಂದ ದೂರದಲ್ಲಿರುವಂತೆ ನಿರ್ಮಿಸಬೇಕು. ಮೇಲ್ಛಾವಣಿಯ ತೊಟ್ಟಿ ಹಾಗೂ ನೀರು ಸರಬರಾಜು ಮಾಡುವ ತೊಟ್ಟಿಗಳನ್ನು ಭದ್ರವಾದ ಮುಚ್ಚಳದಿಂದ ಮುಚ್ಚುವ ವ್ಯವಸ್ಥೆ ಮಾಡಬೇಕು. ಆರೋಗ್ಯ ಇಲಾಖೆ ಜತೆ ನಿರಂತರ ಸಂಪರ್ಕದಲ್ಲಿದ್ದು, ಗ್ರಾಮದ ನೈರ್ಮಲ್ಯತೆ ಹಾಗೂ ಸಾಂಕ್ರಾಮಿಕ ರೋಗಗಳ ಪರಿಸ್ಥಿತಿ ಮತ್ತು ಹತೋಟಿಯ ಬಗ್ಗೆ ಚರ್ಚಿಸಬೇಕು ಎಂದರು.
ಗ್ರಾಮ ಪಂಚಾಯತಿಗಳು ಸೊಳ್ಳೆ ಉತ್ಪತ್ತಿ ತಾಣಗಳ ನಿವಾರಣೆ ಹಾಗೂ ಗ್ರಾಮ ನೈರ್ಮಲ್ಯ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ನಡೆಸಬೇಕು. ಶಿಕ್ಷಣ ಇಲಾಖೆಗಳಲ್ಲಿ ಶಾಲಾ ಪ್ರಾರ್ಥನಾ ವೇಳೆಯಲ್ಲಿ ಡೆಂಘೆ ನಿಯಂತ್ರಣದ ಕುರಿತು ಕರಪತ್ರಗಳನ್ನು ವಿದ್ಯಾರ್ಥಿಗಳ ಹತ್ತಿರ ಓದಿಸಬೇಕು. ಶಾಲೆಗಳಲ್ಲಿ ಆರೋಗ್ಯ ಶಿಕ್ಷಣ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳಬೇಕು. ಸೊಳ್ಳೆಗಳಿಂದ ಹರಡುವ ಮತ್ತು ಇತರೆ ಸಾಂಕ್ರಾಮಿಕ ರೋಗಗಳ ಮತ್ತು ಅವುಗಳ ನಿಯಂತ್ರಣ ಬಗ್ಗೆ ಜಾಗೃತಿ ಮೂಡಿಸಿ ಎಂದರು.
ಶಾಲಾ ಆವರಣವನ್ನು ಸೊಳ್ಳೆ ಉತ್ಪತ್ತಿ ಮುಕ್ತವಾಗಿಡುವುದಲ್ಲದೇ ಸ್ವಚ್ಛತೆ ಹಾಗೂ ನೈರ್ಮಲ್ಯತೆ ಕಾಪಾಡಬೇಕು. ಶಾಲೆಯಲ್ಲಿ ಯಾವುದೇ ಜ್ವರ ಪ್ರಕರಣವಿದ್ದಲ್ಲಿ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ತಿಳಿಸಬೇಕು. ಸಾಮೂಹಿಕ ಜ್ವರ ಪ್ರಕರಣಗಳು ಕಂಡುಬಂದಲ್ಲಿ ತಪ್ಪದೆ ತಾಲೂಕು ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ತಿಳಿಸಬೇಕು. ಅಂಗನವಾಡಿ ಕಾರ್ಯಕರ್ತರು ವೈಯುಕ್ತಿಕ ರಕ್ಷಣೆ ಮತ್ತು ಪರಿಸರ ನೈರ್ಮಲ್ಯದ ಬಗ್ಗೆ ಸಮುದಾಯದಲ್ಲಿ ಜಾಗೃತಿ ಮೂಡಿಸಬೇಕು. ಅಂಗನವಾಡಿ ಆವರಣವನ್ನು ಸೊಳ್ಳೆ ಉತ್ಪತ್ತಿ ಮುಕ್ತವಾಗಿಡುವುದೇ ಅಲ್ಲದೆ ಸ್ವಚ್ಛತೆ ಹಾಗೂ ನೈರ್ಮಲ್ಯತೆಯಿಂದ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಜಿಪಂ ಉಪಕಾರ್ಯದರ್ಶಿ ಆನಂದ್, ಬಿಇಒ ಮಹದೇವು ಇದ್ದರು.