

ಮಂಡ್ಯ: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಜಿಲ್ಲೆಯಲ್ಲಿ ಹರ್ ಘರ್ ತಿರಂಗ ಅಭಿಯಾನ ಹಮ್ಮಿಕೊಳ್ಳಲಿದೆ. ಅದರಂತೆ ಈ ಕಾರ್ಯಕ್ರಮ ಅದ್ಧೂರಿಯಾಗಿ ಆಚರಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಭಿಯಾನದ ಸಂಬಂಧ ತಿರಂಗಾ ಯಾತ್ರೆ ಮತ್ತು ಮ್ಯಾರಥಾನ್ ಕಾರ್ಯಕ್ರಮಗಳನ್ನು ಆಯೋಜಿಸಲು ಎಲ್ಲ ತಾಪಂ ಇಒ, ಸ್ಥಳೀಯ ಸಂಸ್ಥೆ ಮುಖ್ಯಾಧಿಕಾರಿ ಸಿದ್ಧತೆ ಮಾಡಿಕೊಳ್ಳಬೇಕು ಎಂದರು.
ಜಿಲ್ಲಾದ್ಯಂತ ವ್ಯಾಪಕ ಪ್ರಚಾರ ಮಾಡಿ ಮನೆ, ಸರ್ಕಾರಿ ಕಚೇರಿ, ಶಾಲೆ, ಕಾಲೇಜಿನ ಮೇಲೆ ರಾಷ್ಟ್ರಧ್ವಜವನ್ನು ನಿಯಮಾನುಸಾರ ಹಾರಿಸಬೇಕು. ಜತೆಗೆ ಆ ಪೋಟೋಗಳನ್ನು ವೆಬ್‌ಸೈಟ್ hargartiranga.com ನಲ್ಲಿ ಕಡ್ಡಾಯವಾಗಿ ಅಪ್‌ಲೋಡ್ ಮಾಡಬೇಕು. ಅಂತೆಯೇ ಪ್ರತಿ ಶಾಲೆ, ಕಾಲೇಜು ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಜಾಥಾ ಹಮ್ಮಿಕೊಳ್ಳಲಾಗುವುದು. ಸೈಕಲ್ ಜಾಥಾ, ಬೈಕ್, ಪಾರಂಪರಿಕ ನಡಿಗೆ ಹಾಗೂ ಗಾಳಿಪಟ ಹಾರಿಸುವ ಕಾರ್ಯಕ್ರಮವನ್ನು ಆಯೋಜಿಸುವ ಬಗ್ಗೆ ಕ್ರಮವಹಿಸಿ. ತಿರಂಗಾ ಸಂಗೀತಾ ಕಾರ್ಯಕ್ರಮವನ್ನು ವಿದ್ಯಾರ್ಥಿಗಳ ಮುಖಾಂತರ ನಡೆಸಬೇಕು ಎಂದು ತಿಳಿಸಿದರು.
ಸೈನಿಕರಿಗೆ ಮನೆಗೆ ತೆರಳಿ ಸನ್ಮಾನ ಮಾಡುವುದಕ್ಕೆ ಆಯಾಯ ತಾಲೂಕಿನ ತಹಸೀಲ್ದಾರ್ ಕ್ರಮ ವಹಿಸಬೇಕು. ವಿವಿಗಳಲ್ಲೂ ಹರ್ ಘರ್ ತಿರಂಗ ಅಭಿಯಾನ ಆಯೋಜಿಸಬೇಕು. ಸರ್ಕಾರಿ ಕಚೇರಿ, ನಿಗಮ ಮಂಡಳಿ, ಪ್ರಾಧಿಕಾರ ಹಾಗೂ ಇತರ ಕಾರ್ಯಾಲಯಗಳು, ಶಾಲಾ ಕಾಲೇಜಿನಲ್ಲಿ ಪ್ರತಿಜ್ಞಾ ವಿಧಿ ಸ್ವೀಕಾರ ಮಾಡಬೇಕು. ಸೌಟ್ಸ್ ಮತ್ತು ಗೈಡ್ಸ್ ಹಾಗೂ ಎನ್‌ಸಿಸಿ ವಿದ್ಯಾರ್ಥಿಗಳ ತಂಡದಿಂದ ತಿರಂಗಯಾತ್ರೆ ನಡೆಸಬೇಕು. ವಿವಿಧ ಸ್ಪರ್ಧೆ ಹಾಸ್ಟೆಲ್ ವಿದ್ಯಾರ್ಥಿಗಳಿಂದ ಆಶುಭಾಷಣ, ಚರ್ಚೆ, ಪ್ರಬಂಧ, ರಂಗೋಲಿ ಹಾಗೂ ಸಂಬಂಧಿತ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಅದರ ಫೋಟೋಗಳನ್ನು ವೆಬ್‌ಸೈಟ್‌ನಲ್ಲಿ hargartiranga.com ಅಪ್‌ಲೋಡ್ ಮಾಡಬೇಕು ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ತಹಸೀಲ್ದಾರ್ ಡಾ.ಶಿವಕುಮಾರ್ ಬಿರಾದರ್, ಡಿಡಿಪಿಐ ಎಚ್.ಶಿವರಾಮೇಗೌಡ, ಬಿಇಒ ಮಹದೇವು ಇತರರಿದ್ದರು.